ಹರಿಯಾಣ: ಕಾಂಗ್ರೆಸ್ ಶಾಸಕ ಪನ್ವಾರ್ ಬಂಧನ
x

ಹರಿಯಾಣ: ಕಾಂಗ್ರೆಸ್ ಶಾಸಕ ಪನ್ವಾರ್ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪನ್ವಾರ್‌ ಅವರನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ. ಅಂಬಾಲಾದ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ಹೊಸದಿಲ್ಲಿ, ಜು.20: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹರಿಯಾಣದ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಪನ್ವಾರ್(55) ಅವರನ್ನು ಗುರುಗ್ರಾಮದಲ್ಲಿ ಮುಂಜಾನೆ ಬಂಧಿಸಲಾಯಿತು. ಅಂಬಾಲಾದ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಕಸ್ಟಡಿಗೆ ನೀಡಬೇಕೆಂದು ಇಡಿ ಕೋರಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಯಮುನಾನಗರ ಪ್ರದೇಶದಲ್ಲಿ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಇಡಿ, ಜನವರಿಯಲ್ಲಿ ಶಾಸಕರ ಮನೆ ಮೇಲೆ ದಾಳಿ ನಡೆಸಿತ್ತು. ಯಮುನಾನಗರದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಮತ್ತು ಅವರ ಸಹಚರ ಕುಲ್ವಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ನಿಷೇಧದ ನಡುವೆಯೂ ಯಮುನಾನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಬಂಡೆ, ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆ ನಡೆದಿದ್ದು, ಹರಿಯಾಣ ಪೊಲೀಸರು ಹಲವು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಯಧನ ಮತ್ತು ತೆರಿಗೆ ಸಂಗ್ರಹವನ್ನು ಸರಳಗೊಳಿಸಲು ಮತ್ತು ತೆರಿಗೆ ವಂಚನೆ ತಡೆಗಟ್ಟಲು ಹರಿಯಾಣ ಸರ್ಕಾರ 2020ರಲ್ಲಿ ಪರಿಚಯಿಸಿದ ಆನ್‌ಲೈನ್ ಪೋರ್ಟಲ್ ʻಇ-ರಾವಣʼ ದಲ್ಲಿ ನಡೆದಿರುವ ವಂಚನೆ ಕುರಿತು ಇಡಿ ತನಿಖೆ ನಡೆಸುತ್ತಿದೆ. ಇಡಿ ಪ್ರಕಾರ, ಅಕ್ರಮ ಗಣಿಗಾರಿಕೆಯಿಂದ ಕಳೆದ ಕೆಲವು ವರ್ಷಗಳಿಂದ ಸುಮಾರು 400-500 ಕೋಟಿ ರೂ.ಅಕ್ರಮ ಹಣ ಸಂಗ್ರಹವಾಗಿದೆ.

ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ 2024ರ ಕೊನೆಯಲ್ಲಿ ಚುನಾವಣೆ ನಡೆಯಲಿದೆ.

Read More
Next Story