Hema Committee fallout: ಮುಖೇಶ್, ಜಯಸೂರ್ಯ ವಿರುದ್ಧ ಪ್ರಕರಣ ದಾಖಲು
x
ನಟ ಮುಖೇಶ್‌

Hema Committee fallout: ಮುಖೇಶ್, ಜಯಸೂರ್ಯ ವಿರುದ್ಧ ಪ್ರಕರಣ ದಾಖಲು


ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಶೋಷಣೆ ಮತ್ತು ದುರ್ವರ್ತನೆ ಆರೋಪಗಳ ತನಿಖೆ ವೇಗ ಪಡೆದುಕೊಳ್ಳುತ್ತಿದೆ. ನಟರಾದ ಮುಖೇಶ್, ಜಯಸೂರ್ಯ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ಸಂತ್ರಸ್ತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ.

ನಟ ಮತ್ತು ಆಡಳಿತಾರೂಢ ಸಿಪಿಐ(ಎಂ) ಶಾಸಕ ಎಂ.ಮುಖೇಶ್ ಅವರು ಕೆಲವು ವರ್ಷಗಳ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದ್ದರು ಎಂದು ನಟಿಯೊಬ್ಬರು ಆರೋಪಿಸಿದ ನಂತರ ಅವರ ವಿರುದ್ಧ ಬುಧವಾರ ತಡರಾತ್ರಿ ಕೊಚ್ಚಿ ನಗರದ ಮರಡು ಪೊಲೀಸ್ ಠಾಣೆಯಲ್ಲಿ ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಟ ಜಯಸೂರ್ಯ ವಿರುದ್ಧ ದೂರು/ಆರೋಪ ಬಂದ ನಂತರ ಬುಧವಾರ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ನಟರಾದ ಎಡವೇಲ ಬಾಬು ಮತ್ತು ಮಣಿಯನಪಿಳ್ಳ ರಾಜು ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.

ಸಿದ್ದಿಕ್, ರಂಜಿತ್ ವಿರುದ್ಧ ಪ್ರಕರಣ: ಎಂಟು ವರ್ಷ(2009)ಗಳ ಹಿಂದೆ ಹೋಟೆಲ್‌ವೊಂದರಲ್ಲಿ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಸಿದ್ದಿಕ್ ವಿರುದ್ಧ ತಿರುವನಂತಪುರಂ ಮ್ಯೂಸಿಯಂ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದರು. ಸಿದ್ದಿಕ್ ಆನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಂಜಿತ್‌ ವಿರುದ್ಧ ಪಶ್ಚಿಮ ಬಂಗಾಳದ ನಟಿ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 354 (ದೌರ್ಜನ್ಯ ಅಥವಾ ಕ್ರಿಮಿನಲ್ ಬಲಪ್ರಯೋಗ) ಪ್ರಕರಣ ದಾಖಲಾಗಿದೆ. ಪಲೇರಿ ಮಾಣಿಕ್ಯಂ ಚಿತ್ರದಲ್ಲಿ ನಟಿಸಲು ಆಹ್ವಾನ ನೀಡಿದ ನಿರ್ದೇಶಕರು, ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ನಟಿ ಆರೋಪಿಸಿದ್ದರು. ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಟಿ ಮೇಲಿನ ಹಲ್ಲೆ ಪ್ರಕರಣದ ನಂತರ ಕೇರಳ ಸರ್ಕಾರ ನ್ಯಾ.ಹೇಮಾ ಸಮಿತಿಯನ್ನು ರಚಿಸಿತು. ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ನಟಿಯರಿಗೆ ಕಿರುಕುಳ ಮತ್ತು ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿತು. ರಾಜ್ಯ ಸರ್ಕಾರ ಆಗಸ್ಟ್ 25 ರಂದು ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಿತು. ಸಮಿತಿಗೆ ದೂರುಗಳು ಹರಿದು ಬಂದಿವೆ.

Read More
Next Story