Haryana polls | ಕಾಂಗ್ರೆಸ್ ನೋವಿನ ದಶಕವನ್ನು ಕೊನೆಗೊಳಿಸಲಿದೆ: ರಾಹುಲ್
ಹರಿಯಾಣದಲ್ಲಿಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು ʻನೋವಿನ ದಶಕʼವನ್ನುಕೊನೆಗೊಳಿಸಲಿದೆ; ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಪಕ್ಷ ಸಂಕಲ್ಪ ಮಾಡಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದರು.
ರಾಹುಲ್ ಬಿಡುಗಡೆ ಮಾಡಿದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ರೈತರ ಕಲ್ಯಾಣಕ್ಕೆ ಆಯೋಗ ಸ್ಥಾಪನೆ, ಹುತಾತ್ಮ ಯೋಧರ ಕುಟುಂಬಗಳಿಗೆ 2 ಕೋಟಿ ರೂ., ಹರ್ಯಾಣ ಅಲ್ಪಸಂಖ್ಯಾತ ಆಯೋಗದ ಮರುರಚನೆ ಹಾಗೂ ಕಾರ್ಮಿಕರನ್ನು ಹೆಚ್ಚು ಸಂಖ್ಯೆಯಲ್ಲಿ ನೇಮಿಸಿಕೊಳ್ಳುವ ಕೈಗಾರಿಕೆಗಳ ಸ್ಥಾಪನೆ ಇತ್ಯಾದಿ ಭರವಸೆಗಳಿವೆ.
ʻಬಿಜೆಪಿ ಹರಿಯಾಣದ ಏಳಿಗೆ, ಕನಸುಗಳು ಮತ್ತು ಅಧಿಕಾರವನ್ನು ಕಿತ್ತುಕೊಂಡಿದೆ,ʼ ಎಂದು ರಾಹುಲ್ ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
ʻಅಗ್ನಿವೀರ್ ಯೋಜನೆ ದೇಶಭಕ್ತ ಯುವಜನರ ಆಕಾಂಕ್ಷೆಗಳನ್ನು ಕಸಿದುಕೊಂಡಿದೆ, ನಿರುದ್ಯೋಗವು ಕುಟುಂಬಗಳ ನಗುವನ್ನು ಕಿತ್ತುಕೊಂಡಿದೆ ಮತ್ತು ಹಣದುಬ್ಬರವು ಮಹಿಳೆಯರ ಸ್ವಾವಲಂಬನೆಯನ್ನು ಕಸಿದಿದೆ. ಕಪ್ಪು ಕಾನೂನುಗಳ ಮೂಲಕ ಅವರು ರೈತರ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸಿದರು; ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಮೂಲಕ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಲಾಭ ಕಸಿದುಕೊಂಡರು. ತಮ್ಮ ಆಯ್ದ ʻಸ್ನೇಹಿತರಿಗೆʼ ಅನುಕೂಲವಾಗುವಂತೆ ಹರಿಯಾಣದ ಸ್ವಾಭಿಮಾನವನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.
ಎರಡು ಲಕ್ಷ ಖಾಯಂ ಉದ್ಯೋಗ, ಡ್ರಗ್ ಮುಕ್ತ ಹರಿಯಾಣ, 25 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮಹಿಳೆಯರಿಗೆ ಮಾಸಿಕ 2,000 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್, ಬಡವರಿಗೆ 100 ಗಜಗಳ ಪ್ಲಾಟ್, 3.5 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿ ಮನೆ, ಹಳೆಯ ಪಿಂಚಣಿ ಯೋಜನೆ, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ 6,000 ರೂ. ಪಿಂಚಣಿ, 300 ಯೂನಿಟ್ ಉಚಿತ ವಿದ್ಯುತ್, ರೈತರಿಗೆ ಎಂಎಸ್‌ಪಿ ಖಾತರಿ, ತಕ್ಷಣ ಬೆಳೆ ಪರಿಹಾರ, ಜಾತಿ ಗಣತಿ ಮತ್ತು ಕೆನೆ ಪದರ ಮೀಸಲು ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಳದ ಭರವಸೆ ನೀಡಲಾಗಿದೆ.
ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್, ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.
ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅ.8 ರಂದು ಫಲಿತಾಂಶ ಪ್ರಕಟವಾಗಲಿದೆ.