
ಬಿಹಾರದ ಬಳಿಕ ಬಂಗಾಳದತ್ತ ‘ಕಮಲ’ ದೃಷ್ಟಿ: ಮಮತಾ ಕೋಟೆ ಭೇದಿಸಲು ಮೋದಿಯವರ ‘ವಂದೇ ಮಾತರಂ’ ಅಸ್ತ್ರ!
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಅಲ್ಲಿ ತನ್ನ ದಿಗ್ವಿಜಯದ ಪತಾಕೆಯನ್ನು ಹಾರಿಸಲೇಬೇಕೆಂಬ ಶತಾಯ ಗತಾಯ ಪ್ರಯತ್ನದಲ್ಲಿದೆ ಬಿಜೆಪಿ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಐತಿಹಾಸಿಕ ಗೆಲುವು ಮತ್ತು ನಿತೀಶ್ ಕುಮಾರ್ ಅವರ 10ನೇ ಬಾರಿಯ ಪಟ್ಟಾಭಿಷೇಕದ ಬೆನ್ನಲ್ಲೇ, ಬಿಜೆಪಿಯ ಅಶ್ವಮೇಧ ಕುದುರೆ ಇದೀಗ ನೆರೆಯ ಪಶ್ಚಿಮ ಬಂಗಾಳದತ್ತ ಮುಖ ಮಾಡಿದೆ. 2026ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಭೇದಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದು, ಈ ಬಾರಿ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯನ್ನೇ ಪ್ರಬಲ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ರಣತಂತ್ರ ರೂಪಿಸಿದೆ.
294 ಕ್ಷೇತ್ರಗಳ ಗುರಿ: ಹಳೆಯ ಲೆಕ್ಕಾಚಾರ, ಹೊಸ ಹುಮ್ಮಸ್ಸು
ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೂನ್ಯದಿಂದ ಶಿಖರಕ್ಕೇರುವ ಪ್ರಯತ್ನ ಮಾಡಿತ್ತು. 2016ರವರೆಗೆ ಒಂದಂಕಿ ಸ್ಥಾನಗಳಿಗೆ ಸೀಮಿತವಾಗಿದ್ದ ಪಕ್ಷ, 2021ರಲ್ಲಿ ಬರೋಬ್ಬರಿ 77 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ದೀದಿ ಸರ್ಕಾರಕ್ಕೆ ನೇರ ಸೆಡ್ಡು ಹೊಡೆಯುವ ಹಂತಕ್ಕೆ ಬೆಳೆದಿದ್ದ ಬಿಜೆಪಿ, ಈ ಬಾರಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ಭಾವನಾತ್ಮಕ ಮತ್ತು ಸಾಂಘಿಕ ತಂತ್ರಗಾರಿಕೆಗಳನ್ನು ಒಟ್ಟೊಟ್ಟಿಗೆ ಹೆಣೆಯುತ್ತಿದೆ ಎಂದೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಇತಿಹಾಸವೂ ಇದೆ. ವರ್ತಮಾನವೂ ಇದೆ.
‘ವಂದೇ ಮಾತರಂ’ ಸುತ್ತ ಭಾವನಾತ್ಮಕ ಕಂದಕ!
ಬಂಗಾಳದ ನೆಲದ ಕವಿ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ‘ವಂದೇ ಮಾತರಂ’ ಗೀತೆಗೆ ಈಗ 150 ವರ್ಷ ತುಂಬುತ್ತಿದೆ. ಬಂಗಾಳದ ಅಸ್ಮಿತೆಯಾಗಿರುವ ಈ ಗೀತೆಯ ವರ್ಷಾಚರಣೆಯನ್ನು ಬಿಜೆಪಿ ಬೃಹತ್ ಮಟ್ಟದಲ್ಲಿ ಆಚರಿಸಲು ನಿರ್ಧರಿಸಿದ್ದು, ನವೆಂಬರ್ 7ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಎತ್ತಿರುವ ಹೊಸ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. "ವಂದೇ ಮಾತರಂನ ಮೂಲ ಹಾಡಿನಲ್ಲಿ ಮಾತೆ ದುರ್ಗೆಯನ್ನು ವರ್ಣಿಸುವ ಚರಣಗಳಿದ್ದವು. ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮುಸ್ಲಿಮರ ಅಸಮಾಧಾನದ ನೆಪವೊಡ್ಡಿ ಆ ಎರಡು ಚರಣಗಳನ್ನು ಕೈಬಿಟ್ಟರು," ಎಂದು ಮೋದಿ ನೇರ ಆರೋಪ ಮಾಡಿದ್ದಾರೆ. "ಕಾಂಗ್ರೆಸ್ ಮುಸ್ಲಿಂ ಓಲೈಕೆಗಾಗಿ ಬಂಕಿಮ ಚಂದ್ರರ ರಚನೆಯನ್ನು ವಿರೂಪಗೊಳಿಸಿತು ಮತ್ತು ಆ ಮೂಲಕ ಬಂಗಾಳಿ ಅಸ್ಮಿತೆಗೆ ಅವಮಾನ ಮಾಡಿತು," ಎಂಬ ಸಂದೇಶವನ್ನು ಬಂಗಾಳದ ಮತದಾರರಿಗೆ ತಲುಪಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂಬುದು ರಾಜಕೀಯ ಪರಿಣತರ ವಿಶ್ಲೇಷಣೆ.
ಸಂಸತ್ತಿನಲ್ಲಿ 10 ಗಂಟೆಗಳ ಚರ್ಚೆ
ಈ ವಿಷಯ ಕೇವಲ ಭಾಷಣಕ್ಕೆ ಸೀಮಿತವಾಗಿಲ್ಲ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷವು ‘ವಂದೇ ಮಾತರಂ’ ವಿಷಯದ ಮೇಲೆ ಬರೋಬ್ಬರಿ 10 ಗಂಟೆಗಳ ಸುದೀರ್ಘ ಚರ್ಚೆಯನ್ನು ನಡೆಸಿತು. ಪ್ರಧಾನಿ ಮೋದಿ ಸದನ ಪ್ರವೇಶಿಸುತ್ತಿದ್ದಂತೆಯೇ ಎನ್‌ಡಿಎ ಸಂಸದರು, "ಬಿಹಾರ ಕಿ ಜೀತ್ ಹಮಾರಿ ಹೈ, ಅಬ್ ಬಂಗಾಳ ಕಿ ಬಾರಿ ಹೈ" (ಬಿಹಾರ ನಮ್ಮದಾಗಿದೆ, ಈಗ ಬಂಗಾಳದ ಸರದಿ) ಎಂಬ ಘೋಷಣೆಗಳನ್ನು ಕೂಗಿದ್ದು, ಮುಂದಿನ ಗುರಿ ಯಾವುದು ಎಂಬುದನ್ನು ಸ್ಪಷ್ಟಪಡಿಸಿತು.
ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ, 1905ರ ಬಂಗಾಳ ವಿಭಜನೆಯ ವಿರುದ್ಧ ‘ವಂದೇ ಮಾತರಂ’ ಹೇಗೆ ಬಂಡೆಯಂತೆ ನಿಂತಿತ್ತು ಎಂಬುದನ್ನು ಸ್ಮರಿಸಿದರು. ಜೊತೆಗೆ, 1937ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ನೆಹರೂ ನಡುವಿನ ಪತ್ರವ್ಯವಹಾರವನ್ನು ಉಲ್ಲೇಖಿಸಿ, "ಮುಸ್ಲಿಂ ಲೀಗ್‌ಗೆ ಮಣಿದು ಅಂದಿನ ಕಾಂಗ್ರೆಸ್ ಈ ಹಾಡನ್ನು ವಿರೋಧಿಸಿತ್ತು," ಎಂದು ಇತಿಹಾಸವನ್ನು ಸ್ಮರಿಸಿದರು. ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯ ಮತ್ತು ಸ್ಫೂರ್ತಿಯನ್ನೂ ಪ್ರಸ್ತಾಪಿಸುವ ಮೂಲಕ ಬಂಗಾಳಿ ಭಾವನೆಗಳನ್ನು ತಟ್ಟುವ ಪ್ರಯತ್ನ ಮಾಡಿದರು.
ಪ್ರತಿಪಕ್ಷಗಳ ತಿರುಗೇಟು: ‘ಇದು ಚುನಾವಣಾ ನಾಟಕ’
ಬಿಜೆಪಿಯ ಈ ನಡೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲೇ ಆಕ್ಷೇಪ ವ್ಯಕ್ತಪಡಿಸಿ, "ಮೋದಿ ಮತ್ತು ಅವರ ತಂಡ ಬಂಗಾಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಳ್ಳು ಇತಿಹಾಸ ಹೇಳುವ ಮೂಲಕ ಹೈಡ್ರಾಮಾ ಸೃಷ್ಟಿಸುತ್ತಿದೆ," ಎಂದು ಗುಡುಗಿದ್ದಾರೆ.
ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ಬಿಜೆಪಿಗೆ ನೇತಾಜಿ, ಗಾಂಧೀಜಿ, ಬಂಕಿಮ ಚಂದ್ರ ಅಥವಾ ವಿದ್ಯಾಸಾಗರ್ ಅವರ ಮೇಲೆ ನಿಜವಾದ ಗೌರವವಿಲ್ಲ. ಬಂಗಾಳದ ಇತಿಹಾಸ ಮತ್ತು ಕೊಡುಗೆಯ ಅರಿವಿಲ್ಲದ ಇವರು ಕೇವಲ ರಾಜಕೀಯ ಲಾಭಕ್ಕಾಗಿ ಮಹಾನ್ ನಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದಾರೆ.
‘ಬೂತ್’ ಮಟ್ಟದಲ್ಲಿ ಬಿಜೆಪಿಯ ಸೈಲೆಂಟ್ ಆಪರೇಷನ್
ಭಾವನಾತ್ಮಕ ವಿಷಯಗಳ ಜೊತೆಗೆ ಸಾಂಘಿಕವಾಗಿಯೂ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಬಂಗಾಳದ ಒಟ್ಟು 91,000 ಬೂತ್‌ಗಳ ಪೈಕಿ, ಈಗಾಗಲೇ 70,000 ಕಡೆಗಳಲ್ಲಿ ಬೂತ್ ಸಮಿತಿಗಳನ್ನು ರಚಿಸಲಾಗಿದೆ. ಬಿಹಾರದಲ್ಲಿ ಯಶಸ್ವಿಯಾದ ಮಾದರಿಯಲ್ಲೇ, ಬಂಗಾಳದಲ್ಲೂ ಚುನಾವಣಾ ಆಯೋಗದ 'ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ' (SIR) ಪ್ರಕ್ರಿಯೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿ, ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕಮಲ ಪಾಳಯವಿದೆ.
ಟ್ಯಾಗೋರ್ ಗಡ್ಡದಿಂದ ಬಂಕಿಮರ ಗೀತೆವರೆಗೆ: ಮೋದಿ ಬತ್ತಳಿಕೆಯ ಹೊಸ ಬ್ರಹ್ಮಾಸ್ತ್ರ!
ರಾಜಕೀಯ ರಣರಂಗದಲ್ಲಿ ಎದುರಾಳಿಯ ಮನಸ್ಥಿತಿ ಮತ್ತು ಆ ನೆಲದ ಭಾವನೆಗಳನ್ನು ಅರಿತು ಅಸ್ತ್ರ ಪ್ರಯೋಗಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಸ್ಸೀಮರು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ 2021ರ ಪಶ್ಚಿಮ ಬಂಗಾಳ ಚುನಾವಣೆಯ ಸಮಯ.
ವಾಸ್ತವವಾಗಿ, 2020ರಲ್ಲಿ ಇಡೀ ಜಗತ್ತೇ ಕೋವಿಡ್ ಮಹಾಮಾರಿಗೆ ತತ್ತರಿಸಿದ್ದಾಗ, ಭಾರತದಲ್ಲೂ ದೀರ್ಘಕಾಲದ ಲಾಕ್‌ಡೌನ್ ಜಾರಿಯಲ್ಲಿತ್ತು. ಈ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಧಾನಿ ಮೋದಿ, ತಮ್ಮ ಗಡ್ಡವನ್ನು ಕತ್ತರಿಸದೇ ಹಾಗೆಯೇ ಬಿಟ್ಟಿದ್ದರು. ಆರಂಭದಲ್ಲಿ ಇದು ಕೋವಿಡ್ ಕಾಲದ ನಿರ್ಬಂಧ ಮತ್ತು ಸಂಯಮದ ಸಂಕೇತ ಎಂದೇ ಬಿಂಬಿತವಾಗಿತ್ತು. ಆದರೆ, ದಿನ ಕಳೆದಂತೆ ಆ ಉದ್ದನೆಯ ಬಿಳಿ ಗಡ್ಡ ಮತ್ತು ಅವರ ವೇಷಭೂಷಣದಲ್ಲಿನ ಬದಲಾವಣೆಗಳು ರಾಜಕೀಯ ತಿರುವು ಪಡೆದುಕೊಂಡವು.
ಸರಿಯಾಗಿ 2021ರ ಬಂಗಾಳ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಮೋದಿಯವರ ಈ 'ಋಷಿ ಸದೃಶ' ರೂಪವು ಬಂಗಾಳದ ಸಾಂಸ್ಕೃತಿಕ ಐಕಾನ್, ನೊಬೆಲ್ ವಿಜೇತ ಕವಿ ರವೀಂದ್ರನಾಥ ಟ್ಯಾಗೋರ್ ಅವರನ್ನೇ ಹೋಲುತ್ತಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದವು. ಅದು ಕೇವಲ ಕಾಕತಾಳೀಯವಾಗಿರದೆ, ಬಂಗಾಳಿ ಭದ್ರಕೋಟೆಯನ್ನು ಸಾಂಸ್ಕೃತಿಕವಾಗಿ ತಲುಪುವ ಮೃದು ತಂತ್ರವಾಗಿ ಮಾರ್ಪಟ್ಟಿತು. ಟ್ಯಾಗೋರ್ ಅವರಂತೆ ಕಾಣುವ ಮೂಲಕ ಬಂಗಾಳದ ಜನಮಾನಸಕ್ಕೆ ಹತ್ತಿರವಾಗುವ ಪ್ರಯತ್ನ ಅದಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು.
ಮುಂಬರುವ 2026ರ ಚುನಾವಣೆಗೆ ಮೋದಿ ಆಯ್ದುಕೊಂಡಿರುವುದು ಮೃದು ತಂತ್ರವನ್ನಲ್ಲ, ಬದಲಾಗಿ ‘ಕ್ರಾಂತಿಕಾರಿ’ ಮಾರ್ಗವನ್ನು. ಈ ಬಾರಿ ಅವರ ಕೈಯಲ್ಲಿರುವುದು ‘ವಂದೇ ಮಾತರಂ’ ಎನ್ನುವ ಜ್ವಲಂತ ಅಸ್ತ್ರ. ಕೋವಿಡ್ ಕಾಲದ ಮೌನ ಮತ್ತು ಧ್ಯಾನಸ್ಥ ಸ್ಥಿತಿಯ ಬದಲಿಗೆ, ಈಗ ಬಂಗಾಳದ ಮತ್ತೊಬ್ಬ ದಂತಕಥೆ ಬಂಕಿಮ ಚಂದ್ರ ಚಟರ್ಜಿ ಅವರ 150 ವರ್ಷದ ಇತಿಹಾಸವಿರುವ ಗೀತೆಯನ್ನು ಮುಂದಿಟ್ಟುಕೊಂಡು, ‘ಕಾಂಗ್ರೆಸ್ ಮತ್ತು ವಿಪಕ್ಷಗಳು ಬಂಗಾಳದ ಕವಿಗೆ ಅವಮಾನ ಮಾಡಿವೆ’ ಎಂಬ ಆಕ್ರೋಶದ ಕಿಡಿಯನ್ನು ಹೊತ್ತಿಸಿದ್ದಾರೆ. ಅಂದು ಟ್ಯಾಗೋರ್ ರೂಪಕದ ಮೂಲಕ ಸಾಂಸ್ಕೃತಿಕ ಸೌಹಾರ್ದತೆ ಬಯಸಿದ್ದ ಮೋದಿ, ಇಂದು ಬಂಕಿಮರ ಇತಿಹಾಸದ ಮೂಲಕ ‘ರಾಷ್ಟ್ರೀಯವಾದಿ’ ಅಲೆ ಎಬ್ಬಿಸಲು ಮುಂದಾಗಿದ್ದಾರೆ.

