ವೈಶಾಲಿ ಅವರ ಗ್ರ್ಯಾಂಡ್ ಮಾಸ್ಟರ್ ಕನಸು ಈಡೇರಿದ್ದು ಹೇಗೆ?
x

ವೈಶಾಲಿ ಅವರ ಗ್ರ್ಯಾಂಡ್ ಮಾಸ್ಟರ್ ಕನಸು ಈಡೇರಿದ್ದು ಹೇಗೆ?


ಚೆಸ್‌ ಆಟಗಾರ್ತಿ ವೈಶಾಲಿ ರಮೇಶ್‌ ಬಾಬು(22) ಅವರಿಗೆ 2023 ಹಲವು ಪ್ರಥಮಗಳ ವರ್ಷ. ಸಹೋದರ ಆರ್. ಪ್ರಗ್ನಾನಂದ ಅವರ ನೆರಳಿನಿಂದ ಹೊರಬಂದು, ಐಲ್ ಆಫ್ ಮ್ಯಾನ್‌ನ ರಾಜಧಾನಿ ಡಗ್ಲಾಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಫಿಡೆ) ಮಹಿಳಾ ಗ್ರ್ಯಾಂಡ್ ಸ್ವಿಸ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರು. ಈ ವಿಜಯ ಅವರಿಗೆ ಏಪ್ರಿಲ್ 2 ರಿಂದ 25 ರವರೆಗೆ ಕೆನಡಾದ ಟೊರೊಂಟೊದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಭಾರತೀಯ ತಂಡದಲ್ಲಿ ಸ್ಥಾನ ಗಳಿಸಿಕೊಟ್ಟಿತು.

ಚೆನ್ನೈ ಮೂಲದ ವೈಶಾಲಿ, 2023ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಮಹಿಳಾ ತಂಡದ ಭಾಗವಾಗಿದ್ದರು. ಗ್ರ್ಯಾಂಡ್ ಮಾಸ್ಟರ್ ಆಗಬೇಕೆಂಬ ಜೀವಮಾನದ ಕನಸನ್ನು ಹ್ಯಾಂಗ್ಝೌ ನಲ್ಲಿ ಈಡೇರಿಸಿಕೊಂಡರು. ಕೊನೇರು ಹಂಪಿ ದೇಶದ ಮೊದಲ ಮಹಿಳಾ ಜಿಎಂ(2002), ಎರಡನೆಯವರು ಹರಿಕಾ ದ್ರೋಣವಲ್ಲಿ(2011) ಬಳಿಕ ಮೂರನೇ ಭಾರತೀಯ ಮಹಿಳಾ ಜಿಎಂ ವೈಶಾಲಿ. ಅವರು ಜಿಎಂ ಆಗುವ ದಾರಿಯಲ್ಲಿ ಮೂವರು ಮಹಿಳಾ ವಿಶ್ವ ಚಾಂಪಿಯನ್‌ಗಳಾದ ಮರಿಯಾ ಮುಜಿಚುಕ್, ಆಂಟೊನೆಟಾ ಸ್ಟೆಫನೋವಾ ಮತ್ತು ಟಾನ್ ಝೊಂಗಿ ಅವರನ್ನು ಸೋಲಿಸಿದರು. 2019 ರಲ್ಲಿ ಮೊದಲ ಜಿಎಂ ನಾರ್ಮ್, 2022 ರಲ್ಲಿ ಎರಡನೆಯ ಹಾಗೂ ಅಕ್ಟೋಬರ್‌ 2023 ರಲ್ಲಿ ಕತಾರ್ ಓಪನ್‌ನಲ್ಲಿ ತಮ್ಮ ಮೂರನೇ ಮತ್ತು ಅಂತಿಮ ಜಿಎಂ ನಾರ್ಮ್ ಪಡೆದರು.

ಒಂದು ಕನಸು, ಒಂದು ಮೈಲುಗಲ್ಲು: ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆಲುವು ವೃತ್ತಿಜೀವನದ ಅತಿದೊಡ್ಡ ಗೆಲುವು ಎಂದು ಒಪ್ಪಿಕೊಳ್ಳುವ ವೈಶಾಲಿ, ʻಚಿಕ್ಕವಳಾಗಿದ್ದಾಗ ಚೆಸ್ ಆಟವನ್ನು ಆನಂದಿಸುತ್ತಿದ್ದೆ.ಆನಂತರ ಫಲಿತಾಂಶಗಳನ್ನು ಬೆನ್ನಟ್ಟಲು ಪ್ರಾರಂಭಿಸಿದೆʼ. ವೈಶಾಲಿ ಮತ್ತು ಪ್ರಗ್ನಾನಂದ ಚೆಸ್ ಇತಿಹಾಸದಲ್ಲಿ ಮಹಿಳಾ ಮತ್ತು ಮುಕ್ತ ವಿಭಾಗದಲ್ಲಿ ಗೆಲುವು ಸಾಧಿಸಿದ ಏಕೈಕ ಸೋದರ-ಸೋದರಿ ಜೋಡಿ.

ವೈಶಾಲಿಯ ಬೆಳವಣಿಗೆಯಲ್ಲಿ ದೀರ್ಘ ಕಾಲದ ತರಬೇತುದಾರ ಜಿಎಂ ಆರ್.ಬಿ. ರಮೇಶ್ ಅವರ ಪಾತ್ರ ದೊಡ್ಡದು. ಕೇವಲ ನಾಲ್ಕು ವಾರಗಳಿರುವಾಗ ವೈಶಾಲಿ ಸ್ಪರ್ಧಿಸಲು ನಿರ್ಧರಿಸಿದರು. ʻಅರ್ಹತೆ ಪಡೆದ ಆಟಗಾರರ ವಿರುದ್ಧ ನಾನು ಉತ್ತಮ ಫಲಿತಾಂಶ ಹೊಂದಿದ್ದೇನೆ. ಆದರೆ, ಇದು ಸಂಪೂರ್ಣವಾಗಿ ವಿಭಿನ್ನವಾದ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿʼ ಎನ್ನುತ್ತಾರೆ ವೈಶಾಲಿ.

ರಮೇಶ್‌ 2014 ಮತ್ತು 2022 ರ ಚೆಸ್ ಒಲಿಂಪಿಯಾಡ್‌ನಲ್ಲಿ ಓಪನ್ ವಿಭಾಗದಲ್ಲಿ ದೇಶ ಎರಡು ಕಂಚಿನ ಪದಕ ಗಳಿಸಲು ನೆರವಾದರು. ʻ ಹೇಳುವುದು ಕಷ್ಟ. ಪ್ರತಿಯೊಬ್ಬರ ಫಾರ್ಮ್ ಅನ್ನು ಅವಲಂಬಿಸಿರುತ್ತದೆ. ಮಾನಸಿಕ ಸ್ಥಿತಿ ದೊಡ್ಡ ಪಾತ್ರ ವಹಿಸುತ್ತದೆ. ಕೆಲವು ತಿಂಗಳುಗಳಿಂದ ವೈಶಾಲಿ ಶ್ರಮಿಸುತ್ತಿದ್ದಾರೆ, ʼಎಂದು ಹೇಳುತ್ತಾರೆ.

ಕತಾರ್ ಮಾಸ್ಟರ್ಸ್‌ನಲ್ಲಿ ಅಂತಿಮ ಜಿಎಂ ನಾರ್ಮ್‌ ಪೂರ್ಣಗೊಳಿಸಿ, ಸ್ಪೇನ್‌ನಲ್ಲಿ ಟ್ಯಾಮರ್ ತಾರಿಕ್ ಸೆಲ್ಬೆಸ್ ವಿರುದ್ಧ ಜಯಗಳಿಸಿದ ನಂತರ ವೈಶಾಲಿ 84ನೇ ಭಾರತೀಯ ಜಿಎಂ ಆದರು.ಈ ಗೆಲುವು ಅವರಿಗೆ 2500 ರೇಟಿಂಗ್‌ ದಾಟಲು ಸಹಾಯ ಮಾಡಿತು. ಹರಿಕಾ ಆ ಸಾಧನೆ ಮಾಡಿದ ಕೊನೆಯ ಭಾರತೀಯ ಮಹಿಳೆ.

ಆತ್ಮವಿಶ್ವಾಸ ಮತ್ತು ಮಾರ್ಗದರ್ಶನ: ವೈಶಾಲಿ ಪೋಷಕರು ಮಗಳು ಟಿವಿ ನೋಡುವುದನ್ನು ತಪ್ಪಿಸಲು ಚೆಸ್‌ಗೆ ಪರಿಚಯಿಸಿದರು. 2012ರಲ್ಲಿ 12 ವರ್ಷದೊಳ ಗಿನವರ ವಿಶ್ವ ಪ್ರಶಸ್ತಿ ಹಾಗೂ 2015ರಲ್ಲಿ 14 ವರ್ಷದೊಳಗಿನವರ ವಿಶ್ವ ಪ್ರಶಸ್ತಿ ಗೆಲುವು ಅವರ ಸಹಜ ಪ್ರತಿಭೆಗೆ ನಿದರ್ಶನ. 12 ನೇ ವಯಸ್ಸಿನಲ್ಲಿ ತವರಿನಲ್ಲಿ ನಡೆದ ಏಕಕಾಲಿಕ ಪ್ರದರ್ಶನ ಪಂದ್ಯದಲ್ಲಿ (2013) ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಮೀರಿಸಿದಳು. ಕಳೆದ ವರ್ಷದ ಅದ್ಭುತ ಪ್ರದರ್ಶನಕ್ಕೆ ಕಾರಣವೇನು ಎಂಬ ಪ್ರಶ್ನೆಗೆ,ʻಕಳೆದ ವರ್ಷ ಕೆಲವು ಮಾನಸಿಕ ಬದಲಾವಣೆ ಮಾಡಿಕೊಂಡಿದ್ದೇನೆ. ಆದರಿಂದ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಲು ಸಹಾಯವಾಗಿದೆʼ ಎಂದು ಹೇಳುತ್ತಾರೆ.

ತನ್ನ ಯಶಸ್ಸಿಗೆ ಕೋಚ್‌ ಕಾರಣ ಎನ್ನುವ ವೈಶಾಲಿ,ʼರಮೇಶ್ ಸರ್ ನನ್ನ ಮತ್ತು ಪ್ರಗ್ನನ ವೃತ್ತಿಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾವಿಬ್ಬರೂ 10 ವರ್ಷಗಳಿಂದ ಅವರ ಬಳಿ ತರಬೇತಿ ಪಡೆದಿದ್ದೇವೆ. ಚೆಸ್‌ಬೇಸ್ ಡೇಟಾಬೇಸ್ ಬಳಕೆ ಅಥವಾ ಎದುರಾಳಿಗಳ ವಿರುದ್ಧ ಕಾರ್ಯತಂತ್ರ ರೂಪಿಸುವ ಬಗ್ಗೆ ನನಗೆ ಯಾವುದೇ ಜ್ಞಾನ ಇರಲಿಲ್ಲ. ನಾನು ಅವರಿಂದ ಈ ಎಲ್ಲಾ ಕೌಶಲ ಗಳಿಸಿದ್ದೇನೆʼ ಎಂದು ಹೇಳುತ್ತಾರೆ.

ರಮೇಶ್ ಅವರ ಪ್ರಕಾರ, 2023 ರಲ್ಲಿ ವೈಶಾಲಿಯ ಯಶಸ್ಸಿಗೆ ಆತ್ಮವಿಶ್ವಾಸದ ಹೆಚ್ಚಳ ಕಾರಣ.ʻಆತ್ಮವಿಶ್ವಾಸ ಜಿಎಂ ಸ್ಥಾನ, ಮಹಿಳಾ ಗ್ರಾಂಡ್ ಸ್ವಿಸ್ ಕಿರೀಟ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆಲುವಿಗೆ ಸಹಾಯ ಮಾಡಿದೆ. ಮೊದಲು ಆಕೆಗೆ ಆತ್ಮವಿಶ್ವಾಸದ ಕೊರತೆಯಿತ್ತು. ಅದು ಸಹಜ ಪ್ರವೃತ್ತಿಯನ್ನು ಮೊಟಕುಗೊಳಿಸುತ್ತದೆʼ ಎಂದು ಹೇಳುತ್ತಾರೆ.

ವೈಶಾಲಿ, ಪ್ರಗ್ನ ಮತ್ತು ಇನ್ನಿತರರಿಗೆ ನೆರವಾಗಿರುವುದು ವೆಸ್ಟ್‌ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ (ವಾಕಾ). 2020 ರಲ್ಲಿ ವೆಸ್ಟ್‌ಬ್ರಿಡ್ಜ್ ಕ್ಯಾಪಿ ಟಲ್ ಸಹಭಾಗಿತ್ವದಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸ್ಥಾಪಿಸಿದ್ದಾರೆ. ಪ್ರತಿಭಾವಂತ ಭಾರತೀಯ ಯುವಜನ ರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಅಕಾಡೆಮಿಯ ಗುರಿ. ʻಆನಂದ್ ಸರ್ ಅವರಿಗೆ ಧನ್ಯವಾದ. ನಾನು ವಿಶ್ವದ ಕೆಲವು ಉನ್ನತ ತರಬೇತುದಾರರಿಂದ ತರಬೇತಿ ಪಡೆದಿದ್ದು, ಕಳೆದ ಕೆಲವು ವರ್ಷದಿಂದ ಅಕಾಡೆಮಿಯ ಸಂದೀಪನ್ ಚಂದಾ ಅವರೊಂದಿಗೆ ಕೆಲಸ ಮಾಡು ತ್ತಿದ್ದೇನೆ,ʼಎಂದು ವೈಶಾಲಿ ಹೇಳುತ್ತಾರೆ. ರಮೇಶ್ ಪ್ರಕಾರ,ʼಅಕಾಡೆಮಿ ತರಬೇತಿ ವೈಶಾಲಿ ಆಟದ ಮೇಲೆ ಅಗಾಧ ಪರಿಣಾಮ ಬೀರಿದೆʼ.

ವೈಶಾಲಿಗೆ 2023 ರ ಅರ್ಜುನ ಪ್ರಶಸ್ತಿ ಲಭ್ಯವಾಗಿದೆ. ʻಇಂತಹ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವುದು ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದು. ಅದೇ ದಿನ ರಮೇಶ್ ಸರ್ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ್ದರಿಂದ, ಇದು ತುಂಬಾ ವಿಶೇಷವಾಗಿತ್ತು,ʼಎಂದು ವೈಶಾಲಿ ಹೇಳುತ್ತಾರೆ.

Read More
Next Story