ಫತೇಪುರ್‌ನಲ್ಲಿ ಮುಸ್ಲಿಮರ ಸಮಾಧಿ ಧ್ವಂಸಗೊಳಿಸಿದ ಹಿಂದೂಗಳ ಗುಂಪು
x

ಫತೇಪುರ್‌ನಲ್ಲಿ ಮುಸ್ಲಿಮರ ಸಮಾಧಿ ಧ್ವಂಸಗೊಳಿಸಿದ ಹಿಂದೂಗಳ ಗುಂಪು

ಘಟನಾ ಸ್ಥಳದ ವಿಡಿಯೋಗಳಲ್ಲಿ, ಕೇಸರಿ ಧ್ವಜಗಳನ್ನು ಹಿಡಿದ ಗುಂಪೊಂದು ಸಮಾಧಿಯ ಸುತ್ತ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.


ಉತ್ತರ ಪ್ರದೇಶದ ಫತೇಪುರ್‌ನಲ್ಲಿರುವ ಮುಸ್ಲಿಮರ ಸಮಾಧಿಯೊಂದನ್ನು, ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ, ಹಿಂದೂ ಸಂಘಟನೆಗಳ ಸದಸ್ಯರು ಸೋಮವಾರ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಂತಿ ಕಾಪಾಡಲು ಜಿಲ್ಲಾಡಳಿತವು ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

ಘಟನಾ ಸ್ಥಳದ ವಿಡಿಯೋಗಳಲ್ಲಿ, ಕೇಸರಿ ಧ್ವಜಗಳನ್ನು ಹಿಡಿದ ಗುಂಪೊಂದು ಸಮಾಧಿಯ ಸುತ್ತ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತವು ತಕ್ಷಣವೇ ಕಾರ್ಯಪ್ರವೃತ್ತವಾಗಿ, ವಿವಾದಿತ ಸ್ಥಳದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಪಡೆಯನ್ನು (PAC) ನಿಯೋಜಿಸಿದೆ.

ವಿವಾದದ ಹಿನ್ನೆಲೆ

ಬಜರಂಗದಳ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಸದಸ್ಯರು, ಅಬು ನಗರದಲ್ಲಿರುವ ಈ ಸಮಾಧಿಯ ಬಳಿ ದೊಣ್ಣೆಗಳೊಂದಿಗೆ ಜಮಾಯಿಸಿ, ಈ ಕಟ್ಟಡವು ದೇವಾಲಯವಾಗಿದ್ದು, ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಬಜರಂಗದಳದ ಫತೇಪುರ್ ಜಿಲ್ಲಾ ಸಹ ಸಂಚಾಲಕ ಧರ್ಮೇಂದ್ರ ಸಿಂಗ್, "ಮಧ್ಯಾಹ್ನ ನಾವು ಇಲ್ಲಿ ಪೂಜೆ ಸಲ್ಲಿಸುತ್ತೇವೆ, ತಾಕತ್ತಿದ್ದರೆ ನಮ್ಮನ್ನು ತಡೆಯಿರಿ. ಹಿಂದೂ ಧರ್ಮದಲ್ಲಿ ಪೂಜೆ ಸಲ್ಲಿಸುವ ನಮ್ಮ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅವರು ಸಮಾಧಿ ಎಂದು ಹೇಳುತ್ತಿರುವುದು ನಮ್ಮ ದೇವಾಲಯ" ಎಂದು ಆಡಳಿತಕ್ಕೆ ಸವಾಲು ಹಾಕಿದ್ದಾರೆ. ಈ ಕೃತ್ಯವನ್ನು ವಿರೋಧಿಸಿದ ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರು ಕಲ್ಲು ತೂರಾಟ ನಡೆಸಿದರು.

ಸರ್ಕಾರಿ ದಾಖಲೆಗಳಲ್ಲಿ 'ಮಕ್ಬರಾ ಮಂಗಿ' ಎಂದು ಅಧಿಕೃತವಾಗಿ ನೋಂದಣಿಯಾಗಿರುವ ಈ ಸಮಾಧಿಯು, 'ಮಠ ಮಂದಿರ ಸಂರಕ್ಷಣಾ ಸಂಘರ್ಷ ಸಮಿತಿ' ಮತ್ತು ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಇದು ಠಾಕೂರ್ಜಿ (ಶ್ರೀಕೃಷ್ಣ) ಮತ್ತು ಶಿವನಿಗೆ ಸಮರ್ಪಿತವಾದ ಸಾವಿರ ವರ್ಷಗಳಷ್ಟು ಹಳೆಯ ದೇವಾಲಯ ಎಂದು ಹೇಳಲು ಆರಂಭಿಸಿದ ಬಳಿಕ ವಿವಾದದ ಕೇಂದ್ರ ಬಿಂದುವಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಮುಖ್ಲಾಲ್ ಪಾಲ್ ಅವರು ಈ ಸಮಾಧಿಯು ಮೂಲತಃ ದೇವಾಲಯವಾಗಿದ್ದು, ಕಾಲಾನಂತರದಲ್ಲಿ ಅದನ್ನು ಪರಿವರ್ತಿಸಲಾಗಿದೆ ಎಂದು ಆರೋಪಿಸಿದ ನಂತರ ವಿವಾದಕ್ಕೆ ಕಿಡಿ ಹೊತ್ತಿಕೊಂಡಿತು. ಇದರ ಬೆನ್ನಲ್ಲೇ, ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ವೀರೇಂದ್ರ ಪಾಂಡೆ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ನಂತರವೇ, ಹಿಂದೂ ಸಂಘಟನೆಗಳ ಸದಸ್ಯರು ಸಮಾಧಿಯ ಆವರಣಕ್ಕೆ ನುಗ್ಗಿ, ಹೊರಗಿನ ಪ್ರದೇಶವನ್ನು ಧ್ವಂಸಗೊಳಿಸಿದ್ದಾರೆ.

ಇತಿಹಾಸ ತಿರುಚುವ ಯತ್ನ ಎಂದು ಆರೋಪ

ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ 'ರಾಷ್ಟ್ರೀಯ ಉಲೇಮಾ ಕೌನ್ಸಿಲ್'ನ ರಾಷ್ಟ್ರೀಯ ಕಾರ್ಯದರ್ಶಿ ಮೊ ನಸೀಮ್, "ಇದು ಇತಿಹಾಸವನ್ನು ತಿರುಚಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ" ಎಂದು ಆರೋಪಿಸಿದ್ದಾರೆ. ಜಿಲ್ಲಾಡಳಿತವು ಈ ಕೃತ್ಯವನ್ನು ತಡೆಯಲು ವಿಫಲವಾದರೆ, ಕೌನ್ಸಿಲ್ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Read More
Next Story