
ಮಹಾರಾಷ್ಟ್ರದ ಮುಂಬೈನಲ್ಲಿ ಶನಿವಾರ ರಾತ್ರಿ ಭಾರಿ ಮಳೆಯ ನಡುವೆಯೂ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ: 10 ಸಾವು, 11,800ಕ್ಕೂ ಹೆಚ್ಚು ಜನರ ಸ್ಥಳಾಂತರ
ಮಹಾರಾಷ್ಟ್ರದಲ್ಲಿ ಸತತ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮುಂಬೈ ಸೇರಿದಂತೆ ಹಲವು ಹಲವು ಕಡೆಗಳಲ್ಲಿ ಸೋಮವಾರ 'ರೆಡ್' ಮತ್ತು 'ಆರೆಂಜ್' ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಮಹಾರಾಷ್ಟ್ರದಾದ್ಯಂತ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಿಗೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧೆಡೆ 11,800 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಸೋಮವಾರ ಸತತ ಮೂರನೇ ದಿನವೂ ಭಾರೀ ಮಳೆ ಮುಂದುವರೆದಿದ್ದು, ಮುಂಬೈ ಸೇರಿದಂತೆ ಹಲವೆಡೆ ಸೋಮವಾರ 'ರೆಡ್' ಮತ್ತು 'ಆರೆಂಜ್' ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ರಕ್ಷಣಾ ಕಾರ್ಯಾಚರಣೆ ಚುರುಕು
ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಲ್ಲಿ ತೀವ್ರ ರಕ್ಷಣಭಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಸಿಕ್ ಜಿಲ್ಲೆಯಲ್ಲಿ ಮನೆ ಕುಸಿತದಿಂದ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಧಾರ್ಶಿವ ಮತ್ತು ಅಹಿಲ್ಯಾನಗರದಲ್ಲಿ ತಲಾ ಒಬ್ಬರು, ಹಾಗೂ ಜಲ್ನಾ ಮತ್ತು ಯವತ್ಮಲ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಥಾಣೆ ಜಿಲ್ಲೆಯ ಭಿವಾಂಡಿ ತಾಲ್ಲೂಕಿನಲ್ಲಿ 71 ಕುಟುಂಬಗಳ 262 ಜನರನ್ನು ರಕ್ಷಿಸಲಾಗಿದೆ. ಬೀಡ್‌ನಲ್ಲಿ ಎನ್‌ಡಿಆರ್‌ಎಫ್ ಸಾಂಗ್ವಿ ದೇವಸ್ಥಾನದಲ್ಲಿ ಸಿಲುಕಿದ್ದ 12 ಮಂದಿ ನಿವಾಸಿಗಳನ್ನು ರಕ್ಷಿಸಿದೆ.
ಭಾರೀ ಮಳೆ ಮುನ್ಸೂಚನೆ
ಸೆಪ್ಟೆಂಬರ್ 29 ರಂದು ಮುಂಜಾನೆ 6.32 ರ ಹೊತ್ತಿಗೆ ನಾಸಿಕ್, ಪಾಲ್ಘರ್, ಥಾಣೆ, ಮುಂಬೈ ಸಿಟಿ, ಮುಂಬೈ ಉಪನಗರ, ರಾಯಗಢ ಮತ್ತು ಪುಣೆ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ, ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮರಾಠವಾಡದಲ್ಲಿ ಭಾರಿ ಹಾನಿ
ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಮರಾಠವಾಡವೂ ಒಂದು. ಗೋದಾವರಿ ನದಿಯ ಜಯಕ್ವಾಡಿ ಅಣೆಕಟ್ಟಿಗೆ ಒಳಹರಿವು ಹೆಚ್ಚಾದ ಕಾರಣ, ಅಧಿಕಾರಿಗಳು ಅದರ ಎಲ್ಲಾ ಗೇಟ್‌ಗಳನಕ್ನು ತೆರೆದರು. ಪ್ರವಾಹದ ಭೀತಿಯಿಂದ ಛತ್ರಪತಿ ಸಂಭಾಜಿನಗರದ ಪೈಥಾನ್‌ನಲ್ಲಿ ಸುಮಾರು 7,000 ಜನರನ್ನು ಸ್ಥಳಾಂತರಿಸಲಾಯಿತು. ಜಿಲ್ಲೆಯ ಹರ್ಸುಲ್ ಸರ್ಕಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 196 ಮಿ.ಮೀ ಮಳೆಯಾಗಿದೆ. ಬೀಡ್, ನಾಂದೇಡ್ ಮತ್ತು ಪರ್ಬನಿ ಸೇರಿ ಮರಾಠವಾಡದ ಇತರ ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗಿದೆ.
ಮುಂಬೈನಲ್ಲಿ ಜೋರು ಮಳೆ
ಶನಿವಾರ ರಾತ್ರಿಯಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಭಾನುವಾರವೂ ಕೂಡ ನಗರ ಮತ್ತು ಉಪನಗರಗಳಲ್ಲಿ ಭಾರೀ ಮಳೆಯಾಗಿದೆ. ಆದರೂ ಹಿಂಡ್ಮತಾ, ಗಾಂಧಿ ಮಾರುಕಟ್ಟೆ, ಚುನಭಟ್ಟಿ, ಮತ್ತು ಮಾಲಾಡ್, ದಹಿಸಾರ್ ಮತ್ತು ಮಾನ್ಖುರ್ದ್ ಅಂಡರ್‌ಪಾಸ್ ಮತ್ತು ಜಂಕ್ಷನ್‌ಗಳಲ್ಲಿ ನೀರು ತುಂಬಿದೆ ಎಂದು ವರದಿಯಾಗಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಐದು ಗಂಟೆಗಳಲ್ಲಿ ದ್ವೀಪ ನಗರದಲ್ಲಿ ಸರಾಸರಿ 47.47 ಮಿ.ಮೀ, ಪಶ್ಚಿಮ ಉಪನಗರಗಳಲ್ಲಿ 53.61 ಮಿ.ಮೀ ಮತ್ತು ಪೂರ್ವ ಉಪನಗರಗಳಲ್ಲಿ 37.92 ಮಿ.ಮೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ನಾಸಿಕ್‌ನಲ್ಲಿ ಗೋದಾವರಿ ನದಿ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿದೆ. ರಾಮ್‌ಕುಂಡ್ ಪ್ರದೇಶದ ಕೆಲ ದೇವಾಲಯಗಳು ಮುಳುಗಿವೆ. ಛತ್ರಪತಿ ಸಂಭಾಜಿನಗರದ ಜಯಕ್ವಾಡಿ ಅಣೆಕಟ್ಟಿನಿಂದ ನೀರು ಬಿಡುಗಡೆ ಪ್ರಮಾಣ ಭಾನುವಾರ ರಾತ್ರಿ 10.30 ಕ್ಕೆ 2.92 ಲಕ್ಷ ಕ್ಯುಸೆಕ್ ಇತ್ತು.
ಸಿಎಂ ಮಳೆಹಾನಿ ಪರಿಶೀಲನೆ
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮರಾಠವಾಡ ಮತ್ತು ಸೊಲ್ಲಾಪುರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮಳೆಯ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದ್ದಾರೆ. ಮಳೆಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ದೇಶಿಸಿದರು. ಪ್ರಸ್ತುತ, ಮಹಾರಾಷ್ಟ್ರದಾದ್ಯಂತ 16 ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ತುರ್ತು ಸಹಾಯಕ್ಕಾಗಿ ರಾಜ್ಯ ವಿಪತ್ತು ನಿಯಂತ್ರಣ ಕೊಠಡಿ ಸಂಪರ್ಕಿಸಲು ಜನರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.