ಧ್ರುವ ರಾಥಿಯಂಥವರು ಬಿಜೆಪಿಯನ್ನು ಅದರದ್ದೇ ಆಟದಲ್ಲಿ ಹೇಗೆ ಎದುರಿಸಿದರು?
x

ಧ್ರುವ ರಾಥಿಯಂಥವರು ಬಿಜೆಪಿಯನ್ನು ಅದರದ್ದೇ ಆಟದಲ್ಲಿ ಹೇಗೆ ಎದುರಿಸಿದರು?

ಧ್ರುವ ರಾಥಿ ಅವರಂಥ ಸಾಮಾಜಿಕ ಮಾಧ್ಯಮದ ತಾರೆಗಳು ಸಾಂಪ್ರದಾಯಿಕ ಮಾಧ್ಯಮದ ಕೆಲಸವನ್ನು ಮಾಡಿದರು; ಚುನಾವಣೆ ಸಮಯದಲ್ಲಿ ಸರ್ಕಾರವನ್ನು ವಿಶೇಷವಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರಂತರವಾಗಿ ಪ್ರಶ್ನಿಸಿದರು. 2014 ಮತ್ತು 2019 ರಲ್ಲಿ ಬಿಜೆಪಿ ಮಾಡಿದಂತೆ ಜನರಿಗೆ ಮಾಹಿತಿ ನೀಡಲು ಮತ್ತು ಪ್ರಭಾವ ಬೀರಲು ತಂತ್ರಜ್ಞಾನವನ್ನು ಬಳಸಿಕೊಂಡರು; ಸಾಂಪ್ರದಾಯಿಕ ಮಾಧ್ಯಮ ಮತ್ತು ವಿರೋಧ ಪಕ್ಷದ ಪಾತ್ರಗಳನ್ನು ನಿರ್ವಹಿಸಿದರು.


ನಿರ್ಗಮನ ಸಮೀಕ್ಷೆಗಳನ್ನು ನಂಬುವುದಾದರೆ , ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲ್ಲಲಿದೆ. ಆದರೆ, 2024 ರ ಸಾರ್ವಜನಿಕ ಚುನಾವಣೆಯಲ್ಲಿ ಯೂಟ್ಯೂಬ್ ಚಾನೆಲ್‌ ಹೊಂದಿರುವ ರಾಜಕೀಯ ಪ್ರಭಾವ ಬೀರಬಲ್ಲ ವ್ಯಕ್ತಿಗಳು ಕೇಸರಿ ಪಕ್ಷದ ನಿದ್ದೆ ಕೆಡಿಸಿದರು; ರಾಜಕೀಯ ಸಂವಾದವನ್ನು ಮುನ್ನಡೆಸಿದರು.

ಸಾಮಾಜಿಕ ಮಾಧ್ಯಮದ ಈ ಪ್ರಭಾವಿಗಳು ಮೋದಿ ಅನುಯಾಯಿಗಳ ಕುರುಡು ಆರಾಧನೆ ವಿರುದ್ಧ ಆಕ್ರಮಣಕಾರಿ ನಿರೂಪಣೆಗಳನ್ನು ಮುಂದೊತ್ತುವ ಮೂಲಕ ಜನರ ಕಣ್ಣುಸೆಳೆದರು, ಆಡಳಿತವನ್ನು ಅಶಾಂತಗೊಳಿಸಿದರು ಮತ್ತು ಉದಾರವಾದಿಗಳಲ್ಲಿ ಭರವಸೆ ಮೂಡು ವಂತೆ ಮಾಡಿದರು.ಇವರಲ್ಲಿ ಒಬ್ಬರಾದ ಧ್ರುವ್ ರಾಥಿ(29) ಅವರು ಜೂನ್ 2 ರಂದು 21 ದಶಲಕ್ಷ ಯುಟ್ಯೂಬ್ ಚಂದಾದಾರರನ್ನು ಹೊಂದಿದ್ದರು. ಇದು ಮೋದಿಯವರ 23 ದಶಲಕ್ಷ ಹಿಂಬಾಲಕರಿಗೆ ಹೋಲಿಸಿದರೆ, ಕೇವಲ ಎರಡು ದಶಲಕ್ಷ ಕಡಿಮೆ.

ನೆಹರೂ ವರ್ಸಸ್ ಮೋದಿ: ಗುರುವಾರ (ಮೇ 30) ಸಂಜೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮೋದಿ 45 ಗಂಟೆಗಳ ಧ್ಯಾನ ಪ್ರಾರಂಭಿಸಿದಾಗ , ರಾಥಿ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದರು. ಇತ್ತೀಚೆಗೆ ಚುನಾವಣೆ ಸಭೆಯಲ್ಲಿ ಪ್ರಧಾನಿ ಹೇಳಿದ 'ಭಾರತ ಮಾತನಾಡಿದಾಗ, ಇಡೀ ಜಗತ್ತು ಕೇಳುತ್ತದೆ,ʼ ಎಂಬ ಹೇಳಿಕೆಯನ್ನು ಛಿದ್ರಗೊಳಿಸಿದರು.

ವಿಡಿಯೋದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಮೋದಿ ಅವರೊಂದಿಗೆ ಹೋಲಿಸಲಾಗಿದ್ದು, ಬಿಜೆಪಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಸ್ಥಾನದ ಬಗ್ಗೆ ಭಾರತೀಯರ ಹೃದಯ ತುಂಬಿಬರುವಂತೆ ಮಾಡಲು ಬಳಸಿರುವ ಈ 'ನಿಂಜಾ ತಂತ್ರ' ಹೇಗೆ ಸಂಪೂರ್ಣ ಠಕ್ಕುತನ ಎಂದು ವೀಕ್ಷಕರಿಗೆ ವಿವರಿಸುತ್ತಾರೆ.

ʻಭಾರತ ವಿಶ್ವಗುರು | ಪಿಎಂ ಮೋದಿ ವರ್ಸಸ್ ಪಿಎಂ ನೆಹರೂʼ ಎಂಬ ಶೀರ್ಷಿಕೆಯ ಈ ವಿಡಿಯೋದಲ್ಲಿ ವಾಟ್ಸಾಪ್ ಮತ್ತು 'ಸರ್ಕಾರ ಪರ ಮಾಧ್ಯಮಗಳು' ಪ್ರಸಾರ ಮಾಡುವ ಸುಳ್ಳನ್ನು ಹಿಂದಿನ ಸುದ್ದಿ ತುಣುಕುಗಳು ಮತ್ತು ರೆಕಾರ್ಡಿಂಗ್‌ಗಳ ಮೂಲಕ ಬಹಿರಂಗಗೊಳಿಸಿ, 'ನೈಜ ಸತ್ಯ'ವನ್ನು ವಿವರಿಸುತ್ತದೆ; ವಿಶ್ವದಲ್ಲಿ ಭಾರತದ ಚಿತ್ರಣವನ್ನು ಬದಲಿಸಿದವರು ಮೋದಿ ಅಲ್ಲ. ಬದಲಾಗಿ, ನೆಹರು ಎಂದು ಸೂಚಿಸುತ್ತದೆ. ನೆಹರು ಅವರ ಅಲಿಪ್ತ ನೀತಿಯನ್ನು ವಿಶ್ವ ನಾಯಕರು ಹೇಗೆ ಮೆಚ್ಚಿಕೊಂಡಿದ್ದರು ಮತ್ತು ಹೇಗೆ ಈ ರಾಜನೀತಿಜ್ಞ ಮೋದಿಗಿಂತ ಮುಂಚೆಯೇ ಯೆಹೂದಿ ಮೆನುಹಿನ್ ಅವರಂತಹ ವಿಶ್ವ ಸಂಗೀತಗಾರನಿಗೆ ಯೋಗವನ್ನುಪರಿಚಯಿಸಿದ್ದರು ಎಂದು ವಿವರಿಸುತ್ತದೆ. ಈ ವಿಡಿಯೋ ಯುಟ್ಯೂಬ್‌ನಲ್ಲಿ 10 ದಶಲಕ್ಷ ವೀಕ್ಷಣೆ ಮತ್ತು 1 ದಶಲಕ್ಷ ಲೈಕ್‌ಗಳನ್ನು ಪಡೆಯಿತು.

ಪರ್ಯಾಯ ಮಾಧ್ಯಮ?: ಮೆಕ್ಯಾನಿಕಲ್ ಇಂಜಿನಿಯರ್ ಆದ ರಾಥಿ, ಟ್ರಾವೆಲ್ ವ್ಲಾಗರ್ ಆಗಿ ವೃತ್ತಿ ಪ್ರಾರಂಭಿಸಿದರು. ಅಣ್ಣಾ ಹಜಾರೆ ಅವರ ಪ್ರತಿಭಟನೆ ನಂತರ 2011 ರಲ್ಲಿ ಅವರು ರಾಜಕೀಯದತ್ತ ಆಕರ್ಷಿತರಾದರು ಮತ್ತು ರಾಜಕೀಯ ಕಥನಗಳನ್ನು ರಚಿಸಲಾರಂಭಿಸಿದರು. 2019 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಮಾಧ್ಯಮದ ʻರಾಜಿ ಮನೋಭಾವʼ ಕುರಿತು ಪತ್ರಕರ್ತರು ಅವರ ಸಂದರ್ಶನ ಮಾಡಿದ್ದರು. ಈ ನಂತರ ಅವರ ಜನಪ್ರಿಯತೆ ಬೆಳೆದಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ 'ದೇಶದ ಪ್ರಧಾನ ಮಂತ್ರಿಯ ಅಸಾಧಾರಣ ವಿಮರ್ಶಕ' ಎಂದು ಪರಿಗಣಿಸಲ್ಪಟ್ಟಿರುವ ಅವರು ಯು ಟ್ಯೂಬ್‌ ಮೂಲಕ ನಡೆಸುವ ದಾಳಿಯು ಯಾವುದೇ ವಿರೋಧ ಪಕ್ಷದ ನಾಯಕನಿಗಿಂತ ಹೆಚ್ಚು ಸಮರ್ಥವಾಗಿರುತ್ತವೆ. ಜನರಿಗೆ ಇಷ್ಟವಾಗಿವೆ.

ಸ್ವತಂತ್ರ, ನಿಷ್ಪಕ್ಷಪಾತ ಧ್ವನಿ ಇಲ್ಲದಿರುವ ಸಾಂಪ್ರದಾಯಿಕ ಮಾಧ್ಯಮಗಳಿಗೆ ತಮ್ಮನ್ನುಪರ್ಯಾಯ ಎಂದು ಹೇಳಿಕೊಳ್ಳುವ ರಾಥಿ, ʻಸಾಂಪ್ರದಾಯಿಕ ಮಾಧ್ಯಮವನ್ನು ಸರ್ಕಾರ ಹೈಜಾಕ್ ಮಾಡಿದೆ. ಜನರು ನನ್ನನ್ನು ಬದಲಿಯಾಗಿ ನೋಡುತ್ತಾರೆ,ʼಎಂದು ಅವರು ಟಿವಿ ಚಾನೆಲ್ ಫ್ರಾನ್ಸ್ 24 ಕ್ಕೆ ಹೇಳಿದ್ದರು.

ರಾಥಿ ಅವರ ಯುಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ವಿಡಿಯೋಗಳನ್ನು ಪರಿಶೀಲಿಸಿದರೆ, ಅವುಗಳಲ್ಲಿ ಹೆಚ್ಚಿನವು ಫೆಬ್ರವರಿ ಬಳಿಕ ಮೋದಿ ಅವರ ಸುತ್ತ ಸುತ್ತುತ್ತವೆ ಎಂದು ಗೊತ್ತಾಗುತ್ತದೆ. ತಮ್ಮನ್ನು 'ಯು ಟ್ಯೂಬ್‌ ಶಿಕ್ಷಣತಜ್ಞ' ಎಂದು ಕರೆದುಕೊಳ್ಳುವ ಅವರು, ಮೋದಿ ಅವರಿಂದ ʻಮೋಸ ಹೋಗಬೇಡಿʼ ಎಂದು ಜನರನ್ನು ಒತ್ತಾಯಿಸುತ್ತಾರೆ; ಮೋದಿ ʻಬ್ಯಾಟ್‌ಮ್ಯಾನ್‌ʼ ಸಿನಿಮಾದ ಜೋಕರ್ ಎಂಬ ಅಧಿಕಾರ ದಾಹ ಮತ್ತು ಎಲ್ಲರನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬ ವ್ಯಕ್ತಿತ್ವದ ಪಾತ್ರವಿದ್ದಂತೆ ಎಂದು ಸೂಚಿಸುತ್ತಾರೆ. ಬಿಜೆಪಿಯ ಕಾರ್ಯ ಸೂಚಿ ಮತ್ತು ವಾಟ್ಸಾಪ್‌ನಲ್ಲಿನ ʻಸುಳ್ಳುʼಗಳಿಂದ ʻಮಿದುಳು ತೊಳೆಸಿಕೊಳ್ಳಬೇಡಿʼ ಎಂದು ಅವರು ಜನರಿಗೆ ಮನವಿ ಮಾಡುತ್ತಾರೆ.

ತಪ್ಪುಗಳ ದಾಖಲೆಕಾರ: ಮೋದಿಯವರು ಯಾವುದೇ ತಪ್ಪುಮಾಡಿದರೆ (ಮತ್ತು ಈ ಚುನಾವಣೆ ಪ್ರಚಾರದಲ್ಲಿ ಸಾಕಷ್ಟು ತಪ್ಪುಗಳು ಇದ್ದವು), ಅದು ಧ್ರುವ ರಾಥಿ ಅವರ ವಿಡಿಯೋದಲ್ಲಿ ಇರುತ್ತದೆ.

ಪ್ರತಿಪಕ್ಷಗಳ ವಿರುದ್ಧ ಮೋದಿಯವರ ಮಂಗಳಸೂತ್ರದ ಹೇಳಿಕೆ ಆಗಿರಬಹುದು ಅಥವಾ ʻತಮ್ಮನ್ನು ದೇವರು ಭೂಮಿಗೆ ಕಳುಹಿಸಿದ್ದಾರೆʼ ಎಂಬ ಹೇಳಿಕೆ ಅಥವಾ ರಿಚರ್ಡ್ ಅಟೆನ್‌ಬರೋ ಅವರ ಚಲನಚಿತ್ರಕ್ಕಿಂತ ಮೊದಲು ಮಹಾತ್ಮ ಗಾಂಧಿ ಅವರ ಬಗ್ಗೆ ಪ್ರಪಂಚಕ್ಕೆ ತಿಳಿದಿರಲಿಲ್ಲ ಎಂಬ ಮಾತು, ಇವೆಲ್ಲವನ್ನೂ ರಾಥಿ ವಿಡಂಬನಾತ್ಮಕವಾಗಿ ಟೀಕಿಸಿದ್ದಾರೆ.

ದೇಶದಲ್ಲಿ ಆದಾಯದ ಅಸಮಾನತೆ ಏರಿಕೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆ ಅಥವಾ ಭಾರತೀಯ ಪೌರತ್ವವನ್ನು ಬಿಟ್ಟುಕೊಡುವ ಜನರ ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂಬ ಅಂಕಿಅಂಶಗಳನ್ನು ಉಲ್ಲೇಖಿಸಿ, ಭಾರತದ ಇನ್ನೊಂದು ಚಿತ್ರವನ್ನು ತೋರಿಸಲು ಶ್ರಮಿಸುತ್ತಾರೆ.

ರಾಥಿ ಕಾಲರ್‌ ಇಲ್ಲದ ಟಿ ಶರ್ಟ್‌ ಧರಿಸಿ, ತಮ್ಮ ವಾದಕ್ಕೆ ಆಧಾರವಾಗಿ ಗ್ರಾಫಿಕ್ಸ್, ನ್ಯೂಸ್ ಕ್ಲಿಪ್‌ ಮತ್ತು ರೆಕಾರ್ಡಿಂಗ್‌ಗಳೊಂದಿಗೆ ಸ್ವಗತ ದೊಂದಿಗೆ ಸಂಭಾಷಣೆ ನಡೆಸುತ್ತಾರೆ.

ದೊಡ್ಡ ತಂಡ: ಅವರದ್ದು ಏಕ ವ್ಯಕ್ತಿ ಸೇನೆಯಲ್ಲ. ಸ್ಕ್ರಿಪ್ಟ್ ರೈಟರ್‌ಗಳು, ಸಂಶೋಧಕರು, ಸತ್ಯಾಂಶ ಪರೀಕ್ಷಕರು ಸೇರಿದಂತೆ ಸುಮಾರು 15 ಜನರ ತಂಡವನ್ನು ಹೊಂದಿದ್ದಾರೆ. ಏಕೆಂದರೆ, ಅವರು ತಮ್ಮ ತಪ್ಪು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ವಕೀಲರು ಪರಿಶೀಲಿಸುತ್ತಾರೆ.

ಹರಿಯಾಣದ ರೋಹ್ಟಕ್ ಮೂಲದ ಧ್ರುವ್ ಅವರ ತಂದೆ ಇಂಜಿನಿಯರ್. ದೆಹಲಿ ಮತ್ತು ಮಲೇಷ್ಯಾಕ್ಕೆ ತೆರಳಿದರು. ಅವರ ಕುಟುಂಬದ ಅನೇಕ ಸದಸ್ಯರು ಭಾರತೀಯ ಸೇನೆಯಲ್ಲಿದ್ದಾರೆ ಎಂದು ಅವರು ತಮ್ಮ ವಿಡಿಯೋವೊಂದರಲ್ಲಿ ಹೇಳಿದ್ದಾರೆ.ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿಯಲು ಜರ್ಮನಿಗೆ ತೆರಳಿದ ರಾಥಿ ಅವರು, ತಮ್ಮ 17ನೇ ವಯಸ್ಸಿನಲ್ಲಿ ಜರ್ಮನ್ ಮಹಿಳೆಯನ್ನು ಮದುವೆಯಾದರು. ತಾವು ಎಎಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಪ್ರಭಾವಿಗಳ ಹೊರಹೊಮ್ಮುವಿಕೆ: ರಾಥಿ, ಅರ್ಪಿತ್ ಶರ್ಮಾ, ರಾಂಟಿಂಗ್ ಗೋಲಾ ಮತ್ತು ಶಾಂಭವ್ ಶರ್ಮಾ ಅವರಂತಹ ರಾಜಕೀಯ ಪ್ರಭಾವಿಗಳ ಜನಪ್ರಿಯತೆಯು ಚುನಾವಣೆ ಪ್ರಚಾರದ ಸಮಯದಲ್ಲಿ ಬಿಜೆಪಿಯನ್ನು ಕುಗ್ಗಿಸಿರಬಹುದು. ಇವರಲ್ಲಿ ಕೆಲವರು ಬಿಜೆಪಿ ವಿರೋಧಿಗಳು, ಕೇಸರಿ ಪಕ್ಷವನ್ನು ತಮ್ಮದೇ ರೀತಿಯಲ್ಲಿ ಎದುರಿಸುತ್ತಿದ್ದರು.

ಜನರು ಹೇಗೆ ಮತ ಚಲಾಯಿಸಿದರು ಎಂಬುದರ ಮೇಲೆ ಅವರು ಪ್ರಭಾವ ಬೀರಿರಬಹುದು ಅಥವಾ ಬೀರದೇ ಇರಬಹುದು. ಆದರೆ, ಅವರು ರಾಜಕೀಯದಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದಾರೆ.

ʻದಿ ಫೆಡರಲ್‌ʼಗೆ ನೀಡಿದ ಸಂದರ್ಶನದಲ್ಲಿ ಎಚ್‌ ಪಾಪ್;‌ ದ ಸಿಕ್ರಿಟಿವ್‌ ವರ್ಲ್ಡ್‌ ಆಫ್‌ ಹಿಂದುತ್ವ ಪಾಪ್‌ ಸ್ಟಾರ್‌ ನ ಲೇಖಕ ಕುನಾಲ್ ಪುರೋಹಿತ್, ಈ ಚುನಾವಣೆಯಲ್ಲಿ ರವೀಶ್ ಕುಮಾರ್, ಅಜಿತ್ ಅಂಜುಮ್, ಆಕಾಶ್ ಬ್ಯಾನರ್ಜಿ ಮತ್ತು ಧ್ರುವ ರಾಥಿ ಅವರಂತಹ ಭಿನ್ನಾಭಿಪ್ರಾಯದ ಧ್ವನಿಗಳು ಬಿಜೆಪಿಯನ್ನು ಟೀಕಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ನಾಶಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಹೇಳಿದ್ದಾರೆ. ʼಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಭಯವನ್ನು ಅವರು ಹೊಡೆದೋಡಿಸಿದರು. ಸರ್ಕಾರ ಅಜೇಯ ಎಂಬ ಕಲ್ಪನೆಯನ್ನು ಛಿದ್ರಗೊಳಿಸಿದರು,ʼ ಎಂದು ಹೇಳಿದರು.

ʻರವೀಶ್ ಮತ್ತು ಇತರ ಹಿರಿಯ ಪತ್ರಕರ್ತರು ಯುಟ್ಯೂಬ್‌ ನಲ್ಲಿ ವಿಮರ್ಶಾತ್ಮಕ ವರದಿ ಮಾಡಲು ಪ್ರಾರಂಭಿಸಿದಾಗ, ಭಾರತೀಯರು ಪ್ರಶಂಸೆ ಮತ್ತು ಸ್ತೋತ್ರದಲ್ಲಿ ಮುಳುಗದ ವಿಶ್ವಾಸಾರ್ಹ ಧ್ವನಿಗಳನ್ನು ನೋಡಲಾರಂಭಿಸಿದರು. ರಾಥಿ ಮತ್ತು ಇನ್ನಿತರ ಪ್ರಭಾವಿಗಳು ಸರ್ಕಾರದ ಕಾರ್ಯಚಟುವಟಿಕೆಯನ್ನು ವಿಮರ್ಶಾತ್ಮಕ ಮತ್ತು ಪರಿಣಾಮಕಾರಿಯಾಗಿ ವಿಶ್ಲೇಷಿಸುವುದನ್ನು ನಾವು ನೋಡಿದ್ದೇವೆ,ʼ ಎಂದು ಹೇಳಿದರು.

ವಿರೋಧ ಪಕ್ಷಗಳಿಗಿಂತ ಪರಿಣಾಮಕಾರಿ: ತಮ್ಮದೇ ಯುಟ್ಯೂಬ್ ಚಾನೆಲ್ ಪರಂಜೋಯ್ ಆನ್‌ಲೈನ್ ಹೊಂದಿರುವ ಹಿರಿಯ ಪತ್ರಕರ್ತ ಪರಂಜೋಯ್ ಗುಹಾ ಠಾಕುರ್ತಾ ಅವರು, ಆಡಳಿತ ಆಡಳಿತದ ʻಸುಳ್ಳುʼ ಗಳನ್ನು ಹೇಳುವಲ್ಲಿ ರಾಥಿ ಅವರು ವಿರೋಧ ಪಕ್ಷದ ನಾಯಕರಿಗಿಂತ ಹೆಚ್ಚು ʻಪರಿಣಾಮಕಾರಿʼ ಎಂದು ನಂಬುತ್ತಾರೆ.

ʻರಾಥಿ ಮತ್ತಿತರರು ಅಕ್ಷರಶಃ ಬಿಜೆಪಿಯನ್ನು ಎದುರಿಸಿದರು. ರಾಥಿ ಕೂಡ ತಾವು ಇಷ್ಟೊಂದು ಜನಪ್ರಿಯವಾಗುತ್ತೇನೆ ಎಂದು ಊಹಿಸಿರಲಿಲ್ಲ. ವಿವರಣೆ ನೀಡುವಂತೆ ಇರುವ ಅವರ ವಿಡಿಯೋಗಳು ಪರಿಣಾಮಕಾರಿಯಾಗಿವೆ,ʼ ಎಂದು ಠಾಕುರ್ತಾ ಹೇಳಿದರು.

ರಾಥಿ ಅವರನ್ನು ಬಲಪಂಥೀಯರು ನಿರ್ದಯವಾಗಿ ಟ್ರೋಲ್ ಮಾಡುತ್ತಾರೆ. ಅವರ ಪತ್ನಿಗೆ ಅತ್ಯಾಚಾರ ಬೆದರಿಕೆಗಳು ಬರುತ್ತವೆ ಎಂದು ಹೇಳಿದರು.

ದೇಶದಲ್ಲಿ ಯುಟ್ಯೂಬ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ಹರಡುವಿಕೆ ರಾಥಿ ಅವರ ಜನಪ್ರಿಯತೆ ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಠಾಕುರ್ತಾ ನಂಬಿದ್ದಾರೆ. ಗೂಗಲ್ ಮಾಲೀಕತ್ವದ ಯುಟ್ಯೂಬ್ ಭಾರತದಲ್ಲಿ 460 ದಶಲಕ್ಷ ಚಂದಾದಾರರನ್ನು ಹೊಂದಿದ್ದು, ದೇಶ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಮೆಟಾ ಒಡೆತನದ ವಾಟ್ಸಾಪ್‌ 487.5 ದಶಲಕ್ಷ ಬಳಕೆದಾರರನ್ನು ಹೊಂದಿದೆ.

ನೆಲದ ಮೇಲೆ ಪರಿಣಾಮ: ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್‌) ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀ ಕ್ಷೆಯ ಭಾಗವಾಗಿದ್ದ ರಾಜಕೀಯ ವಿಜ್ಞಾನಿಯೊಬ್ಬರು, ಇವರ ನಿಜವಾದ ಪ್ರಭಾವದ ಬಗ್ಗೆ ಖಚಿತವಿಲ್ಲ ಎಂದು ಹೇಳುತ್ತಾರೆ.

ʻಬಹುಮಟ್ಟಿಗೆ ಉದಾರವಾದಿಗಳು ಅವರ ಮಾತನ್ನು ಕೇಳಲು ಮತ್ತು ವಿಡಿಯೋ ವೀಕ್ಷಿಸಲು ಬಯಸುತ್ತಾರೆ. ದೇಶದಲ್ಲಿ ಏನು ಆಗುತ್ತಿದೆ ಎಂದು ಅವರು ಶಂಕಿಸುತ್ತಿದ್ದಾರೆಯೋ ಅದಕ್ಕೆ ರಾಥಿ ಪುರಾವೆ ನೀಡುತ್ತಾರೆ,ʼ ಎಂದು ಅವರು ʻದಿ ಫೆಡರಲ್‌ʼಗೆ ತಿಳಿಸಿದರು. ʻವಿಷಯವನ್ನು ಮನವಿ ಮಾಡುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಮೋದಿ ಪರ ಇರುವವರೂ ಕೂಡ ಅವರ ವಿಡಿಯೋ ಇಷ್ಟ ಪಡುತ್ತಾರೆ,ʼ ಎಂದು ಅವರು ಹೇಳಿದರು.

ʻಆದರೆ, ಮತದಾನದ ಸಮಯದಲ್ಲಿ ಅದು ವ್ಯತ್ಯಾಸವನ್ನುಂಟು ಮಾಡುತ್ತದೆಯೇ ಎಂದು ನನಗೆ ತಿಳಿದಿಲ್ಲ. ಇವರು ಮತ ಚಲಾಯಿಸಿದ್ದಾರೆ ಯೇ? ಅವರ ಅಭಿಮಾನಿಗಳು ಹೆಚ್ಚಾಗಿ ನಗರ ಮತದಾರರಾಗಿದ್ದರಿಂದ ಊಹಿಸಲು ಕಷ್ಟವಾಗುತ್ತದೆ,ʼ ಎಂದು ಹೇಳಿದರು.

ಆದರೆ, ರಾಥಿ ಮತ್ತು ಇನ್ನಿತರರು ದೇಶದ ರಾಜಕೀಯದಲ್ಲಿ ಬಹಳ ಮುಖ್ಯ. ನಾನು ವಿಶೇಷವಾಗಿ, ಚುನಾವಣಾ ಬಾಂಡ್ ಹಗರಣದ ರಾಥಿ ಅವರ ವಿಡಿಯೋ ಇಷ್ಟಪಟ್ಟಿದ್ದೇನೆ,ʼ ಎಂದು ಹೇಳಿದರು. 2014 ಮತ್ತು 2019 ರ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿತು; ಜನರ ಮೇಲೆ ಪ್ರಭಾವ ಬೀರಲು ತಂತ್ರಜ್ಞಾನವನ್ನು ಬಳಸಿತು.

ಏಕಪಕ್ಷೀಯ ನಿರೂಪಣೆ: ಭಾರತದ ಸಾಮಾಜಿಕ ಮಾಧ್ಯಮದಲ್ಲಿ ಏಕಪಕ್ಷೀಯ ನಿರೂಪಣೆ ಇತ್ತು ಎಂಬುದನ್ನು ಪುರೋಹಿತ್ ಒಪ್ಪಿಕೊಂಡರು. ಆನ್‌ಲೈನ್ ವೇದಿಕೆಗಳಲ್ಲಿ ಬಲಪಂಥೀಯ ಹಿಂದುತ್ವ ಬ್ರಿಗೇಡ್ ಪ್ರಾಬಲ್ಯ ಹೊಂದಿತ್ತು. ಅವರು ಬಿಜೆಪಿಗೆ ನಿರ್ಲಜ್ಜ ಪಕ್ಷಪಾತಿಯಾಗಿ ದ್ದರು. ಈಗ, ಮೊದಲ ಬಾರಿಗೆ ನಾವು ವಿರೋಧದ ಧ್ವನಿಗಳನ್ನು ಕೇಳು‌ತ್ತಿದ್ದೇವೆ,ʼ ಎಂದರು.

ರಾಥಿ ಅವರು ಹೆಚ್ಚು ಜನರನ್ನು ತಲುಪಲು ಒಂದು ಕಾರಣವೆಂದರೆ, ಅವರ ವಿಡಿಯೋಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿರುವ 'ವಿವರಿಸುವ' ಪ್ರಕಾರದ ಅಡಿಯಲ್ಲಿ ಬರುತ್ತವೆ. ಅವರು ಸಮಸ್ಯೆಗಳನ್ನುಸರಳ ಭಾಷೆಯಲ್ಲಿ ವಿವರಿಸುತ್ತಾರೆ. ʻಇದಲ್ಲದೆ, ರಾಥಿ ಅವರ ವಿಡಿಯೋಗಳು ಚೆನ್ನಾಗಿ ಪ್ಯಾಕ್ ಮಾಡಲ್ಪಟ್ಟಿರುತ್ತವೆ. ತಾಂತ್ರಿಕವಾಗಿ ಉತ್ತಮವಾಗಿರುತ್ತವೆ. ಅವರು ಬಲಪಂಥೀಯರ ಪುಸ್ತಕದಿಂದಲೇ ಈ ಪಾಠ ತೆಗೆದಂತೆ ತೋರುತ್ತಿದೆ,ʼ ಎಂದು ಪುರೋಹಿತ್ ಹೇಳಿದರು.

ರಾಥಿ ಅವರು ಮತದಾನದ ಸಮಯದಲ್ಲಿ ಹಲವು ವಿಡಿಯೋ ಬಿಡುಗಡೆ ಮಾಡಿದರು. ಅವರ ವೀಕ್ಷಕರ ಸಂಖ್ಯೆ ಫೆಬ್ರವರಿಯಿಂದ ಉತ್ತುಂಗ ಕ್ಕೇರಿತು. ಈಸ್‌ ಇಂಡಿಯಾ ಎ ಡಿಕ್ಟೇಟರ್‌ ಶಿಪ್?‌ ವಿಡಿಯೋ 25 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ.

ಬಿಜೆಪಿ ತಿರುಗೇಟು: ಬಿಜೆಪಿಯು ಇವರಿಗೆ ಸಮರ್ಥವಾಗಿ ಪ್ರತಿಕ್ರಿಯೆ ನೀಡಿದೆ. ರಣವೀರ್ ಅಲ್ಲಾಬಾಡಿಯಾ (ಸಾಮಾಜಿಕ ಮಾಧ್ಯಮದ ಹೆಸರು 'ಬೀರ್‌ಬೈಸೆಪ್ಸ್') ಅವರಿಂದ ಕೇಂದ್ರ ಸಚಿವರಾದ ಎಸ್. ಜೈಶಂಕರ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಸರಣಿ ಸಂದರ್ಶನ ಮಾಡಿಸಲು ನಿರ್ಧರಿಸಿತು.

ನಿರ್ಗಮನ ಸಮೀಕ್ಷೆಗಳನ್ನು ನಂಬುವುದಾದರೆ, ಅವು ಬಿಜೆಪಿ ವಿರುದ್ಧದ ಮತಗಳ ಮೇಲೆ ಪರಿಣಾಮ ಬೀರಿಲ್ಲ. ಆದರೆ, ಜವಾಬ್ದಾರಿಯಿಲ್ಲದ ಸಾಂಪ್ರದಾಯಿಕ ಮಾಧ್ಯಮಗಳಿರುವ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಈ ಪ್ರಭಾವಿಗಳು ದಾಖಲಿಸಿದರು ಎಂದು ಪುರೋಹಿತ್ ಅಭಿಪ್ರಾಯಪಟ್ಟಿದ್ದಾರೆ.

ಸೆನ್ಸಾರ್ಶಿಪ್: ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಯ ಐದನೇ ಹಂತದ ಆಸುಪಾಸಿನಲ್ಲಿ ಮೋದಿಯನ್ನು ಟೀಕಿಸಿದ ರಾಥಿ ಅವರ ವಿಡಿಯೋ ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ವಕೀಲರೊಬ್ಬರ ಮೇಲೆ ಪ್ರಕರಣ ದಾಖಲಾಯಿತು. ಆಡಳಿತಾರೂಢ ಬಿಜೆಪಿ ಚಾನೆಲ್ ಅನ್ನು ಏಕೆ ಮುಚ್ಚಿಲ್ಲ ಎಂದು ಕೇಳಿದಾಗಲೆಲ್ಲ ರಾಥಿ, ತಾವು ಆ ಆಲೋಚನೆಯೊಂದಿಗೆ ಬದುಕುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತಾರೆ.

ಮತ್ತು, ಪುರೋಹಿತ್ ಸೂಚಿಸಿದಂತೆ, ಭಾರತೀಯ ಪ್ರಸಾರ ಮಸೂದೆ ಅಂಗೀಕಾರವಾದರೆ, ರಾಥಿ ಅವರಂತಹ ವಿಮರ್ಶಾತ್ಮಕ ಧ್ವನಿಗಳನ್ನು ಹತ್ತಿಕ್ಕುವುದು ಸರ್ಕಾರಕ್ಕೆ ಸುಲಭವಾಗುತ್ತದೆ. ಹೀಗಿರುವಾಗ ರಾಥಿ ಹೇಳಿದಂತೆ, ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಜನ ಎಚ್ಚೆತ್ತುಕೊಳ್ಳುತ್ತಾರಾ?

ಬಿಜೆಪಿ ಪರ ಪ್ರಭಾವಿಗಳು: 263,000 ಚಂದಾದಾರರನ್ನು ಹೊಂದಿರುವ ಶಂಭವ್ ಶರ್ಮಾ ಅವರಂತಹ ಬಿಜೆಪಿ ಪರ ಯುಟ್ಯೂಬ್ ಪ್ರಭಾವಿಗಳು, ರಾಥಿಯವರ ಎದುರು ಪಕ್ಷದಲ್ಲಿದ್ದಾರೆ. ಬಿಜೆಪಿ ವಕ್ತಾರರನ್ನು ಸಂದರ್ಶಿಸುವುದು ಮತ್ತು ನಿರ್ಗಮನ ಸಮೀಕ್ಷೆ ನಂತರ ಆಪ್ ನಾಯಕರು ಮತ್ತು ಸ್ಯಾಮ್ ಪಿತ್ರೋಡಾ ಅವರನ್ನು ಕೆಣಕುವುದು ಮಾತ್ರವಲ್ಲದೆ, ಅವರು ತಮ್ಮ ವಿಡಿಯೋಗಳಲ್ಲಿ ರಾಥಿಯನ್ನು ಟೀಕಿಸು ತ್ತಾರೆ.

ʻಡಿಯರ್ ಧ್ರುವ ರಾಥಿ, ಡೆಮಾಕ್ರಸಿ ಈಸ್ ನಾಟ್ ಡೆಮಾಕ್ರಸಿʼ ಎಂಬ ಶೀರ್ಷಿಕೆಯ ವಿಡಿಯೋ, ದೇಶದಲ್ಲಿ ಸರ್ವಾಧಿಕಾರ ಕುರಿತ ರಾಥಿ ಅವರ ವಿಡಿಯೋಗೆ ಪ್ರತಿಕ್ರಿಯೆ. ಶರ್ಮಾ, ವ್ಯತಿರಿಕ್ತ ದೃಷ್ಟಿಕೋನ ನೀಡುತ್ತಾರೆ. ʻಭಾರತೀಯ ರಾಜಕೀಯದ ಸಂಕೀರ್ಣತೆಗಳನ್ನು ಕಡೆಗಣಿಸುವʼ ರಾಥಿಯವರ ʻಅತಿ ಸರಳೀಕೃತʼ ವಿಧಾನವನ್ನು ಟೀಕಿಸುತ್ತಾರೆ.

ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಶರ್ಮಾ, ನಿರ್ಗಮನ ಸಮೀಕ್ಷೆ ನಂತರ ಪೋಸ್ಟ್ ಮಾಡಿದ್ದಾರೆ; ʻನಿಮ್ಮ ಪ್ರಯತ್ನಗಳ ಹೊರತಾಗಿಯೂ ಬಿಜೆಪಿ ಗೆಲ್ಲಬಹುದು. ನೀವು ಇನ್ನೂ ಐದು ವರ್ಷ ಕಾಲ ಸರ್ವಾಧಿಕಾರದ ಪ್ರಚಾರವನ್ನು ನಡೆಸಬಹುದು.ʼ

'ರಾಂಟಿಂಗ್ ಗೋಲಾ'ದಂತಹವರು ವೀಕ್ಷಕರಿಗೆ ಏನು ಬೇಕೆಂದು ಕೇಳುತ್ತಿದ್ದಾರೆ. ಆದರೆ, ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಲೇ ಇರುವುದಾಗಿ ಭರವಸೆ ನೀಡುತ್ತಾರೆ.

ಅರ್ಪಿತ್ ಶರ್ಮಾ ಅವರೊಂದಿಗೆ ನಡೆಸಿದ ಸಂವಾದದ ಆಯ್ದ ಭಾಗಗಳು:

ಚಾರ್ಟರ್ಡ್ ಅಕೌಂಟೆಂಟ್ ಪ್ರಭಾವಿ ಜಾಗಕ್ಕೆ ಹೇಗೆ ಬಂದರು? 2020ರಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದಾಗ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಮಾಧ್ಯಮಗಳ ವಂಚನೆ ಮತ್ತು ಸರ್ಕಾರವನ್ನು ಪ್ರಶ್ನಿಸಲು ಪ್ರಾರಂಭಿಸಿದೆ. ನನ್ನ ಒಂದು ವಿಡಿಯೋ ʻಎಂಎಲ್ಎ ಸ್ಟಾಕ್ ಎಕ್ಸ್‌ ಚೇಂಜ್ ʼಅನ್ನು ಡಾ. ಕುಮಾರ್ ವಿಶ್ವಾಸ್ ಅವರು ಮರುಟ್ವೀಟ್ ಮಾಡಿದರು ಮತ್ತು ಜಿಎಸ್ಟಿ ಕುರಿತ ಮತ್ತೊಂದು ವಿಡಿಯೋವನ್ನು ಧ್ರುವ (ರಾಥಿ) ಹಂಚಿಕೊಂಡರು.

ಜನರು ನನ್ನ ಅಭಿಪ್ರಾಯಗಳನ್ನು ಕೇಳಲು ಬಯಸುತ್ತಾರೆ. ವಿಡಂಬನೆ ಮೂಲಕ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಬಹುದು ಎಂದು ನಾನು ಅರಿತುಕೊಂಡೆ.

ನಿಮಗೆ ಪ್ರೇರೇಪಣೆ ಏನು?: ವಿಷಯ ರಚನೆಕಾರರಾಗಿ ಸುಮಾರು ಮೂರು ವರ್ಷಗಳಾಗಿವೆ. ಆದರೆ, ಈ ಚುನಾವಣೆಗಳವರೆಗೆ ನನಗೆ ಸ್ಥಿರತೆ ಬಂದಿರಲಿಲ್ಲ. ಆದರೆ, ನಾನು ದೇಶವನ್ನು ಪ್ರೀತಿಸುತ್ತೇನೆ ಮತ್ತು ಜನರ ಬಗ್ಗೆ ಕಾಳಜಿ ವಹಿಸುವುದರಿಂದ ಸರ್ಕಾರದ ನೀತಿಗಳನ್ನು ಪ್ರಶ್ನಿಸಲು ಮತ್ತು ಸಾಮಾ ಜಿಕ ಮಾಧ್ಯಮದಲ್ಲಿ ಜನರ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಲು ನನ್ನನ್ನು ಪ್ರೇರೇಪಿಸುತ್ತದೆ.

ನಾವು ಏಕೆ ಜನಪ್ರಿಯರಾಗಿದ್ದೇವೆ? :ಭಾರತೀಯ ಮುಖ್ಯವಾಹಿನಿಯ ಮಾಧ್ಯಮಗಳ ವಿಶ್ವಾಸಾರ್ಹತೆಯ ಕೊರತೆಯೂ ಒಂದು ಕಾರಣ. ರಾಷ್ಟ್ರೀಯ ಟಿವಿ ಚಾನೆಲ್‌ಗಳು ಮಣಿಪುರದ ಗಲಭೆಗಳನ್ನು ಪ್ರಸಾರ ಮಾಡದಿದ್ದಾಗ, ನಾನು ಸರಣಿ ವಿಡಿಯೋ ಹಂಚಿಕೊಂಡೆ. ಜನರು ನನಗೆ ಸಂದೇಶ ಕಳುಹಿಸಿದರು ಮತ್ತು ಶ್ಲಾಘಿಸಿದರು. ಅದೇ ರೀತಿ, ರೈತರು ಮತ್ತು ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲೂ ಮಾಡಿದೆ.

ವಿಷಯ ಹೇಗೆ ಸಿದ್ಧಪಡಿಸುತ್ತೀರಿ?: ಟ್ವಿಟರ್‌ನಲ್ಲಿ ಏನು ಟ್ರೆಂಡಿಂಗ್ ಆಗಿದೆ ಮತ್ತು ಅದು ಜನರ ಮೇಲೆ ಪರಿಣಾಮವನ್ನು ಬೀರುತ್ತದೆಯೇ ಎಂದು ಪರಿಶೀಲಿಸುತ್ತೇನೆ. ನಂತರ ಕೆಲವು ಸಂಗತಿಗಳನ್ನು ವಿಡಂಬನಾತ್ಮಕವಾಗಿ ಹೇಳುತ್ತೇನೆ. 24-25 ವರ್ಷ ವಯಸ್ಸಿನ ಯುವಜನರು ನನ್ನ ವಿಡಿಯೋ ವೀಕ್ಷಿಸಿದಾಗ, ಅರ್ಥ ಮಾಡಿಕೊಳ್ಳುತ್ತಾರೆ.

ಹೌದು. ವೀಕ್ಷಕರನ್ನು ಆಕರ್ಷಿಸುವುದು ಆರಂಭದಲ್ಲಿ ಸವಾಲಾಗಿತ್ತು. ವಿಷಯ ಸೂಕ್ತವಾಗಿದ್ದರೆ, ಜನರು ಅದನ್ನು ವೀಕ್ಷಿಸುತ್ತಾರೆ. ಇನ್‌ಸ್ಟಾ ಗ್ರಾಮ್‌ನಲ್ಲಿ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುತ್ತೇನೆ; ಇದರಿಂದ ಅವರು ನನ್ನ ಅಭಿಪ್ರಾಯವನ್ನು ಕೂಡ ಕೇಳಬಹುದು.

ಹಾಗಾಗಿ, ವಿಡಿಯೋಗಳ ಶೀರ್ಷಿಕೆಯನ್ನು ನಿರ್ದಿಷ್ಟ ನಾಯಕನನ್ನು ವೈಭವೀಕರಿಸುತ್ತಿದ್ದೇನೆ ಎಂದು ತೋರುವಂತೆ ಮಾಡಲು ಪ್ರಯತ್ನಿಸು ತ್ತೇನೆ. ಆದರೆ, ವಾಸ್ತವವೆಂದರೆ, ಅದು ವಿಡಂಬನೆ. ತಾಜಾ, ಸ್ಪಷ್ಟ ಮತ್ತು ಯಾರನ್ನೂ ನಿಂದಿಸದೆ ಇರಲು ಪ್ರಯತ್ನಿಸುತ್ತೇನೆ. ಏಕೆಂದರೆ, ನನ್ನ ವಿಡಿಯೋ 24-25 ವರ್ಷ ವಯಸ್ಸಿನ ಯುವಕನ ಅಜ್ಜಿಗೂ ತಲುಪಬೇಕೆಂದು ಬಯಸುತ್ತೇನೆ.

ನಿಮ್ಮ ಅತ್ಯಂತ ಜನಪ್ರಿಯ ವಿಡಿಯೋ?: ಹತ್ರಾಸ್ ಅತ್ಯಾಚಾರ, ಬಿಲ್ಕಿಸ್ ಬಾನೋ, ಪ್ರಜ್ವಲ್ ರೇವಣ್ಣ ಕುರಿತ ವಿಡಿಯೋಗಳು 14 ದಶಲಕ್ಷ ವೀಕ್ಷಣೆ ಆಗಿವೆ. ಅದನ್ನು ಧ್ರುವ್ ತಮ್ಮ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಆ ವಿಡಿಯೋ ಇಷ್ಟಪಟ್ಟಿದ್ದಾರೆ. ಮುಂಬೈ ಮತ್ತು ದೆಹಲಿ ಮತದಾರರಿಗೆ ಮಾಡಿದ ಮನವಿಗಳು ತಲಾ 9 ದಶ ಲಕ್ಷ ವೀಕ್ಷಣೆಗಳನ್ನು ಪಡೆದಿವೆ.

ಧ್ರುವ ರಾಥಿ ಯಾಕೆ ಇಷ್ಟೊಂದು ಜನಪ್ರಿಯರಾದರು?: ವಿರೋಧ ಪಕ್ಷಗಳಿಗೆ ಋಜುತ್ವದ ಸಮಸ್ಯೆ ಇದೆ. ಚುನಾವಣಾ ಬಾಂಡ್ ಹಗರಣ ವನ್ನು ಧ್ರುವ್‌ ವಿವರಿಸಿದಾಗ, ಜನರಿಗೆ ಅದಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೇಳಿದರು. ದೇಶಕ್ಕಾಗಿ ತನ್ನ ವೃತ್ತಿಜೀವನ ಮತ್ತು ಚಾನೆಲ್ ಅನ್ನು ಅಪಾಯಕ್ಕೆ ಒಡ್ಡುವ ಅವರ ಬದ್ಧತೆ ಬಗ್ಗೆ ಚರ್ಚೆಯಾಯಿತು. ಬಿಜೆಪಿಯ ಐಟಿ ಸೆಲ್‌ ಪ್ರಚಾರ ಮಾಡಿದ ಅನೇಕ ಮಿಥ್ಯೆಗಳನ್ನು ಅವರು ತಮ್ಮ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ಇದರಿಂದ ಜನರು ಆ ಮಿಥ್ಯೆಗಳನ್ನು ಎದುರಿಸಲು ಮತ್ತು ಯೋಚಿಸಲು ಸಾಧ್ಯವಾಯಿತು.

Read More
Next Story