ಹರಿಯಾಣ| ಗೋಮಾಂಸ ಸೇವನೆ ಶಂಕೆ- ವಲಸೆ ಕಾರ್ಮಿಕನ ಹತ್ಯೆ
ಚಂಡೀಗಢ: ಹರ್ಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನೊಬ್ಬ ಗೋಮಾಂಸ ತಿಂದಿದ್ದಾನೆ ಎಂದು ಥಳಿಸಿ ಕೊಂದ ಆರೋಪದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಬೀರ್ ಮಲಿಕ್ ಅವರನ್ನು ಆಗಸ್ಟ್ 27 ರಂದು ಕೊಲ್ಲಲಾಗಿದೆ. ಗೋಮಾಂಸ ಸೇವಿಸಿದ್ದಾನೆ ಎಂದು ಶಂಕಿಸಿ ಆರೋಪಿಗಳಾದ ಅಭಿಷೇಕ್, ಮೋಹಿತ್, ರವೀಂದರ್, ಕಮಲಜಿತ್ ಮತ್ತು ಸಾಹಿಲ್, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಮಲಿಕ್ ಅವರನ್ನು ಅಂಗಡಿಗೆ ಕರೆದು ಥಳಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೆಲವರು ಮಧ್ಯಪ್ರವೇಶಿಸಿದ ನಂತರ, ಆರೋಪಿಗಳು ಮಲಿಕ್ ಅವರನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಮತ್ತೆ ಹಲ್ಲೆ ನಡೆಸಿದರು. ಮಲಿಕ್ ಚಾರ್ಖಿ ದಾದ್ರಿ ಜಿಲ್ಲೆಯ ಬಾಂಧ್ರಾ ಗ್ರಾಮದ ಬಳಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಜೀವನ ನಿರ್ವಹಣೆಗೆ ತ್ಯಾಜ್ಯ ಮತ್ತು ಚಿಂದಿ ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಐವರು ಆರೋಪಿಗಳು ಹಾಗೂ ಕಾನೂನು ಸಂಘರ್ಷದಲ್ಲಿರುವ ಇಬ್ಬರನ್ನು ಕೂಡ ಬಂಧಿಸಲಾಗಿದೆ ಎಂದು ಹೇಳಿದರು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸಂಬಂಧಿಸಿದ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.