Haryana polls | ಬಿಜೆಪಿಯ ಭರವಸೆಗಳು ಎಂದೂ ಈಡೇರುವುದಿಲ್ಲ: ಖರ್ಗೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆಶ್ವಾಸನೆಗಳನ್ನು ನೀಡುವಲ್ಲಿ ನಿಪುಣರು. ಅವರ ಯಾವುದೇ ಭರವಸೆಗಳು ಎಂದಿಗೂ ಈಡೇರುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ (ಅ.2) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ʻʻಪ್ರಧಾನಿ ನರೇಂದ್ರ ಮೋದಿ ಸುಳ್ಳು ಆಶ್ವಾಸನೆಗಳನ್ನು ನೀಡುವಲ್ಲಿ ನಿಪುಣರು. ಅವರ ಯಾವುದೇ ಭರವಸೆಗಳು ಎಂದಿಗೂ ಈಡೇರುವುದಿಲ್ಲʼʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ (ಅ.2) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಂಡೀಗಢದ ಚಾರ್ಕಿ ದಾದ್ರಿ ಜಿಲ್ಲೆಯ ಬಧ್ರಾದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ. ಮಹಾತ್ಮ ಗಾಂಧಿ ಅವರು ನಮಗೆ ಸತ್ಯ ಮತ್ತು ಅಹಿಂಸೆಯನ್ನು ಕಲಿಸಿದ್ದಾರೆ. ಆದರೆ ಅಧಿಕಾರದಲ್ಲಿರುವವರು ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳನ್ನು ಮಾತನಾಡುತ್ತಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
"ಮೋದಿ ಜಿ ತೋ ಭರೋಸಾ ತೋಡ್ನೆ ವಾಲೋ ಕಾ ಭೀ ಸರ್ದಾರ್ ಹೈ (ಮೋದಿ ವಿಶ್ವಾಸ ಮುರಿಯುವವರ ನಾಯಕ) ಅವರ ಹಲವಾರು ಸುಳ್ಳುಗಳು, ಭರವಸೆಗಳು, ಅದರ ಬಗ್ಗೆ ನಿಮಗೆ ತಿಳಿದಿದೆʼʼ ಎಂದು ಅವರು ತಿಳಿಸಿದರು. ಈ ವೇಳೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇದ್ದರು.
ಮೋದಿ ಭರವಸೆಗಳಿಗೆ ಮಿತಿಯಿಲ್ಲ
ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲವಾರು ಭರವಸೆಗಳನ್ನು ನೀಡಿದ್ದಾರೆ. ಅದಕ್ಕೆ ಯಾವುದೇ ಮಿತಿಯಿಲ್ಲ ಎಂದು ಖರ್ಗೆ ಹೇಳಿದರು.
ಚುನಾವಣೆಗೆ ಮುನ್ನ, ಆಯ್ಕೆಯಾದ ನಂತರ ಎಲ್ಲರ ಜೇಬಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. ಹತ್ತು ವರ್ಷ ಪ್ರಧಾನಿಯಾಗಿರುವ ವ್ಯಕ್ತಿ ಸುಳ್ಳು ಹೇಳಬಹುದೇ? ಮಾಜಿ ಪ್ರಧಾನಿಗಳಾದ ಪಂಡಿತ್ ಜವಾಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಅಥವಾ ರಾಜೀವ್ ಗಾಂಧಿ ಹೀಗೆ ಹೇಳಿದ್ದಾರಾ? ಹೀಗೆ ಯಾರೂ ಸುಳ್ಳು ಆಶ್ವಾಸನೆಗಳನ್ನು ನೀಡಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನವರು ಕಪ್ಪು ಹಣವನ್ನು ವಿದೇಶದಲ್ಲಿ ಇಟ್ಟಿದ್ದು, ಅದನ್ನು ಮರಳಿ ಭಾರತಕ್ಕೆ ತಂದು ಎಲ್ಲರ ಖಾತೆಗೂ 15 ಲಕ್ಷ ರೂಗಳನ್ನು ಜಮಾ ಮಾಡುವುದಾಗಿ ಹೇಳಿದ್ದರು. ಯುವಕರಿಗೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಹತ್ತು ವರ್ಷಗಳಲ್ಲಿ ನೀಡಬೇಕಿದ್ದ 20 ಕೋಟಿ ಉದ್ಯೋಗಗಳು ಎಲ್ಲಿ ಹೋದವು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಹರಿಯಾಣದಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಐದು ಲಕ್ಷ ಉದ್ಯೋಗ ನೀಡುವುದಾಗಿ ಹೇಳುತ್ತಿದ್ದು, 1.60 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಈ ವೇಳೆ ಅವರು ಹೇಳಿದರು.
“ಮನೋಹರ್ ಲಾಲ್ ಖಟ್ಟರ್ ಅವರು ಒಂಬತ್ತೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರನ್ನು ಬದಲಾಯಿಸಲಾಯಿತು. ಎಂಜಿನ್ ವೈಫಲ್ಯದ ಕಾರಣದಿಂದಾಗಿ ಅವರನ್ನು ಬದಲಾಯಿಸಲಾಯಿತು. ಅವರ ಕೆಲಸ ಸರಿಯಾಗಿದ್ದರೆ, ಅವರು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದರೆ ಅವರನ್ನು ಬದಲಾಯಿಸುವ ಅಗತ್ಯವೇನಿತ್ತು? ಅವರು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಇದ್ದದ್ದೇ ಸಿ.ಎಂ ಬದಲಾವಣೆಗೆ ಕಾರಣ ಎಂದು ಅವರು ತಿಳಿಸಿದರು. ಭೂಪೇಂದರ್ ಸಿಂಗ್ ಹೂಡಾ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಏನು ಆಶ್ವಾಸನೆ ನೀಡುತ್ತದೆಯೋ ಅದನ್ನು ಈಡೇರಿಸುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ಸುಳ್ಳಿನ ಸರ್ದಾರ
ಅದಕ್ಕಾಗಿಯೇ ನಾನು ಬಿಜೆಪಿಯನ್ನು 'ಝೂಥೋನ್ ಕಾ ಸರ್ದಾರ್' ಎಂದು ಪದೇ ಪದೇ ಹೇಳುತ್ತಲೇ ಇದ್ದೇನೆ. ಮೋದಿ ಸುಳ್ಳು ಹೇಳುವುದರಲ್ಲಿ ನಿಪುಣರು, ಅವರು ಹೆದರುವುದಿಲ್ಲ ಎಂದು ಖರ್ಗೆ ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೀಡಿದ ಘೋಷಣೆ ಏನೆಂದರೆ ಅದು ಜೈ ಜವಾನ್, ಜೈ ಕಿಸಾನ್. ಆದರೆ ಮೋದಿ ಅವರಿಗೆ ಜವಾನರ ಬಗ್ಗೆ, ಕಿಸಾನ್‌ಗಳ ಬಗ್ಗೆ ಗೊತ್ತಿಲ್ಲ, ಅವರಿಗೆ ಆರ್‌ಎಸ್‌ಎಸ್‌ನ ಅಜೆಂಡಾ ಮಾತ್ರ ಗೊತ್ತು, ಇನ್ನೇನು ಗೊತ್ತು, ಆರ್‌ಎಸ್‌ಎಸ್ ಅಥವಾ ಬಿಜೆಪಿಯಲ್ಲಿ ಯಾರೂ ರೈತರಲ್ಲ. ಇದರಿಂದಾಗಿ ಅವರಿಗೆ ರೈತರ ನೋವು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.