ಭಾರೀ ಮಳೆ: ಅಮರನಾಥ ಯಾತ್ರೆ ಸ್ಥಗಿತ
x

ಭಾರೀ ಮಳೆ: ಅಮರನಾಥ ಯಾತ್ರೆ ಸ್ಥಗಿತ

ಯಾತ್ರಾ ಮಾರ್ಗಗಳಲ್ಲಿ ಎರಡು ದಿನಗಳ ಕಾಲ ಹವಾಮಾನ ವೈಪರೀತ್ಯದ ಎಚ್ಚರಿಕೆಯನ್ನು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ, ಅಮರನಾಥ ಯಾತ್ರೆಯನ್ನು ಗುರುವಾರದಿಂದ (ಜುಲೈ 17) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಜಮ್ಮುವಿನಿಂದ ಯಾತ್ರೆಗೆ ಹೊರಡಲು ಸಿದ್ಧವಾಗಿದ್ದ ಯಾತ್ರಿಗಳ ಹೊಸ ತಂಡಕ್ಕೆ ಬಾಲ್ಟಾಲ್ ಮತ್ತು ಪಹಲ್ಗಾಮ್ ಮೂಲ ಶಿಬಿರಗಳತ್ತ ಸಾಗಲು ಅವಕಾಶ ನೀಡಲಾಗಿಲ್ಲ.

ಯಾತ್ರಾ ಮಾರ್ಗಗಳಲ್ಲಿ ಎರಡು ದಿನಗಳ ಕಾಲ ಹವಾಮಾನ ವೈಪರೀತ್ಯದ ಎಚ್ಚರಿಕೆಯನ್ನು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ಜಮ್ಮುವಿನಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿರುವುದು ಇದೇ ಮೊದಲು.

ಇದಕ್ಕೂ ಮುನ್ನ, ಗಂಡರ್‌ಬಾಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಮೃತಪಟ್ಟು, ಮೂವರು ಗಾಯಗೊಂಡಿದ್ದರು.

ಜುಲೈ 3 ರಂದು ಆರಂಭವಾದ ಈ ಯಾತ್ರೆಯಲ್ಲಿ ಇಲ್ಲಿಯವರೆಗೆ 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹೆಯಲ್ಲಿ 2.35 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ದರ್ಶನ ಪಡೆದಿದ್ದಾರೆ. ಜುಲೈ 2 ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೊದಲ ತಂಡಕ್ಕೆ ಚಾಲನೆ ನೀಡಿದ ನಂತರ ಜಮ್ಮು ಮೂಲ ಶಿಬಿರದಿಂದ 1,01,553 ಯಾತ್ರಿಗಳು ಕಾಶ್ಮೀರ ಕಣಿವೆಯತ್ತ ಪ್ರಯಾಣಿಸಿದ್ದಾರೆ. ಪ್ರಸ್ತುತ, 4 ಲಕ್ಷಕ್ಕೂ ಹೆಚ್ಚು ಜನರು ಯಾತ್ರೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 5.10 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗದ ದರ್ಶನ ಪಡೆದಿದ್ದರು. ಒಟ್ಟು 38 ದಿನಗಳ ಈ ಯಾತ್ರೆಯು ಆಗಸ್ಟ್ 9 ರಂದು ಸಮಾಪ್ತಿಯಾಗಲಿದೆ.

Read More
Next Story