ತಮಿಳುನಾಡಿನಲ್ಲಿ ವರುಣಾರ್ಭಟ: ಒಂದು ಸಾವು, 13 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
x

ತಮಿಳುನಾಡಿನಲ್ಲಿ ವರುಣಾರ್ಭಟ: ಒಂದು ಸಾವು, 13 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ಕಳೆದ 24 ಗಂಟೆಗಳಲ್ಲಿ ತಿರುನಲ್ವೇಲಿ ಜಿಲ್ಲೆಯಲ್ಲಿ ಸರಾಸರಿ 93.96 ಮಿ.ಮೀ ಮಳೆಯಾಗಿದ್ದರೆ, ತೂತುಕುಡಿಯಲ್ಲಿ 61.17 ಮಿ.ಮೀ ಮತ್ತು ತೆಂಕಶಿಯಲ್ಲಿ 57.55 ಮಿ.ಮೀ ಮಳೆಯಾಗಿದೆ.


Click the Play button to hear this message in audio format

ಈಶಾನ್ಯ ಮುಂಗಾರು ಚುರುಕುಗೊಂಡಿರುವ ಪರಿಣಾಮ ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಜಿಲ್ಲೆ ತೂತುಕುಡಿಯಲ್ಲಿ ವೃದ್ಧರೊಬ್ಬರು ಮಳೆಗೆ ಬಲಿಯಾಗಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಲವು ಜಿಲ್ಲೆಗಳಿಗೆ ‘ಆರೆಂಜ್’ ಮತ್ತು ‘ಯೆ ಎಲ್ಲೋ’ ಅಲರ್ಟ್ ಘೋಷಿಸಿದೆ.

ತೂತುಕುಡಿ ಪಟ್ಟಣದ ನಾವಲ್ ನಗರದಲ್ಲಿ 75 ವರ್ಷದ ಪಳನಿಯಾಂಡಿ ಎಂಬುವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದು, ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಅರಿಯದೇ ಸ್ಪರ್ಶಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ರಾಮೇಶ್ವರಂನ ಪಂಬನ್ ಬಳಿ ಸಮುದ್ರದ ಅಬ್ಬರಕ್ಕೆ ಲಂಗರು ಹಾಕಿದ್ದ ನಾಡದೋಣಿಯೊಂದು ಮುಳುಗಡೆಯಾಗಿದೆ. ತಗ್ಗು ಪ್ರದೇಶಗಳಾದ ತೂತುಕುಡಿ, ತಿರುನಲ್ವೇಲಿ ಮತ್ತು ತೆಂಕಶಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ.

13 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಎಸ್‌ಡಿಆರ್‌ಎಫ್‌ ನಿಯೋಜನೆ

ಮಳೆಯ ತೀವ್ರತೆ ಹೆಚ್ಚಿರುವ ಕಾರಣ ತೂತುಕುಡಿ, ತಿರುನಲ್ವೇಲಿ, ತೆಂಕಶಿ, ಕನ್ಯಾಕುಮಾರಿ ಸೇರಿದಂತೆ 13 ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಇಂದು (ಸೋಮವಾರ) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ತೂತುಕುಡಿ ಜಿಲ್ಲೆಯ ಮರುದೂರ್ ಮತ್ತು ಶ್ರೀವೈಕುಂಠಂ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ತಾಮಿರಭರಣಿ ನದಿಗೆ ಬಿಡಲಾಗುತ್ತಿದೆ. ಸಂಸದೆ ಕನಿಮೊಳಿ ಅವರು ಅಥೂರ್ ಸೇತುವೆ ಮತ್ತು ತಾಮಿರಭರಣಿ ನದಿ ತೀರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯ ಪ್ರಮಾಣ ಮತ್ತು ಹವಾಮಾನ ಮುನ್ಸೂಚನೆ

ಕಳೆದ 24 ಗಂಟೆಗಳಲ್ಲಿ ತಿರುನಲ್ವೇಲಿ ಜಿಲ್ಲೆಯಲ್ಲಿ ಸರಾಸರಿ 93.96 ಮಿ.ಮೀ ಮಳೆಯಾಗಿದ್ದರೆ, ತೂತುಕುಡಿಯಲ್ಲಿ 61.17 ಮಿ.ಮೀ ಮತ್ತು ತೆಂಕಶಿಯಲ್ಲಿ 57.55 ಮಿ.ಮೀ ಮಳೆಯಾಗಿದೆ. ಮಲಕ್ಕಾ ಜಲಸಂಧಿ, ಕೊಮೊರಿನ್ ಪ್ರದೇಶ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೂರು ಪ್ರತ್ಯೇಕ ವಾಯುಭಾರ ಕುಸಿತಗಳೇ ಈ ಬಾರಿ ಮಳೆಗೆ ಕಾರಣ ಎಂದು ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಬಿ.ಅಮುದಾ ತಿಳಿಸಿದ್ದಾರೆ.

ಪುದುಚೇರಿಯಲ್ಲೂ ಜನಜೀವನ ಅಸ್ತವ್ಯಸ್ತ

ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಕಾರೈಕಲ್‌ನಲ್ಲೂ ಶನಿವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಲ್ಲಿನ ಶಿಕ್ಷಣ ಸಚಿವ ಎ. ನಮಶಿವಾಯಂ ಅವರ ಆದೇಶದ ಮೇರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅನಗತ್ಯ ಪ್ರಯಾಣ ಮಾಡದಂತೆ ನಾಗರಿಕರಿಗೆ ಸೂಚಿಸಲಾಗಿದೆ.

Read More
Next Story