ಮೇಘಸ್ಪೋಟದಿಂದ  ಶಿಮ್ಲಾ,ಮಂಡಿ ಜಿಲ್ಲೆಗಳಲ್ಲಿ ಭಾರಿ ಮಳೆ: 3 ಸಾವು, 40 ಮಂದಿ ನಾಪತ್ತೆ
x

ಮೇಘಸ್ಪೋಟದಿಂದ ಶಿಮ್ಲಾ,ಮಂಡಿ ಜಿಲ್ಲೆಗಳಲ್ಲಿ ಭಾರಿ ಮಳೆ: 3 ಸಾವು, 40 ಮಂದಿ ನಾಪತ್ತೆ

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಮೇಘಸ್ಫೋಟದ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ತುರ್ತು ಸಭೆ ಕರೆದಿದ್ದಾರೆ.


ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಮೂವರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ. ಮಳೆಯಿಂದ ಅನೇಕ ಮನೆಗಳು ಮತ್ತು ರಸ್ತೆಗಳು ಕೊಚ್ಚಿಹೋಗಿವೆ. ಎರಡು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶಿಮ್ಲಾ ಜಿಲ್ಲೆಯ ರಾಮ್‌ಪುರ ಉಪವಿಭಾಗದ ಸಮಗ್ ಖುದ್ (ನಲ್ಲ) ನಲ್ಲಿ ಮೇಘಸ್ಫೋಟದಿಂದ ಇಬ್ಬರು ಸಾವಿಗೀಡಾಗಿದ್ದು, 28 ಮಂದಿ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ. ʻಮೇಘಸ್ಫೋಟ ಮಧ್ಯರಾತ್ರಿ 1 ಗಂಟೆಗೆ ಸಂಭವಿಸಿದೆ. ರಸ್ತೆಗಳು ಕೊಚ್ಚಿಹೋಗಿರುವುದರಿಂದ, ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ ಎಂದು ಜಿಲ್ಲಾಧಿಕಾರಿ (ಡಿಸಿ) ಅನುಪಮ್ ಕಶ್ಯಪ್ ಹೇಳಿದ್ದಾರೆ.

ಅಪಾರ ಹಾನಿ: ಭಾರೀ ಮಳೆ ಮತ್ತು ಮೇಘಸ್ಫೋಟದಿಂದ ಅಪಾರ ಹಾನಿಯಾಗಿದೆ ಎಂದು ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿದೆ. ನಾಲ್ಕು ಸೇತುವೆಗಳು ಮತ್ತು ಕಾಲುಸೇತುವೆಗಳು ಕೊಚ್ಚಿ ಹೋಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಸೇಬು ಬೆಳೆಗೆ ಹಾನಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್, ಪೊಲೀಸರು ಮತ್ತು ಗೃಹ ರಕ್ಷಕರ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ನಾಪತ್ತೆಯಾದವರ ಪತ್ತೆಗೆ ಡ್ರೋನ್‌ಗಳ ಸಹಾಯ ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಡಿಸಿ ಮತ್ತು ಎಸ್ಪಿ ಹೇಳಿದರು.

ಮಂಡಿ ಜಿಲ್ಲೆಯಲ್ಲಿ ಮೇಘಸ್ಫೋಟ: ಬುಧವಾರ ರಾತ್ರಿ ಮಂಡಿ ಜಿಲ್ಲೆಯ ಪಾಧಾರ್‌ನ ತಾಲಾತುಖೋಡ್ ಪ್ರದೇಶದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಕೆಲವು ಮನೆಗಳು ಕುಸಿದಿದ್ದು, ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಮಂಡಿ ಜಿಲ್ಲಾಡಳಿತವು ಭಾರತೀಯ ವಾಯುಪಡೆ ಮತ್ತು ಎನ್‌ಡಿಆರ್‌ಎಫ್‌ನಿಂದ ನೆರವು ಕೋರಿದೆ.

ಬಿಯಾಸ್ ನದಿ ಉಕ್ಕಿ ಹರಿಯುತ್ತಿರುವುದರಿಂದ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಹಲವು ಕಡೆ ಹಾನಿಯಾಗಿದೆ. ಕುಲುವಿನ ಭಾಗಿಪುಲ್‌ನಲ್ಲಿ ಮನೆಗಳಿಗೆ ಹಾನಿಯಾಗಿದೆ ಮತ್ತು ಕುಲುವಿನ ಭುಂತರ್ ಪ್ರದೇಶದಲ್ಲಿ ಪಾರ್ವತಿ ನದಿ ಮತ್ತು ಮಲಾನಾ ಖುದ್ ಪ್ರವಾಹಕ್ಕೆ ಸಿಲುಕಿದ್ದು, ಮಲಾನಾ 1 ಮತ್ತು 2 ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಧಕ್ಕೆ: ಭೂಕುಸಿತದಿಂದ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಗೆ ಧಕ್ಕೆಯಾಗಿದ್ದು, ಬಿಯಾಸ್ ನದಿಯ ನೀರು ಮಂಡಿಯ ಪಾಂಡೋದಲ್ಲಿ ಕೆಲವು ಮನೆಗಳಿಗೆ ನುಗ್ಗಿದೆ. ಈ ಪ್ರದೇಶದಲ್ಲಿ ಹಲವರು ನಾಪತ್ತೆಯಾಗಿದ್ದು, ಮನೆಗಳು ಮತ್ತು ಅಂಗಡಿಗಳು ಕೊಚ್ಚಿಹೋಗಿದೆ. ಈ ಪ್ರದೇಶಗಳಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಘಸ್ಫೋಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಚಿವಾಲಯದಲ್ಲಿ ತುರ್ತು ಸಭೆ ಕರೆದಿದ್ದಾರೆ.

Read More
Next Story