
ಹಿಮಾಚಲದಲ್ಲಿ ದಲಿತ ವಿದ್ಯಾರ್ಥಿನಿ ಸಾವು: ಪ್ರಾಧ್ಯಾಪಕನ ಅಮಾನತು
ಆರೋಪಿ ಪ್ರಾಧ್ಯಾಪಕ ಅಶೋಕ್ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ, ರಾಗಿಂಗ್ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಸರ್ಕಾರಿ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿನಿಯ ಸಾವಿನ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ಅಶೋಕ್ ಶರ್ಮಾ ಅವರನ್ನು ರಾಜ್ಯ ಸರ್ಕಾರ ಶನಿವಾರ ಅಮಾನತುಗೊಳಿಸಿದೆ.
ವಿದ್ಯಾರ್ಥಿನಿಯು ಸಾವಿಗೂ ಮುನ್ನ ಪ್ರಾಧ್ಯಾಪಕನ ಹೆಸರನ್ನು ಉಲ್ಲೇಖಿಸಿ ಮಾಡಿದ್ದ ವಿಡಿಯೋ ಹೇಳಿಕೆಯ ಆಧಾರದ ಮೇಲೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ ಬೆನ್ನಲ್ಲೇ ಈ ಅಮಾನತು ಆದೇಶ ಹೊರಬಿದ್ದಿದೆ. ಈ ಪ್ರಕರಣವು ಕೇವಲ ಲೈಂಗಿಕ ಕಿರುಕುಳಕ್ಕೆ ಸೀಮಿತವಾಗದೆ, ಕಾಲೇಜಿನಲ್ಲಿ ನಡೆದ ರಾಗಿಂಗ್ ಮತ್ತು ಜಾತಿ ನಿಂದನೆಯ ಕರಾಳ ಮುಖವನ್ನೂ ಅನಾವರಣಗೊಳಿಸಿದೆ.
ಲೈಂಗಿಕ ಕಿರುಕುಳ ಆರೋಪ
ವಿದ್ಯಾರ್ಥಿನಿಯ ತಂದೆ ನೀಡಿರುವ ದೂರಿನ ಪ್ರಕಾರ, 2025ರ ಸೆಪ್ಟೆಂಬರ್‌ನಲ್ಲಿ ಮೂವರು ಹಿರಿಯ ವಿದ್ಯಾರ್ಥಿನಿಯರು ತನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕ ಅಶೋಕ್ ಶರ್ಮಾ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಈ ಘಟನೆಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯ ಆರೋಗ್ಯ ಕ್ಷೀಣಿಸತೊಡಗಿತ್ತು. ಡಿಸೆಂಬರ್ 26ರಂದು ಲೂಧಿಯಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (NCW) ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಿವೆ. ಮಹಿಳಾ ಆಯೋಗವು ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮತ್ತು ಪೋಸ್ಟ್‌ಮಾರ್ಟಂ ವರದಿಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ.
ಸದ್ಯ ಆರೋಪಿ ಪ್ರಾಧ್ಯಾಪಕ ಅಶೋಕ್ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ, ರಾಗಿಂಗ್ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿದ್ಯಾರ್ಥಿನಿಯ ಕೊನೆಯ ವಿಡಿಯೋದಲ್ಲಿ, ಆಕೆ ಪ್ರಾಧ್ಯಾಪಕನ ಕಿರುಕುಳದ ಬಗ್ಗೆ ಕಣ್ಣೀರು ಹಾಕುತ್ತಾ ವಿವರಿಸಿದ್ದಾಳೆ. ಆದರೆ, ಆರೋಪಿ ಪ್ರಾಧ್ಯಾಪಕ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಈ ನಡುವೆ ಅಂಬೇಡ್ಕರ್ ಮಹಾಸಭಾ ಸಂಘಟನೆಯು ಧರ್ಮಶಾಲಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ವಿಫಲವಾಗಿದ್ದಾರೆ ಮತ್ತು ಇದು ಕೇವಲ ಸಾವಲ್ಲ, ಬದಲಾಗಿ ವ್ಯವಸ್ಥಿತ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರವು ಈ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಉನ್ನತ ಮಟ್ಟದ ಸಮಿತಿಗೆ ಸೂಚಿಸಿದೆ.

