Harassment of female students by Swamiji of Sharada Peeth; expulsion
x
ಸ್ವಾಮಿ ಚೈತನ್ಯಾನಂದ ಸರಸ್ವತಿ

ಸ್ವಾಮೀಜಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಪೀಠದಿಂದ ಉಚ್ಚಾಟನೆ

ಪಾರ್ಥಸಾರಥಿ ಹೆಸರಿನ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿವೆ. ಸ್ವಾಮೀಜಿಯು ದೆಹಲಿಯ ಶ್ರೀಶಾರದಾ ಇಂಡಿಯನ್ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥರಾಗಿದ್ದರು ಎನ್ನಲಾಗಿದೆ.


Click the Play button to hear this message in audio format

ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಶ್ರಮವೊಂದರ ಮಾಜಿ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿ (ಪಾರ್ಥ ಸಾರಥಿ) ವಿರುದ್ಧ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠದಿಂದ ಉಚ್ಚಾಟಿಸಲಾಗಿದ್ದು, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಸ್ವಾಮಿಯು, ಶ್ರೀ ಶಾರದಾ ಇಂಡಿಯನ್ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥರಾಗಿದ್ದರು. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆಗಸ್ಟ್ 4ರಂದು ವಸಂತ್ ಕುಂಜ್ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ವೇಳೆ, ಪೊಲೀಸರು 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅವರಲ್ಲಿ ಕನಿಷ್ಠ 17 ಮಂದಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಸ್ವಾಮೀಜಿಯು ನಮ್ಮೊಂದಿಗೆ ಅವಮಾನಕರವಾಗಿ ವರ್ತಿಸುತ್ತಿದ್ದರು, ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಮತ್ತು ಶಾರೀರಿಕ ಸಂಪರ್ಕಕ್ಕೂ ಯತ್ನಿಸಿದ್ದರು. ಕೆಲವು ಉಪನ್ಯಾಸಕಿಯರು ಮತ್ತು ಆಡಳಿತ ಸಿಬ್ಬಂದಿ ಸ್ವಾಮೀಜಿಯ ಬೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು," ಎಂದು ಸಂತ್ರಸ್ತೆಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಕಿಗೆ ಬಂದ ಸತ್ಯಗಳು

ಸಂತ್ರಸ್ತೆಯರ ಹೇಳಿಕೆ ಆಧರಿಸಿ, 16 ಮಂದಿ ನ್ಯಾಯಮೂರ್ತಿಗಳ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಲಾಗಿದೆ. ಸಂಸ್ಥೆ ಮತ್ತು ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿದಾಗ, ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ. ಸಂಸ್ಥೆಯ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ, ನಕಲಿ ನೋಂದಣಿ ಸಂಖ್ಯೆ (39 UN 1) ಹೊಂದಿದ್ದ ವೋಲ್ವೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸ್ವಾಮೀಜಿ ಕೊನೆಯದಾಗಿ ಆಗ್ರಾ ಬಳಿ ಕಾಣಿಸಿಕೊಂಡಿದ್ದು, ಅವರ ಪತ್ತೆಗಾಗಿ ಹಲವು ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.

ಆಶ್ರಮದಿಂದ ಉಚ್ಚಾಟನೆ

ಈ ಗಂಭೀರ ಆರೋಪಗಳು ಕೇಳಿಬಂದ ನಂತರ, ಶೃಂಗೇರಿಯ ಶಾರದಾ ಪೀಠದ ಶಾಖೆಯಾಗಿರುವ ಈ ಆಶ್ರಮದ ಆಡಳಿತ ಮಂಡಳಿಯು, ಸ್ವಾಮೀಜಿಯನ್ನು ಮುಖ್ಯಸ್ಥ ಹುದ್ದೆಯಿಂದ ಪದಚ್ಯುತಗೊಳಿಸಿ, ಆಶ್ರಮದಿಂದ ಹೊರಹಾಕಿದೆ. "ಸ್ವಾಮೀಜಿಯ ನಡವಳಿಕೆಯು ಅನೈತಿಕವಾಗಿದ್ದು, ಪೀಠದ ಹಿತಾಸಕ್ತಿಗೆ ವಿರುದ್ಧವಾಗಿದೆ," ಎಂದು ಮಠವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಆರೋಪಿ ಚೈತನ್ಯಾನಂದ ಸರಸ್ವತಿ ವಿರುದ್ಧ ಕ್ರಿಮಿನಲ್ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ ಮಹಿಳೆಯೊಬ್ಬರಿಗೆ ವಂಚನೆ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪ ಹಾಗೂ 2016ರಲ್ಲಿ ಮತ್ತೋರ್ವ ಮಹಿಳೆ ನೀಡಿದ ಕಿರುಕುಳದ ದೂರು ಅವರ ಮೇಲೆ ದಾಖಲಾಗಿತ್ತು.

Read More
Next Story