ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಹೇಗೆ?: ಖರ್ಗೆ
ಬಿಜೆಪಿ ಎಲ್ಲೆಡೆ ಸೋಲುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಘೋಷಣೆಯ ಹಿಂದಿನ ತಾರ್ಕಿಕತೆಯೇನು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ (ಮೇ 24) ಪ್ರಶ್ನಿಸಿದ್ದಾರೆ.
ಅವರ ಪ್ರಕಾರ,ʻ ಇಂಡಿಯ ಒಕ್ಕೂಟಕ್ಕೆ ಉತ್ತಮ ವಾತಾವರಣವಿದೆ ಮತ್ತು ಅವರು ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳಿವೆ,ʼ.
ಬಿಜೆಪಿಯನ್ನು ನಿಲ್ಲಿಸಬಹುದು: ಹುಟ್ಟೂರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ʻ ಇದು ಜನರು ಮತ್ತು ಪ್ರಧಾನಿ ಮೋದಿ ನಡುವಿನ ಚುನಾವಣೆ. ಏಕೆಂದರೆ, ಜನರು ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳದಿಂದ ಜನರು ಕಂಗಾಲಾಗಿದ್ದಾರೆ. ಪ್ರಜಾಪ್ರ ಭುತ್ವ ಮತ್ತು ಸಂವಿಧಾನದ ಮೇಲೆ ದೊಡ್ಡ ದಾಳಿ ನಡೆಯುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಬಿಜೆಪಿ ಅಧಿಕಾರ ನಡೆಸುತ್ತಿದೆ. ಇದರಿಂದ ಜನ ಅಸಮಾಧಾನಗೊಂಡಿದ್ದು, ಇಂಡಿಯ ಒಕ್ಕೂಟವನ್ನು ಬೆಂಬಲಿಸುತ್ತಿದ್ದಾರೆ; ಹೀಗಾಗಿ, ಮೈತ್ರಿ ಕೂಟಕ್ಕೆ ಉತ್ತಮ ಅವಕಾಶವಿದೆ,ʼ ಎಂದು ಹೇಳಿದರು.
ʻಇಂಡಿಯ ಒಕ್ಕೂಟ ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ಸಾಮರ್ಥ್ಯ ಒಕ್ಕೂಟಕ್ಕಿದೆ. ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ನಿರ್ಧರಿಸಲಾಗುವುದು,ʼ ಎಂದು ಹೇಳಿದರು.
ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ: ಇಂಡಿಯ ಒಕ್ಕೂಟ ಎಷ್ಟು ಸ್ಥಾನ ಪಡೆಯುತ್ತದೆ ಎಂದು ಕೇಳಿದಾಗ, ನಿಖರ ಸಂಖ್ಯೆಯನ್ನುಹೇಳಲಾಗದು ಎಂದರು. ʻರಾಜಕೀಯದಲ್ಲಿ ಇಂತಹ ಲೆಕ್ಕಾಚಾರ ಅಪರೂಪ. ಬಿಜೆಪಿ ಎಲ್ಲ ರಾಜ್ಯಗಳಲ್ಲೂ ಸ್ಥಾನ ಕಳೆದುಕೊಳ್ಳುತ್ತಿದೆ. ಎಲ್ಲ ಕಡೆಯೂ ಸೋತಿರುವಾಗ, ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಪಡೆಯುವುದು ಹೇಗೆ? ಉದಾಹರಣೆಗೆ, ಕರ್ನಾಟಕದಲ್ಲಿ 2019ರಲ್ಲಿ ನಮಗೆ ಒಂದು ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ನಾಲ್ಕು ಸ್ಥಾನ ಗೆಲ್ಲಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇದು ಹೆಚ್ಚಳವೇ ಅಥವಾ ಕಡಿಮೆಯೇ?,ʼ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತೆಲಂಗಾಣದಲ್ಲಿ 2019ರಲ್ಲಿ ಎರಡು ಸ್ಥಾನ ಪಡೆದಿತ್ತು.ಅಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸ ಲಿದೆ. ಮೈತ್ರಿಕೂಟದ ಜೊತೆಗಾರ ಡಿಎಂಕೆ ಅಖಂಡವಾಗಿದೆ. ಕೇರಳದಲ್ಲಿ ಹೆಚ್ಚು ಸೀಟು ಪಡೆಯುತ್ತೇವೆ. ಮಹಾರಾಷ್ಟ್ರದಲ್ಲಿ ‘ಅಗಾಡಿ’ ಗೆ ಶೇ.50ಕ್ಕಿಂತ ಹೆಚ್ಚು ಸ್ಥಾನ ಸಿಗಲಿದೆ,ʼ ಎಂದು ಖರ್ಗೆ ಹೇಳಿದರು.
ʻರಾಜಸ್ಥಾನದಲ್ಲಿ ನಾವು ಶೂನ್ಯ ಸಂಪಾದನೆ ಮಾಡಿದ್ದೆವು. ಈ ಬಾರಿ ಏಳರಿಂದ ಎಂಟು ಸೀಟು ಪಡೆಯಲಿದ್ದೇವೆ. ಮಧ್ಯಪ್ರದೇಶದಲ್ಲಿ ಎರಡು ಸ್ಥಾನ ಗೆದ್ದಿದ್ದೆವು. ಅಲ್ಲಿಯೂ ನಮ್ಮ ಸಂಖ್ಯೆ ಹೆಚ್ಚುತ್ತದೆ. ಛತ್ತೀಸ್‌ಗಢದಲ್ಲಿಯೂ ನಾವು ಗಳಿಸುತ್ತಿದ್ದೇವೆ. ಬಿಜೆಪಿ 100 ಪರ್ಸೆಂಟ್ ಇದ್ದಲ್ಲಿ ಪಕ್ಷದ ಸಂಖ್ಯೆ ಕಡಿಮೆಯಾಗಲಿದೆ. ಅವರು ಯಾವ ಆಧಾರದ ಮೇಲೆ (400 ಪಾರ್) ಎನ್ನುತ್ತಿದ್ದಾರೆಂದು ನನಗೆ ತಿಳಿದಿಲ್ಲ,ʼಎಂದು ಆಶ್ಚರ್ಯಪಟ್ಟರು.