ಶಾಜಿಯಾ ಇಲ್ಮಿ ಅವರ ವಿಡಿಯೋ ತೆಗೆದುಹಾಕಿ: ಸರ್ದೇಸಾಯಿ ಅವರಿಗೆ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ವಿಡಿಯೋ ಜರ್ನಲಿಸ್ಟ್ ಅವರನ್ನು ನಿಂದಿಸುತ್ತಿದ್ದಾರೆ ಎಂದು ತೋರಿಸುವ ಆಕ್ಷೇಪಾರ್ಹ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಸಂವಾದ ಕಾರ್ಯಕ್ರಮ ಮುಗಿದ ನಂತರ ಮತ್ತು ತಮ್ಮ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿರುವುದರಿಂದ ಮಾನನಷ್ಟವಾಗಿದೆ ಮತ್ತು ಖಾಸಗಿತನದ ಉಲ್ಲಂಘನೆಯಾಗಿದೆ ಎಂಬ ಇಲ್ಮಿ ಅವರ ಮನವಿ ಮೇರೆಗೆ ನ್ಯಾ. ಮನ್ಮೀತ್ ಪಿಎಸ್ ಅರೋರಾ ಅವರು ಮಧ್ಯಂತರ ಆದೇಶ ನೀಡಿದರು.
ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 16 ರಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.
ನ್ಯಾಯಾಧೀಶರು ವಿಡಿಯೋದ ಲೇಖನವನ್ನು ದಾಖಲಿಸಲು ಕಕ್ಷಿದಾರರನ್ನು ಕೇಳಿದರು. ಈ ದೃಶ್ಯಾವಳಿಗಳನ್ನು ಬಳಸಲು ಸರ್ದೇಸಾಯಿ ಅವರಿಗೆ ಮಾಧ್ಯಮ ಸಂಸ್ಥೆ ಅನುಮತಿ ನೀಡಿದೆಯೇ ಎಂದು ಕೇಳಿದ ನ್ಯಾಯಾಲಯ, ಆ ಬಗ್ಗೆ ವಿವರ ತೆಗೆದುಕೊಳ್ಳುವಂತೆ ಅವರ ವಕೀಲರನ್ನು ಕೇಳಿತು.
ಕಳೆದ ತಿಂಗಳು ಅಗ್ನಿವೀರ್ ಕಾರ್ಯಕ್ರಮ ಕುರಿತು ಸುದ್ದಿವಾಹಿನಿಯಲ್ಲಿ ಸರ್ದೇಸಾಯಿ ನಡೆಸಿದ ಚರ್ಚೆಯಲ್ಲಿ ಇಲ್ಮಿ ಭಾಗವಹಿಸಿದ ನಂತರ ವಿವಾದ ಹುಟ್ಟಿಕೊಂಡಿತು. ಇಬ್ಬರ ನಡುವೆ ಕೆಲವು ತೀಕ್ಷ್ಣ ಮಾತುಕತೆ ಬಳಿಕ ಇಲ್ಮಿ ಕಾರ್ಯಕ್ರಮದಿಂದ ಮಧ್ಯದಲ್ಲೇ ಹೊರನಡೆದರು. ಆನಂತರ ಸರ್ದೇಸಾಯಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ಮತ್ತು ಪೋಸ್ಟ್ ಆಕ್ಷೇಪಾರ್ಹ ಮತ್ತು ತಮ್ಮ ಖಾಸಗಿತನದ ಉಲ್ಲಂಘನೆ ಎಂದು ಇಲ್ಮಿ ದೂರಿದರು.
ʻಕಾರ್ಯಕ್ರಮ ಮುಗಿಯಿತು, ಒಪ್ಪಿಗೆಯೂ ಮುಗಿಯಿತು. ಆನಂತರ, ನನ್ನ ಒಪ್ಪಿಗೆಯಿಲ್ಲದೆ ನನ್ನ ವೈಯಕ್ತಿಕತೆಗೆ ಭಂಗ ತರುವಂತಿಲ್ಲ,ʼ ಎಂದು ಇಲ್ಮಿ ಅವರ ವಕೀಲರು ವಾದಿಸಿದರು.