
ಸ್ಟಾಲಿನ್
ಬೇಗ ಮಕ್ಕಳು ಮಾಡಿಕೊಳ್ಳಿ; ನವವಿವಾಹಿತರಿಗೆ ತಮಿಳುನಾಡು ಸಿಎಂ ಕರೆ
ತಮಿಳುನಾಡು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗಡಿ ನಿರ್ಣಯವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ನಡೆಯುವ ಹಿನ್ನೆಲೆಯಲ್ಲಿ ನವದಂಪತಿ ಬೇಗ ಮಕ್ಕಳನ್ನು ಹೆರಬೇಕು ಎಂದು ಸಿಎಂ ಸ್ಟಾಲಿನ್ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಗೆ ಯತ್ನಿಸುತ್ತಿರುವುದನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಆದಷ್ಟು ಬೇಗ ಮಕ್ಕಳನ್ನು ಮಾಡಿಕೊಳ್ಳಿ ಎಂದು ರಾಜ್ಯದ ನವವಿವಾಹಿತರಿಗೆ ಕರೆ ಕೊಟ್ಟಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ನಡೆಸುವುದರಿಂದ ರಾಜ್ಯಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ನಾಗಪಟ್ಟಣಂನಲ್ಲಿ ಡಿಎಂಕೆ ಜಿಲ್ಲಾ ಕಾರ್ಯದರ್ಶಿಯೊಬ್ಬರ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, “ಮೊದಲು ನಾನು ಕೂಡ ಮದುವೆಯಾದ ಕೂಡಲೇ ಮಕ್ಕಳನ್ನು ಮಾಡಿಕೊಳ್ಳಬೇಡಿ, ಇಬ್ಬರಿಗೂ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೊಡಿ ಎಂದು ಹೇಳುತ್ತಿದ್ದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೆ ಮಾತ್ರ ನಮಗೆ ಹೆಚ್ಚಿನ ಸಂಸತ್ ಸ್ಥಾನಗಳು ಲಭ್ಯವಾಗುವ ಪರಿಸ್ಥಿತಿ ಇದೆ. ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಸಂಸತ್ ಸ್ಥಾನಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುವುದನ್ನು ತಡೆಯಬೇಕಾದರೆ ಆದಷ್ಟು ಬೇಗ ಮಕ್ಕಳನ್ನು ಪಡೆಯಿರಿ. ಅವರಿಗೆ ಸುಂದರವಾದ ತಮಿಳು ಹೆಸರು ನೀಡಿ” ಎಂದು ಮನವಿ ಮಾಡಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಸರ್ಕಾರ ನಡೆಸಿರುವ ಕಸರತ್ತನ್ನು ತಮಿಳುನಾಡು ಸಿಎಂ ಸ್ಟಾಲಿನ್ ಅವರು "ತಮಿಳುನಾಡಿನ ತಲೆಯ ಮೇಲೆ ನೇತಾಡುವ ಕತ್ತಿ" ಎಂದು ವ್ಯಾಖ್ಯಾನಿಸಿದ್ದಾರೆ. ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ತಂದರೆ ದಕ್ಷಿಣ ಭಾರತದ ರಾಜ್ಯಗಳು ಲೋಕಸಭೆಯಲ್ಲಿ "ಪ್ರಾತಿನಿಧ್ಯ ಕಳೆದುಕೊಳ್ಳುತ್ತವೆ" ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ನೆಪದಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಮಾರ್ಚ್ 5 ರಂದು ಕ್ಷೇತ್ರ ಪುನರ್‌ವಿಂಗಡನೆ ವಿಷಯದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದೆ. ರಾಜ್ಯದ ಹಿತದೃಷ್ಟಿಯಿಂದ ರಾಜ್ಯದ ಬಿಜೆಪಿ ಸಂಸದರು ಸಭೆಯನ್ನು ಬಹಿಷ್ಕರಿಸಿ ಎಂದು ಮನವಿ ಮಾಡಿದ್ದಾರೆ.
"ತಮಿಳುನಾಡಿಗೆ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆ ಮಾಡುವ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಕ್ಷೇತ್ರ ಪುನರ್ವಿಂಗಡಣೆ ಕುರಿತು ನಮ್ಮ ನಿಲುವನ್ನು ಚರ್ಚಿಸಲು ನಾನೂ ಕೂಡ ಮಾರ್ಚ್ 5 ರಂದು ಸರ್ವಪಕ್ಷ ಸಭೆ ಕರೆದಿದ್ದೇನೆ. ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿರುವ ನಲವತ್ತು ಪಕ್ಷಗಳನ್ನು ಸಭೆಗೆ ಆಹ್ವಾನಿಸಿದ್ದೇನೆ. ಅವರಲ್ಲಿ ಹೆಚ್ಚಿನವರು ರಾಜ್ಯ ಸರ್ಕಾರದ ಅಭಿಪ್ರಾಯ ಗೌರವಿಸಿದರೆ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ಇದು ಡಿಎಂಕೆಯ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯದ ಕಲ್ಯಾಣ ಮತ್ತು ಅದರ ಹಕ್ಕುಗಳಿಗಾಗಿ ಎಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ನಾನು ಮತ್ತೊಮ್ಮೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಫೆ. 25 ರಂದು ಸಿಎಂ ಸ್ಟಾಲಿನ್ ಅವರು ತಮಿಳುನಾಡಿನಲ್ಲಿ ಕುಟುಂಬ ಯೋಜನಾ ನೀತಿಗಳ ಯಶಸ್ವಿ ಅನುಷ್ಠಾನವು ರಾಜ್ಯವನ್ನು ಅನನುಕೂಲ ಸ್ಥಿತಿಗೆ ತಳ್ಳಿದೆ ಎಂದು ಹೇಳಿದ್ದರು. ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ತಂದರೆ ತಮಿಳುನಾಡು ಎಂಟು ಸಂಸದರನ್ನು ಕಳೆದುಕೊಳ್ಳಲಿದೆ. ಇದರಿಂದ ಸಂಸತ್ತಿನಲ್ಲಿ ತಮಿಳುನಾಡು ಪ್ರಾತಿನಿಧ್ಯ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸ್ಟಾಲಿನ್‌ಗೆ ಬಿಜೆಪಿ ತಿರುಗೇಟು
ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ಪಕ್ಷದ ವಕ್ತಾರ ಸಿ.ಆರ್. ಕೇಶವನ್ ಪ್ರತಿಕ್ರಿಯಿಸಿ, "ಹತಾಶ ಮತ್ತು ಅಪ್ರಾಮಾಣಿಕವಾಗಿ ದಿಕ್ಕು ತಪ್ಪಿಸುವ ನಾಟಕದಲ್ಲಿ ಡಿಎಂಕೆ, ರಾಹುಲ್ ಗಾಂಧಿ ನಿರತರಾಗಿದ್ದಾರೆ. ರಾಹುಲ್ ಗಾಂಧಿ ಅವರ 'ಜಿತ್ನಿ ಅಬಾದಿ, ಉತ್ನಾ ಹಕ್' ಹೇಳಿಕೆಗೆ ಅಂದರೆ ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳು ಎಂಬ ಕರೆಗೆ ವಿವರಣೆ ನೀಡುವ ಧೈರ್ಯವಿದೆಯೇ?, ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಡಿಎಂಕೆ ವಿರುದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
"ದುರಾಡಳಿತದಿಂದ ಜನರ ಗಮನ ಬೇರೆಡೆಗೆ ತಿರುಗಿಸಲು" ಡಿಎಂಕೆ ಇಂತಹ ತಪ್ಪು ಮಾಹಿತಿ ಅಭಿಯಾನದಲ್ಲಿ ತೊಡಗಿದೆ ಎಂದು ಕೇಶವನ್ ಆರೋಪಿಸಿದ್ದಾರೆ.