ICC T20 I | ಹಾರ್ದಿಕ್ ಪಾಂಡ್ಯಗೆ ಅಗ್ರ ಶ್ರೇಯಾಂಕ
ಟಿ20ಐ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವನಿಂದು ಹಸರಂಗ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಸಮಬಲ ಸಾಧಿಸಿದ್ದಾರೆ.
ದುಬೈ, ಜು.3 - ಐಸಿಸಿಯ ಟಿ20ಐ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ(30) ಎರಡು ಸ್ಥಾನ ಮೇಲಕ್ಕೇರಿದ್ದು, ಅಗ್ರಸ್ಥಾನದಲ್ಲಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜುಲೈ 29 ರಂದು ನಡೆದ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ್ದ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ಔಟ್(3/20) ಮಾಡುವ ಮೂಲಕ ದಕ್ಷಿಣ ಆಫ್ರಿಕಕ್ಕೆ ನಿರ್ಣಾಯಕ ಹೊಡೆತ ನೀಡಿದ್ದರು. ಎರಡು ಸ್ಥಾನ ಮೇಲೇರುವ ಮೂಲಕ ಶ್ರೀಲಂಕಾದ ವನಿಂದು ಹಸರಂಗ ಅವರೊಟ್ಟಿಗೆ ಸಮಬಲ ಸಾಧಿಸಿದ್ದಾರೆ. ಹಸರಂಗ ಅವರು ಅಗ್ರ ಶ್ರೇಯಾಂಕದ ಪುರುಷರ ಟಿ20ಐ ಆಲ್ರೌಂಡರ್.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್‌ನ ನಾಯಕನಾಗಿ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದ ಪಾಂಡ್ಯ, ಯುಎಸ್‌ಎ ಮತ್ತು ಕೆರಿಬಿಯನ್‌ನಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ತಿರುಗೇಟು ನೀಡಿದರು. 144 ರನ್(150 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್) ಹಾಗೂ 11 ವಿಕೆಟ್ ಗಳಿಸಿದರು.
ದಕ್ಷಿಣ ಆಫ್ರಿಕದ ಕ್ಲಾಸೆನ್ ಉತ್ತಮವಾಗಿ ಆಡುತ್ತಿದ್ದು, 30 ಎಸೆತಗಳಲ್ಲಿ 30 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಪಾಂಡ್ಯ ಪಂದ್ಯಕ್ಕೆ ನಾಟಕೀಯ ತಿರುವು ನೀಡಿದರು. 17ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸೆನ್ ಅವರನ್ನು ಔಟ್ ಮಾಡಿ, ಅಂತಿಮ ಓವರಿನಲ್ಲಿ 16 ರನ್ ರಕ್ಷಿಸಿದರು. ಭಾರತವು ದಕ್ಷಿಣ ಆಫ್ರಿಕವನ್ನು ಏಳು ರನ್ ಗಳಿಂದ ಸೋಲಿಸಿ, ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿತು.
ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್, ಸಿಕಂದರ್ ರಜಾ, ಶಕೀಬ್ ಅಲ್ ಹಸನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದು ಸ್ಥಾನ ಏರಿದ್ದಾರೆ. ಮೊಹಮ್ಮದ್ ನಬಿ ನಾಲ್ಕು ಸ್ಥಾನ ಕೆಳಗಿಳಿದಿದ್ದಾರೆ.
ಬೂಮ್ರಾ ಮ್ಯಾಜಿಕ್: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು 15 ವಿಕೆಟ್ ಗಳಿಸಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ವಿಶ್ವ ಪಟ್ಟಿಯಲ್ಲಿ 12 ನೇ ಸ್ಥಾನಕ್ಕೆ ಏರಿದ್ದಾರೆ. ದಕ್ಷಿಣ ಆಫ್ರಿಕದ ಅನ್ರಿಚ್ ನಾರ್ಟ್ಜೆ 675 ಪಾಯಿಂಟ್‌ಗಳೊಂದಿಗೆ, ಅಗ್ರ ಶ್ರೇಯಾಂಕದ ಆದಿಲ್ ರಶೀದ್‌ಗಿಂತ ಒಂದು ಸ್ಥಾನ ಕೆಳಗೆ ಇದ್ದಾರೆ.