
ಹೊಸೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಸ್ಟಾಲಿನ್
ಹೊಸೂರಿನಲ್ಲಿ ವರ್ಷಕ್ಕೆ 30 ದಶ ಲಕ್ಷ ಪ್ರಯಾಣಿಕರನ್ನುನಿರ್ವಹಿಸಬಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಸ್ಟಾಲಿನ್ ಹೇಳಿದರು.
ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ಗುರುವಾರ ಘೋಷಿಸಿದರು.
ವಿಮಾನ ನಿಲ್ದಾಣವು 2,000 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು, ವರ್ಷಕ್ಕೆ 30 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಿದೆ. ವಿಮಾನ ನಿಲ್ದಾಣವು ಹೊಸೂರು ಮಾತ್ರವಲ್ಲದೆ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಹೊಸೂರಿನ ಮಾಸ್ಟರ್ ಪ್ಲ್ಯಾನ್: ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಅವರು ಘೋಷಣೆ ಮಾಡಿದ್ದು, ವಿವಿಧ ರಾಜಕೀಯ ಪಕ್ಷಗಳು ಶ್ಲಾಘಿಸಿವೆ.
ʻ ಹೊಸೂರು ಜಿಲ್ಲೆ ಎಲೆಕ್ಟ್ರಾನಿಕ್ ವಾಹನ (ಇವಿಗಳು)ಕ್ಷೇತ್ರದಲ್ಲಿ ಪ್ರಮುಖ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಹೊಸೂರನ್ನು ಪ್ರಮುಖ ಆರ್ಥಿಕ ವಲಯವನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹೊಸೂರು, ಕೃಷ್ಣಗಿರಿ, ಧರ್ಮಪುರಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣದ ಅಗತ್ಯವಿದೆ. ವರ್ಷಕ್ಕೆ 30 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಬಲ್ಲ ವಿಮಾನ ನಿಲ್ದಾಣವನ್ನು 2,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು,ʼ ಎಂದು ಘೋಷಿಸಿದರು.
ʻಹೊಸೂರಿನ ಹೊಸ ಮಾಸ್ಟರ್ ಪ್ಲ್ಯಾನ್ ಮುಕ್ತಾಯದ ಹಂತದಲ್ಲಿದೆ. ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ತಮಿಳುನಾಡು ಎಲ್ಲ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸಿದೆ. 2022 ರ ರಫ್ತು ಸಿದ್ಧತೆ ಸೂಚ್ಯಂಕದಲ್ಲಿ ರಾಜ್ಯ ದೇಶದಲ್ಲಿ ಅಗ್ರಸ್ಥಾನಕ್ಕೆ ಏರಿದೆ,ʼ ಎಂದು ಹೇಳಿದರು.
ʻತಮಿಳುನಾಡು ಮೋಟಾರು ವಾಹನ, ಪೂರಕ ಭಾಗಗಳು, ಚರ್ಮದ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ದೇಶದ ಪ್ರಮುಖ ರಾಜ್ಯ. 2020ರಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಕೆಳ ಹಂತದಲ್ಲಿದ್ದ ತಮಿಳುನಾಡು ಈಗ ಉನ್ನತ ಕಾರ್ಯಕ್ಷಮತೆಯ ರಾಜ್ಯವಾಗಿದೆ. 2030 ರ ವೇಳೆಗೆ ರಾಜ್ಯವನ್ನು ಒಂದು ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ,ʼ ಎಂದು ಹೇಳಿದರು.
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ: ಬೆಂಗಳೂರು ಬಳಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಸ್ಟಾಲಿನ್ ಅವರ ಘೋಷಣೆ ಬಂದಿದೆ. ʻರಾಜಧಾನಿಯಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ತುಮಕೂರು ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ಆಡಳಿತಾರೂಢ ಕಾಂಗ್ರೆಸ್ ಹೇಳಿದೆ.
ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ, ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆಯನ್ನು ಶ್ಲಾಘಿಸಿದ್ದಾರೆ. ʻಹೊ ಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೊಸೂರು ಮಾತ್ರವಲ್ಲದೆ, ಧರ್ಮಪುರಿ ಮತ್ತು ಸೇಲಂಗೂ ಪ್ರಯೋಜನ ಆಗಲಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಉತ್ತೇಜನ ನೀಡುತ್ತದೆ,ʼ ಎಂದು ರಾಜಾ ಹೇಳಿದರು.
ಎರಡು ರಾಜ್ಯಕ್ಕೂ ನೆರವು: ಹೊಸೂರಿನ ವಿಮಾನ ನಿಲ್ದಾಣವು ತಮಿಳುನಾಡು ಮಾತ್ರವಲ್ಲದೆ ಕರ್ನಾಟಕಕ್ಕೂ ಉಪಯುಕ್ತ ಎಂದು ಅವರು ಹೇಳಿದರು. ಹೊಸೂರು ಬೆಂಗಳೂರಿನಿಂದ 40 ಕಿಲೋಮೀಟರ್ ದೂರದಲ್ಲಿದೆ. ʻಹೊಸೂರಿನಲ್ಲಿ ಅತ್ಯುತ್ತಮ ಹವಾಮಾನವಿದ್ದು, ಹೊಸ ವಿಮಾನ ನಿಲ್ದಾಣವು ಬೆಂಗಳೂರಿನೊಂದಿಗೆ ಅವಳಿ-ನಗರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ,ʼ ಎಂದು ರಾಜಾ ಹೇಳಿದರು.
ವರ್ಷದ ಆರಂಭದಲ್ಲಿ ಚೆನ್ನೈ ಮೆಟ್ರೋ ರೈಲು ಕಾರ್ಪೊರೇಷನ್ (ಸಿಎಂಆರ್‌ಎಲ್ ) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಬೊಮ್ಮಸಂದ್ರವನ್ನು ಹೊಸೂರಿಗೆ ಸಂಪರ್ಕಿಸಲು ಅಂತಾರಾಜ್ಯ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಎಂಆರ್‌ಟಿಎಸ್)ನ ಕಾರ್ಯಸಾಧ್ಯತೆ ಕುರಿತು ಅಧ್ಯಯನ ಮಾಡಲು ಸಲಹೆಗಾರರೊಂದಿಗೆ 29.44 ಲಕ್ಷ ರೂ. ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿತ್ತು. ಸುಮಾರು 20.5 ಕಿಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು,ಕರ್ನಾಟಕದಲ್ಲಿ 11.7 ಕಿಮೀ ಮತ್ತು ಉಳಿದದ್ದು ತಮಿಳುನಾಡಿನಲ್ಲಿ ಇರಲಿದೆ.