
ಸಾಂಧರ್ಭಿಕ ಚಿತ್ರ,
Supreme Court: ನವಜಾತ ಶಿಶುಗಳು ನಾಪತ್ತೆಯಾದರೆ ಆಸ್ಪತ್ರೆಯ ಪರವಾನಗಿ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.
ಮಕ್ಕಳ ಕಳ್ಳಸಾಗಣೆಯ ಗಂಭೀರ ಸಮಸ್ಯೆಯನ್ನು ಎದುರಿಸಲು ಸುಪ್ರೀಂ ಕೋರ್ಟ್ ಕಠಿಣ ಕ್ರಮಗಳನ್ನು ಪ್ರಕಟಿಸಿದ್ದು., ಯಾವುದೇ ನವಜಾತ ಶಿಶು ಕಾಣೆಯಾದರೆ ಆ ಆಸ್ಪತ್ರೆಯ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಈ ದುಷ್ಕೃತ್ಯ ತಡೆಗಟ್ಟಲು ವಿವಿಧ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಶೀಘ್ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವು, ಉತ್ತರ ಪ್ರದೇಶದಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ, ಗಂಡು ಮಗುವನ್ನು ಬಯಸಿದ ದಂಪತಿಗ ಶಿಶುವನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಬಳಿಕ ಅವರು ಸಿಕ್ಕಿ ಹಾಕಿಕೊಂಡಿದ್ದದ್ದರೂ, ಅಲಹಾಬಾದ್ ನ್ಯಾಯಾಲಯ ಜಾಮೀನು ನೀಡಿತ್ತು. ಆದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ವಜಾಗೊಳಿಸಿತಲ್ಲದೆ, ಇದು ಗೊತ್ತಿದ್ದೇ ಮಾಡಿದ ಅಪರಾಧ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ಆಕ್ಷೇಪ
ನ್ಯಾಯಾಲಯವು ಅಲಹಾಬಾದ್ ಹೈಕೋರ್ಟ್‌ನ ಜಾಮೀನು ಆದೇಶವನ್ನು "ನಿರ್ಲಕ್ಷ್ಯದಿಂದ ಕೈಗೊಂಡ ನಿರ್ಧಾರ" ಎಂದು ತರಾಟೆಗೆ ತೆಗೆದುಕೊಂಡಿದೆ. "ಜಾಮೀನು ನೀಡುವಾಗ ಕನಿಷ್ಠ ಪಕ್ಷ ಆರೋಪಿಗಳು ಪ್ರತಿ ವಾರ ಪೊಲೀಸ್ ಠಾಣೆಗೆ ಹಾಜರಾಗುವ ಷರತ್ತನ್ನಾದರೂ ವಿಧಿಸಬೇಕಿತ್ತು. ತೀರ್ಪಿನಿಂದಾಗಿ ಹಲವು ಆರೋಪಿಗಳು ಈಗ ಪರಾರಿಯಾಗಿದ್ದಾರೆ, ಇವರು ಸಮಾಜಕ್ಕೆ ಗಂಭೀರ ಬೆದರಿಕೆಯಾಗಿದ್ದಾರೆ," ಎಂದು ನ್ಯಾಯಪೀಠ ಹೇಳಿತು. ಜೊತೆಗೆ, ಉತ್ತರ ಪ್ರದೇಶ ಸರ್ಕಾರದ ನಿರಾಸಕ್ತಿಯನ್ನೂ ಖಂಡಿಸಿದ ನ್ಯಾಯಾಲಯ, "ರಾಜ್ಯ ಸರ್ಕಾರವು ಜಾಮೀನು ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ. ಈ ವಿಷಯದಲ್ಲಿ ಯಾವುದೇ ಗಂಭೀರತೆ ತೋರಿಲ್ಲ," ಎಂದು ಟೀಕಿಸಿತು.
ನ್ಯಾಯಮೂರ್ತಿ ಪಾರ್ದಿವಾಲಾ ಅವರು, "ಗಂಡು ಮಗುವನ್ನು ಬಯಸಿ ಕಳ್ಳಸಾಗಣೆಯಾದ ಶಿಶುವನ್ನು ಖರೀದಿಸುವುದು ಒಪ್ಪಿತ ಕೃತ್ಯವಲ್ಲ. ಮಗು ಖರೀದಿ ಮಾಡಿದವರಿಗೆ ಅದು ಕಳವಾದ್ದೆಂದು ತಿಳಿದಿತ್ತು, ಇದು ಕ್ಷಮಾರ್ಹವಲ್ಲ," ಎಂದು ಹೇಳಿದರು. ಈ ಆಧಾರದ ಮೇಲೆ, ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದರು. ಎಲ್ಲ ಆರೋಪಿಗಳು ತಕ್ಷಣ ಶರಣಾಗಿ ನ್ಯಾಯಾಂಗ ವಶಕ್ಕೆ ಒಳಪಡಬೇಕೆಂದು ಆದೇಶಿಸಿತು. .
ಸುಪ್ರೀಂ ಮಾರ್ಗಸೂಚಿಗಳು ಏನು?
- ಯಾವುದೇ ಆಸ್ಪತ್ರೆಯಿಂದ ನವಜಾತ ಶಿಶು ಕಾಣೆಯಾದರೆ ಅಥವಾ ಕಳ್ಳಸಾಗಣೆಯಾದರೆ, ಆ ಆಸ್ಪತ್ರೆಯ ಪರವಾನಗಿ ತಕ್ಷಣ ರದ್ದುಗೊಳಿಸಬೇಕು. "ಮಹಿಳೆಯೊಬ್ಬಳು ಹೆರಿಗೆಗಾಗಿ ಆಸ್ಪತ್ರೆಗೆ ಬಂದು, ಶಿಶು ಕಳವಾದರೆ, ಮೊದಲ ಕ್ರಮವಾಗಿ ಪರವಾನಗಿ ರದ್ದತಿಯಾಗಬೇಕು," ಎಂದು ನ್ಯಾಯಪೀಠ ಒತ್ತಿಹೇಳಿತು.
- ದೇಶಾದ್ಯಂತದ ಟ್ರಯಲ್ ನ್ಯಾಯಾಲಯಗಳು ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಈ ಪ್ರಕರಣಗಳಲ್ಲಿ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಆದೇಶಿಸಿತು.
- ಎಲ್ಲ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕಳ್ಳಸಾಗಣೆ ಪ್ರಕರಣಗಳ ಸ್ಥಿತಿಯನ್ನು ಪರಿಶೀಲಿಸಿ, ವಿಚಾರಣೆಯನ್ನು ತ್ವರಿತಗೊಳಿಸಲು ಸೂಕ್ತ ನಿರ್ದೇಶನಗಳನ್ನು ಹೊರಡಿಸಬೇಕು.
- ಇಂಡಿಯನ್ ಇನ್‌ಸ್ಟಿಟ್ಯೂಟ್ ಸಲ್ಲಿಸಿರುವ ಕಳ್ಳಸಾಗಣೆ ತಡೆಗಟ್ಟುವಿಕೆಯ ವರದಿಯನ್ನು ರಾಜ್ಯ ಸರ್ಕಾರಗಳು ಅಧ್ಯಯನ ಮಾಡಿ, ಅದರ ಶಿಫಾರಸುಗಳನ್ನು ಶೀಘ್ರ ಜಾರಿಗೊಳಿಸಬೇಕು. ಈ ನಿರ್ದೇಶನಗಳನ್ನು ಜಾರಿಗೆ ತರದಿದ್ದರೆ, ಅದನ್ನು ನ್ಯಾಯಾಂಗ ನಿಂದನೆಯಾಗಿ ಪರಿಗಣಿಸಲಾಗುವುದು.
- ಆರೋಪಿಗಳು ಪರಾರಿಯಾದರೆ, ವಿಚಾರಣಾ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿಗೊಳಿಸಬೇಕು. ಉಳಿದ ಆರೋಪಿಗಳ ವಿಚಾರಣೆಯನ್ನು ಯಾವುದೇ ವಿಳಂಬವಿಲ್ಲದೆ ಮುಂದುವರಿಸಬೇಕು. ವಾರಾಣಸಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಸೆಷನ್ಸ್ ಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸಿ, ಒಂದು ವಾರದಲ್ಲಿ ಆರೋಪ ನಿಗದಿಗೊಳಿಸಬೇಕು..
- "ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು. ಮಗು ಮೃತಪಟ್ಟಾಗ ಆಗುವ ದುಃಖಕ್ಕಿಂತ, ಕಳ್ಳಸಾಗಣೆಯಾದಾಗ ಆಗುವ ಯಾತನೆ ಭಿನ್ನವಾಗಿರುತ್ತದೆ. ಕಳವಾದ ಮಕ್ಕಳು ಕ್ರಿಮಿನಲ್ ಗ್ಯಾಂಗ್‌ಗಳ ಕೈಯಲ್ಲಿ ನಲುಗುತ್ತವೆ," ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಭಾವನಾತ್ಮಕವಾಗಿ ಹೇಳಿದರು.
ಭಾರತದಲ್ಲಿ ಮಕ್ಕಳ ಕಳ್ಳಸಾಗಣೆಯ ಗಂಭೀರ ಪ್ರಕರಣ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 2,000 ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ವರದಿಯಾಗುತ್ತವೆ. 2022ರಲ್ಲಿ 2,250 ಇಂತಹ ಪ್ರಕರಣಗಳು ದಾಖಲಾಗಿದ್ದು, ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ. ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಕಾನೂನಿನ ಕಟ್ಟುನಿಟ್ಟಾದ ಜಾರಿಯ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.