ಹುಸಿ ಬಾಂಬ್ ಬೆದರಿಕೆ: ಶಿಕ್ಷಕರಿಗೆ ತರಬೇತಿ ನೀಡಲು ನಿರ್ಧರಿಸಿದ ದೆಹಲಿ ಪೊಲೀಸರು
ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದರೆ ಗಲಿಬಿಲಿಗೆ ಒಳಗಾಗದೇ ಪೊಲೀಸರಿಗೆ ಹೇಗೆ ಮಾಹಿತಿ ನೀಡಬೇಕು ಹಾಗೂ ಪ್ರತಿಕ್ರಿಯಿಸಬೇಕು ಮತ್ತು ಸಮನ್ವಯಗೊಳಿಸಬೇಕು ಎಂಬುದರ ಕುರಿತು ದೆಹಲಿ ಪೊಲೀಸರು ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ
ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬರುತ್ತಿರುವುದು ಮಾಮೂಲಿಯಾಗಿದೆ. ಆಗಾಗೆ ಬಾಂಬ್ ಬೆದರಿಕೆಗಳು ಭೀತಿ ಉಂಟುಮಾಡುತ್ತಿರುವುದರಿಂದ, ಇಂತಹ ಬಿಕ್ಕಟ್ಟನ್ನು ಶಾಂತವಾಗಿ ನಿಭಾಯಿಸಲು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ತರಬೇತಿ ನೀಡಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪೊಲೀಸರು ವಿಚಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೆಮಿನಾರ್ ಯಾವುದರ ಬಗ್ಗೆ ಇರುತ್ತದೆ
"ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದ ಸಮಯದಲ್ಲಿ ಶಾಂತವಾಗಿರಲು, ಸಮರ್ಪಕವಾಗಿ ಪ್ರತಿಕ್ರಿಯಿಸಲು ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ನಾವು ಅವರಿಗೆ ಕಲಿಸುತ್ತೇವೆ" ಎಂದು ಉಪ ಪೊಲೀಸ್ ಆಯುಕ್ತ (ಶಹದಾರಾ) ಪ್ರಶಾಂತ್ ಗೌತಮ್ ಸೋಮವಾರ (ಡಿಸೆಂಬರ್ 23) ಹೇಳಿದ್ದಾರೆ.
ತರಬೇತಿ ಅಧಿವೇಶನವು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಅವರು ಹೇಳಿದರು.
ಹುಸಿ ಬಾಂಬ್ ಬೆದರಿಕೆಗಳ ಸಂಕಷ್ಟ
ಕಳೆದ 10 ದಿನಗಳಲ್ಲಿ ದೆಹಲಿಯ ಅನೇಕ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಬೆದರಿಕೆಗಳು ತರಗತಿಗಳಿಗೆ ಅಡ್ಡಿ ಉಂಟು ಮಾಡಿದ್ದವು. ತನಿಖಾ ಏಜೆನ್ಸಿಗಳು ಗಂಭೀರವಾಗಿ ತನಿಖೆ ನಡೆಸುವಂತಾಗಿದೆ. ಎರಡು ಪ್ರಕರಣಗಳಲ್ಲಿ, ಬೆದರಿಕೆ ಮೇಲ್ ಕಳುಹಿಸಿದವರು ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.