
ಹಿಮಾಚಲ ಪ್ರದೇಶ: ಹಠಾತ್ ಪ್ರವಾಹ, 45 ಜನರ ಪತ್ತೆಗೆ ಕಾರ್ಯಾಚರಣೆ
ಶಿಮ್ಲಾ, ಆಗಸ್ಟ್ 2: ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದ ನಂತರ ಕಾಣೆಯಾಗಿರುವ 45 ಕ್ಕೂ ಹೆಚ್ಚು ಜನರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿದ್ಯುತ್ ಯೋಜನೆಯ ಸ್ಥಳದಲ್ಲಿ ಸಿಲುಕಿಕೊಂಡಿದ್ದ 29 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ.
ಬುಧವಾರ ಸಂಭವಿಸಿದ ಮೇಘಸ್ಫೋಟದಿಂದ ಕುಲುವಿನ ನಿರ್ಮಂದ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾ ಜಿಲ್ಲೆಯ ರಾಮ್‌ಪುರದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು 45 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕುಲು ಜಿಲ್ಲೆಯ ಮಣಿಕರನ್ ಪ್ರದೇಶದಲ್ಲಿ ಮಲಾನಾ 2 ವಿದ್ಯುತ್ ಯೋಜನೆಯಲ್ಲಿ ಮೂವತ್ಮೂರು ಜನರು ಸಿಲುಕಿಕೊಂಡರು. ಇವರಲ್ಲಿ 29 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕುಲು ಜಿಲ್ಲಾಧಿಕಾರಿ ತೋರುಲ್ ಎಸ್. ರವೀಶ್ ತಿಳಿಸಿದ್ದಾರೆ.
ಶಿಮ್ಲಾ ಜಿಲ್ಲೆಯ ರಾಮ್‌ಪುರ ಉಪವಿಭಾಗದ ಸಮೇಜ್ ಖುದ್ ಪ್ರದೇಶದ ಶ್ರೀಖಂಡ್ ಮಹಾದೇವ್ ಬಳಿ ಸಂಭವಿಸಿದ ಮೇಘಸ್ಫೋಟದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ. ʻನಾವು ಸುಮಾರು 100 ಕಿಮೀ ಪ್ರದೇಶವನ್ನು ಹುಡುಕಬೇಕಿದೆ. ಅವುಗಳಲ್ಲಿ ಕೆಲವು ದುರ್ಗಮವಾಗಿವೆ. ಕಾಣೆಯಾದ ಜನರನ್ನು ಪತ್ತೆಹಚ್ಚಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ,ʼ ಎಂದು ಅವರು ಹೇಳಿದರು.
ಜೂನ್ 27 ರಂದು ಮುಂಗಾರು ಪ್ರಾರಂಭವಾದಾಗಿನಿಂದ ಈವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 73 ಜನರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯ 649 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.