ತಮಿಳುನಾಡು: ಬಿಜೆಪಿಯ ತ್ರಿವರ್ಣ ಧ್ವಜ ರ‍್ಯಾಲಿಗೆ ಹೈಕೋರ್ಟ್ ಅನುಮತಿ
ಚೆನ್ನೈ: ರಾಜ್ಯದಲ್ಲಿ ಬಿಜೆಪಿಯ ‘ತ್ರಿವರ್ಣ ಧ್ವಜ ರ‍್ಯಾಲಿ’ಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಧ್ವಜ ಹಿಡಿದು ಮೋಟಾರ್‌ಸೈಕಲ್ ಅಥವಾ ಬೈಸಿಕಲ್ ಅಥವಾ ಕಾಲ್ನಡಿಗೆ ರ‍್ಯಾಲಿಯನ್ನು ನಿಷೇಧಿಸದಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತ್ರಿವರ್ಣ ಧ್ವಜಕ್ಕೆ ಸರಿಯಾದ ಗೌರವ ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.
ಬಿಜೆಪಿ ಯುವ ಮೋರ್ಚಾದ ಕೊಯಮತ್ತೂರು ಜಿಲ್ಲಾ ಕಾರ್ಯದರ್ಶಿ ಎ. ಕೃಷ್ಣಪ್ರಸಾತ್ ಅವರು ಕೋವೈ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜಿ ಜಯಚಂದ್ರನ್ ಅವರು ಈ ನಿರ್ದೇಶನ ನೀಡಿದ್ದಾರೆ. ರಾಜ್ಯವನ್ನು ಡಿಜಿಪಿ ಪ್ರತಿನಿಧಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಆರ್.ಸಿ. ಪೌಲ್ ಕನಕರಾಜ್ ಪ್ರಕಾರ, ನ್ಯಾಯಾಲಯದ ಆದೇಶ ಕೊಯಮತ್ತೂರಿಗೆ ಮಾತ್ರ ಸೀಮಿತವಾಗಿಲ್ಲ; ರಾಜ್ಯದಾದ್ಯಂತ ಅನ್ವಯಿಸುತ್ತದೆ.
ಸಂಘಟಕರು-ಭಾಗವಹಿಸುವವರು ರಾಷ್ಟ್ರಧ್ವಜವನ್ನು ಗೌರವಿಸಬೇಕು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಮೂಲಕ ಹಾದುಹೋಗಬೇಕು, ಭಾಗವಹಿಸಲಿರುವ ವ್ಯಕ್ತಿಗಳ ಸಂಖ್ಯೆ ಮತ್ತು ಯಾವ ಮಾರ್ಗದಲ್ಲಿ ಚಲಿಸುತ್ತಾರೆ ಎಂಬ ಮಾಹಿತಿ ನೀಡಬೇಕು ಹಾಗೂ ಪೊಲೀಸರು ರಕ್ಷಣೆ ನೀಡಬೇಕಾದ ಸಮಯವನ್ನು ಸಹ ತಿಳಿಸಬೇಕು ಎಂದು ಶರತ್ತು ವಿಧಿಸಿದ್ದಾರೆ. ಅನುಮತಿ ಸ್ವಾತಂತ್ರ್ಯ ದಿನಾಚರಣೆಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಬೇರೆ ಯಾವುದೇ ದಿನಕ್ಕೆ ಅಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ದೇಶಕ್ಕಾಗಿ ಪ್ರಾಣ, ಆತ್ಮ ಮತ್ತು ಮನಸ್ಸನ್ನು ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಲು ಮತ್ತು ಅವರ ಹೋರಾಟದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಕೃಷ್ಣಪ್ರಸಾತ್ ತಿಳಿಸಿದ್ದಾರೆ.