
ಹಂಪಿ ಪ್ರದೇಶದಲ್ಲಿ ಕಂಡು ಬಂದ ವಿದೇಶಿ ಪ್ರವಾಸಿಗರು. (ಚಿತ್ರ- ಕೀರ್ತಿಕ್ ಸಿ)
The Federal at Hampi: ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಸಾಣಾಪುರ ವಿದೇಶಿಯರಿಗೆ ಸುರಕ್ಷಿತವೇ?
Hampi ground report: ತುಂಗಭದ್ರ ಅಣೆಕಟ್ಟಿನ ಜಲರಾಶಿಯ ಬಾಹುಗಳು ಚಾಚಿರುವ ಸಾಣಾಪುರ, ಸುಂದರ ಹಳ್ಳಿ. ಇಲ್ಲಿನ ಸೌಂದರ್ಯವು ಅನೇಕ ದಶಕಗಳಿಂದ ಇಸ್ರೇಲಿ ಪ್ರವಾಸಿಗರು ಮಾರು ಹೋಗಿದ್ದಾರೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಯಿಂದ 26 ಕಿ.ಮೀ ದೂರದಲ್ಲಿರುವ ಸುಂದರ ಮತ್ತು ಶಾಂತ ಗ್ರಾಮ ಸಾಣಾಪುರಕ್ಕೆ ಪ್ರತಿವರ್ಷ ನೂರಾರು ಯುವ ಇಸ್ರೇಲಿ ಪ್ರವಾಸಿಗರು ಬರುತ್ತಾರೆ. ಅವರು ಬರುವುದಕ್ಕೊಂದು ಕಾರಣವಿದೆ. ಎರಡರಿಂದ ಮೂರು ವರ್ಷಗಳ ಕಠಿಣ ಮಿಲಿಟರಿ ತರಬೇತಿ ಪಡೆದ ಅವರು ಆ ಬಳಿಕ ಒತ್ತಡ ನಿವಾರಣೆಗೆ ಒಂದು ವರ್ಷ ರಜೆ ಪಡೆಯುತ್ತಾರೆ. ಅವರಲ್ಲಿ ಹೆಚ್ಚಿನವರು ಬರುವುದೇ ಸಾಣಾಪುರಕ್ಕೆ. ಅವರ ಪಾಲಿಗೆ ಇದು ಭೂಮಿಯ ಮೇಲಿನ ಸ್ವರ್ಗ.
ಹಂಪಿಯು, ಭಾರತದ ಭವ್ಯ ರಾಜ ಪರಂಪರೆ, ನೂರಾರು ಕತೆಗಳನ್ನು ಹೇಳುವ ಬಂಡೆಗಳು ಮತ್ತು ವಿಜಯನಗರ ಕಾಲದ ದೇವಾಲಯಗಗಳ ಕೆತ್ತನೆಗಳಿಗೆ, ವಾಸ್ತುಶಿಲ್ಪಗಳಿಗೆ ವಿಶ್ವ ವಿಖ್ಯಾತಿ ಪಡೆದ ತಾಣ. ಸಮೀಪದಲ್ಲಿ ಹರಿಯುವ ತುಂಗಭದ್ರಾ ನದಿ ದಾಟಿದರೆ ಸಿಗುವ ಎರಡು ಪ್ರದೇಶಗಳೆಂದರೆ ಸಾಣಾಪುರ ಮತ್ತು ಆನೆಗೊಂದಿ. ಅಲ್ಲಿ ಹೋಮ್ ಸ್ಟೇಗಳು ಮತ್ತು ಮಿನಿ ರೆಸಾರ್ಟ್ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಈ ಜಾಗಗಳು ವಿನೋದ ಪ್ರಿಯ ಪ್ರವಾಸಿಗರ ನೆಚ್ಚಿನ ಆಯ್ಕೆಗಳು. ಹಂಪಿ ಪ್ರದೇಶದಲ್ಲಿ ಅನ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲದ ಕಾರಣ ಪ್ರವಾಸಿಗರು ದೂರದ ನದಿ ತೀರದಲ್ಲಿರುವ ಈ ಪ್ರದೇಶಗಳಿಗೆ ಹೋಗಿ ತಂಗುತ್ತಾರೆ.
ಇಸ್ರೇಲಿಗರು ಸಾಣಾಪುರಕ್ಕೆ ಬರುವುದು ಯಾಕೆ?
ಸಾಣಾಪುರ ಕಳೆದ ದಶಕದಿಂದ ಇಸ್ರೇಲಿ ಪ್ರವಾಸಿಗರ ಅತ್ಯಂತ ನೆಚ್ಚಿನ ಜಾಗ. ಇಸ್ರೇಲ್ ಯುವಕರು ಕಠಿಣಾತಿಕಠಿಣ ಮಿಲಿಟರಿ ತರಬೇತಿ ಮುಗಿದ ಬಳಿಕ ಮಾನಸಿಕ ನೆಮ್ಮದಿಗಾಗಿ ಭಾರತ ಕೆಲವು ತಾಣಗಳಿಗೆ ಏಕಾಂಗಿ ಪ್ರಯಾಣ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಇದನ್ನುವ'ಹಮ್ಮಸ್ ಟ್ರೇಲ್' ಎಂದು ಕರೆಯುತ್ತಾರೆ. ಮನಾಲಿ, ಕಸೋಲ್, ರಿಷಿಕೇಶ್, ಗೋವಾ, ಗೋಕರ್ಣ, ಪುಷ್ಕರ್ ಮತ್ತು ಹಂಪಿಗೆ ಅವರ ಭೇಟಿ ಸಾಗುತ್ತದೆ. ಈ ತಾಣಗಳಿಗೆ ಹೋದಾಗ ಅವರು ತಮ್ಮದೇ ರೀತಿ ಪ್ರಯಾಣ ಮಾಡುವ ಇಸ್ರೇಲಿಗರು ಹಾಗೂ ಇತರ ಪ್ರವಾಸಿಗರನ್ನು ಭೇಟಿಯಾಗುತ್ತಾರೆ. ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಪ್ರಕೃತಿ ರಮಣೀಯವಾಗಿರುವ ಸಾಣಾಪುರವನ್ನು.
ತುಂಗಭದ್ರ ಅಣೆಕಟ್ಟಿನ ಜಲರಾಶಿಯ ಬಾಹುಗಳು ಚಾಚಿರುವ ಸಾಣಾಪುರ, ಸುಂದರ ಹಳ್ಳಿ. ಇಲ್ಲಿನ ಸೌಂದರ್ಯಕ್ಕೆ ಅನೇಕ ದಶಕಗಳಿಂದ ಇಸ್ರೇಲಿ ಪ್ರವಾಸಿಗರು ಮಾರು ಹೋಗಿದ್ದಾರೆ. ಅಂದ ಹಾಗೆ ಯುರೋಪಿಯನ್ ಮತ್ತು ಅಮೆರಿಕನ್ ಪ್ರವಾಸಿಗರಿಗೆ ಹಂಪಿ ನೆಚ್ಚಿನ ತಾಣ. ಆದರೆ, ಇಸ್ರೇಲಿಗರು ಸಾಣಾಪುರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಮನೆಗೆ ಹೊರಟ ಇಸ್ರೇಲಿಗರು
ಈ ವರ್ಷ, ಮಾರ್ಚ್ 14ರಂದು ಹಂಪಿಯಲ್ಲಿ ಹೋಳಿ ಆಚರಣೆಯಾಗಿದೆ. ಆದರೆ, ಇಸ್ರೇಲಿ ಪ್ರವಾಸಿಗರು ತಮ್ಮ ಬ್ಯಾಗ್ ಹೆಗಲೇರಿಸಿಕೊಂಡು ತಮ್ಮೂರಿಗೆ ಹೊರಟಿದ್ದರು. ಅದಕ್ಕೆ ಕಾರಣ ಇಬ್ಬರು ಮಹಿಳೆಯರ ಮೇಲಿನ ಕ್ರೂರ ಅತ್ಯಾಚಾರ. ಜತೆಗೊಂದು ಕೊಲೆ. ಪ್ರವಾಸೋದ್ಯಮದ ಆರ್ಥಿಕತೆಯನ್ನೇ ಅವಲಂಬಿಸಿದ್ದ ಸಾಣಾಪುರದ ಮಂದಿಗೆ ಇದು ದೊಡ್ಡ ಆಘಾತ.
ಹಂಪಿಗೆ ಕೆಟ್ಟ ಹೆಸರು.
ಮಾರ್ಚ್ 6ರ ರಾತ್ರಿ ಸಾಣಾಪುರದ ಪಾಲಿಗೆ ಕರಾಳ ದಿನ. ಅಂದು ರಾತ್ರಿ ಮೂವರು ದುಷ್ಕರ್ಮಿಗಳು ಹೋಮ್ ಸ್ಟೇ ಮಾಲೀಕರು ಮತ್ತು ಇಸ್ರೇಲಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು. ಜತೆಗಿದ್ದ ಅಮೆರಿಕನ್ ಸೇರಿದಂತೆ ಮೂವರನ್ನು ಕಾಲುವೆಗೆ ನೂಕಿದ್ದರು. ಅದರಲ್ಲೊಬ್ಬರು ಮೃತಪಟ್ಟರೆ ಉಳಿದಿಬ್ಬರು ಗಾಯಗೊಂಡಿದ್ದಾರೆ.
29 ವರ್ಷದ ಹೋಮ್ಸ್ಟೇ ಮಾಲಕಿ ತನ್ನ ಪ್ರವಾಸಿಗರನ್ನು ನಕ್ಷತ್ರಗಳ ವೀಕ್ಷಣೆಗಾಗಿ ತುಂಗಭದ್ರಾ ಕಾಲುವೆಯ ಬಳಿ (ಹತ್ತಿರದ ತುಂಗಭದ್ರಾ ಅಣೆಕಟ್ಟಿನ ನೀರು ಈ ಗ್ರಾಮದ ಮೂಲಕ ಹರಿಯುತ್ತದೆ) ಕರೆದೊಯ್ದಿದ್ದರು. ಹೋಮ್ಸ್ಟೇ ಮಾಲಕಿ ತಮಿಳುನಾಡಿನವರು. ಅವರು ಪ್ರವಾಸಿ ಋತುವಿನಲ್ಲಿ ಮಾತ್ರ ಸಾಣಾಪುರಕ್ಕೆ ಬರುತ್ತಾರೆ. ಹೋಮ್ ಸ್ಟೇಯನ್ನು ಬಾಡಿಗೆಗೆ ಕೊಟ್ಟು ಪ್ರವಾಸಿಗರಿಗೆ ಆತಿಥ್ಯ ನೀಡುತ್ತಾರೆ.
ಘಟನೆಯಿಂದ ಗ್ರಾಮಸ್ಥರು ಬೇಸರಗೊಂಡಿದ್ದಾರೆ. ನಾಚಿಕಗೇಡಿನ ಸಂಗತಿ ಎಂದೇ ಭಾವಿಸಿದ್ದಾರೆ. ಲಾಭದಾಯಕ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದ್ದಕ್ಕೆ ಅವರಿಗೆ ಆಗಿರುವ ನೋವು ಅಷ್ಟಿಷ್ಟಲ್ಲ. ಸಾಣಾಪುರದ ತೆಂಗಿನಕಾಯಿ ಮತ್ತು ಹಣ್ಣು ಮಾರಾಟಗಾರರಿಂದ ಹಿಡಿದು ಪ್ರವಾಸಿ ಗೈಡ್ಗಳು, ರೆಸಾರ್ಟ್ ಮತ್ತು ಹೋಮ್ಸ್ಟೇ ಮಾಲೀಕರು ತಮ್ಮ ಜೀವನೋಪಾಯಕ್ಕಾಗಿ ಅಲ್ಲಿಗೆ ಬರುವ ವಿದೇಶಿ ಪ್ರವಾಸಿಗರನ್ನೇ ಅವಲಂಬಿಸಿದ್ದಾರೆ. ಉಳಿದ ಸಮಯದಲ್ಲಿ ಕೃಷಿ ಅಥವಾ ಆ ಪ್ರದೇಶದ ಕೆಲವು ಉಕ್ಕಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ.
ಕಳೆದ ತಿಂಗಳು ತೆಲಂಗಾಣದ 26 ವರ್ಷದ ವೈದ್ಯೆ ಅನನ್ಯಾ ರಾವ್ ಎಂಬವರು, ಇಲ್ಲಿ ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದರು. ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಈ ಗ್ರಾಮದ ಮೇಲೆ ಕರಿಛಾಯೆ ಮೂಡುವಂತೆ ಮಾಡಿದೆ.
ಪ್ರವಾಸಿಗರ ಪಲಾಯನ
ಹೋಳಿ ಹಬ್ಬ ದೊಡ್ಡ ಪ್ರಮಾಣದಲ್ಲಿ ಆಚರಿಸುವ ಈ ಪ್ರದೇಶಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಸಾಣಾಪುರದ ರೆಸಾರ್ಟ್ ಮಾಲೀಕರಾದ ರವಿಚಂದ್ರ ಎಂ 'ದ ಫೆಡರಲ್' ಜತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.
"ದುಷ್ಕೃತ್ಯದ ಬಳಿಕ ಪ್ರವಾಸಿಗರು ತಮ್ಮ ಪ್ರವಾಸಗಳನ್ನು ಮೊಟಕುಗೊಳಿಸಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಹಲವರು ಬುಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಮಾರ್ಚ್ ಅಂತ್ಯಕ್ಕೆ ಪ್ರವಾಸಿಗರ ಆಗಮನ ಕೊನೆಗೊಳ್ಳುವುದಾದರೂ ಈ ಬಾರಿ ಮೊದಲೇ ಅಂತ್ಯಗೊಂಡಿದೆ. ಘಟನೆಯಿಂದ ಕೆಲವರು ಭಯಭೀತರಾಗಿದ್ದಾರೆ . ಹಿಂದೆ ಚಿರತೆ ದಾಳಿ ಮತ್ತು ಕರಡಿ ದಾಳಿಯ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಆತಂಕ ಎದುರಾಗಿತ್ತು. ಆದರೆ, ಈ ಬಾರಿ ವಿಭಿನ್ನ ಸ್ಥಿತಿಯಿದೆ. ಘಟನೆ ಅಮಾನವೀಯ ಮತ್ತು ನಮ್ಮ ಖ್ಯಾತಿಯ ಮೇಲೆ ಕಪ್ಪು ಚುಕ್ಕೆ ಮೂಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸಾಣಾಪುರದಲ್ಲಿರುವ ಅವರ ರೆಸಾರ್ಟ್, ದಿ ಟ್ರಾಂಕ್ವಿಲ್, ಸೊಂಪಾದ ಹಸಿರು ಭತ್ತದ ಗದ್ದೆಗಳಿಂದ ಆವೃತವಾಗಿದೆ. ಸುತ್ತಮತ್ತಲೂ ಬಂಡೆಗಳಿಂದ ಆವರಿಸಿದ ದೃಶ್ಯ ವೈಭವವಿದೆ. ಹಳ್ಳಿಗಾಡಿನ, ಗುಡಿಸಲಿನಂತಹ ವಾತಾವರಣವನ್ನು ಅಲ್ಲಿ ಕಲ್ಪಿಸಲಾಗಿದೆ.
ಸಾಣಾಪುರದ ರೆಸಾರ್ಟ್ಗಳಲ್ಲಿ, ಇಸ್ರೇಲಿ ಮಹಿಳೆಯರು ಲಾಂಜ್ ಕುರ್ಚಿಗಳಲ್ಲಿ ವಿಶ್ರಾಂತಿ ಪಡೆಯುವುದು ಸಾಮಾನ್ಯ ದೃಶ್ಯವಾಗಿತ್ತು. ಒಬ್ಬರು ಚಿತ್ರಕಲೆಯಲ್ಲಿಯೂ ಮಗ್ನರಾಗಿದ್ದರು. ಅವರತ್ತ ಬೆರಳು ತೋರಿಸಿದ ರವಿಚಂದ್ರನ್, ಉಳಿದವರು ಇಷ್ಟೇ ಇಷ್ಟು ಪ್ರವಾಸಿಗರು ಮಾತ್ರ ಎಂದು ಹೇಳಿದರು.
ಇಸ್ರೇಲಿಗರು ಒಂದೆರಡು ವರ್ಷಗಳ ಮಿಲಿಟರಿ ತರಬೇತಿಯ ನಂತರ ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಾರೆ. ಕ್ಲಿಫ್ ಜಂಪಿಂಗ್, ಈಜು ಅಥವಾ ಬಂಡೆ ಹತ್ತುವುದು (ರಾಕ್ ಕ್ಲೈಂಬಿಂಗ್) ಮತ್ತು ಕೆಲವು ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಭಾರತವು ಇತರ ದೇಶಗಳಿಗಿಂತ ಅಗ್ಗವಾಗಿರುವುದೇ ಅದಕ್ಕೆ ಕಾರಣ. ಇಸ್ರೇಲಿ ಮಹಿಳೆಯರು ಸ್ನೇಹಪರರು. ಹೀಗಾಗಿ ದೇಶವನ್ನು ಬೆಚ್ಚಿಬೀಳಿಸಿದ ಭಯಾನಕ ಘಟನೆ ಬಗ್ಗೆ ಅವರು ಮಾತನಾಡುವುದಿಲ್ಲ ಎಂದು ನಯವಾಗಿ ನಿರಾಕರಿಸಿದ್ದಾರೆ.
ಇಸ್ರೇಲ್ ಯುವಕಾರದ ಅಡಿ ಗುಗ್ಗೆನ್ಹೀಮ್ ಮತ್ತು ಅಸಫ್ ಎಡುಟ್.
ಸೈನ್ಯದ ನಂತರ ಅತ್ಯುತ್ತಮ ತಾಣ
ಇಸ್ರೇಲಿ ಯುವಕರಾದ , ಆದಿ ಗುಗ್ಗೆನ್ಹೀಮ್ ಮತ್ತು ಅಸಫ್ ಎಡುಟ್, ಸಾಣಾಪುರದ ಘಟನೆ ಬಗ್ಗೆ 'ದ ಫೆಡರಲ್' ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅತ್ಯಾಚಾರ ಆಘಾತಕಾರಿ ಘಟನೆ ಎಂದು ಹೇಳಿದ ಅವರು ಸಾಣಾಪುರವನ್ನು ಹೊಗಳಿದ್ದಾರೆ.
"ಈ ಸ್ಥಳವು ಅದ್ಭುತವಾಗಿದೆ, ಪ್ರಕೃತಿ, ಹಸಿರು, ಸೂರ್ಯಾಸ್ತ ಮತ್ತು ಜಲಮೂಲಗಳ ಕಾರಣಕ್ಕೆ ನಾವು ಈ ಜಾಗವನ್ನು ಪ್ರೀತಿಸುತ್ತೇವೆ. ನಮ್ಮ ಕಠಿಣ ಮಿಲಿಟರಿ ತರಬೇತಿಯ ನಂತರ ಹಂಪಿ ಸ್ವರ್ಗದಂತೆ ಭಾಸವಾಗುತ್ತದೆ,'' ಎಂದು ಗುಗ್ಗೆನ್ಹೀಮ್ ಹೇಳಿದ್ದಾರೆ. ಅವರು ಫೆಬ್ರವರಿ 25ರಿಂದ ಸ್ನೇಹಿತ ಅಸಫ್ ಎಡುಟ್ ಅವರೊಂದಿಗೆ ಸಾಣಾಪುರದಲ್ಲಿದ್ದಾರೆ.
''ಹಂಪಿ ನನಗೆ ಶಾಂತವಾಗಿರಲು ಪ್ರೇರೇಪಿಸಿದೆ. ಬೇರೆ ಯಾವುದೇ ಸ್ಥಳವು ಅದನ್ನು ಮಾಡಿಲ್ಲ" ಎಂದು ಗೋವಾದಿಂದ ಬಂದಿದ್ದ ಅಸಫ್ ಹೇಳಿದ್ದಾರೆ. ಆ ಎರಡು ಸ್ಥಳಗಳನ್ನು ಹೋಲಿಸಿದ ಗುಗ್ಗೆನ್ಹೀಮ್, "ಸೈನ್ಯದ ನಂತರ ಹಂಪಿ ಅತ್ಯುತ್ತಮ ತಾಣ. ಗೋವಾ ಕೊಳಕಾಗಿದ್ದು, ಎಲ್ಲೆಡೆ ಕಸವಿದೆ. ಇಲ್ಲಿ ಪ್ರಶಾಂತವಾಗಿದೆ ಮತ್ತು ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ನಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ,'' ಎಂದು ಹೇಳಿದರು.
ಅಷ್ಟರಲ್ಲೇ ಅವರಿಬ್ಬರೂ ಸಾಣಾಪುರ ಬಿಡಲು ತಯಾರಾಗಿದ್ದರು. ಮುಂದಿನ ಅವರ ಪ್ರಯಾಣ ಪುಷ್ಕರ್ಗೆ.
ಶಾಂತಿ ಮತ್ತು ಯೋಗ
ಸಾಣಾಪುರದ ಸನ್ರೈಸ್ ಗೆಸ್ಟ್ ಹೌಸ್ನಲ್ಲಿ ತಂಗಿರುವ 27 ವರ್ಷದ ಬೆಲ್ಜಿಯಂ ಯುವತಿ ಪೌಲಿಯನ್ ವಂಡೆಲೆ, ಅತ್ಯಾಚಾರ ಮತ್ತು ಕೊಲೆಯ ನಂತರ ಪೊಲೀಸ್ ತಪಾಸಣೆ ಮತ್ತು ರಸ್ತೆಯಲ್ಲಿ ಹಾಕಿರುವ ಬ್ಯಾರಿಕೇಡ್ಗಳ ಕಿರಿಕಿರಿ ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ.
ಬೆಲ್ಜಿಯಂ ಯುವತಿ ಪೌಲಿಯನ್ ವಂಡೆಲೆ
ಯೋಗ ಮಾಡಲು ಬಂದಿರುವ ವಂಡೆಲೆ, ತಮಗೆ ಇಲ್ಲಿ ಯಾವುದೇ ಅಹಿತಕರ ಅನುಭವಗಳು ಆಗಿಲ್ಲ. ಈ ಪ್ರದೇಶದಲ್ಲಿಯೇ ಇರಲು ಇಷ್ಟಪಡುತ್ತೇನೆ ಎಂದು 'ದ ಫೆಡರಲ್'ಗೆ ಹೇಳಿದ್ದಾರೆ.
"ಇದು ಶಾಂತ ಸ್ಥಳ. ಹೆಚ್ಚಾಗಿ ಇಲ್ಲಿಯೇ ಇರುತ್ತೇನೆ. ಸುರಕ್ಷತೆ ಕಾರಣಕ್ಕೆ ಸಂಜೆ ಒಬ್ಬಳೇ ಹೊರಗೆ ಹೋಗುವುದಿಲ್ಲ" ಎಂದು ಅವರು ಹೇಳಿಕೊಂಡರು. ಅತ್ಯಾಚಾರ ಘಟನೆಯ ನಂತರ ಬೆಲ್ಜಿಯಂಗೆ ಮರಳುವಂತೆ ತಾಯಿ ಮತ್ತು ಸಹೋದರ ಒತ್ತಾಯಿಸುತ್ತಿದ್ದಾರೆ ಎಂಬುದಾಗಿಯೂ ವಂಡೆಲೆ ವಿವರಿಸಿದರು.
''ಮನೆಯವರು ಘಟನೆಯನ್ನು ಬೆಲ್ಜಿಯಂ ಪತ್ರಿಕೆಗಳಲ್ಲಿ ನೋಡಿದ್ದಾರೆ ಮತ್ತು ನನ್ನ ಬಗ್ಗೆ ಚಿಂತೆ ಮಾಡುತ್ತಿದ್ದಾರೆ" ಎಂದು ಅವರು ಹೇಳಿಕೊಂಡರು.
''ಹಳ್ಳಿಯಲ್ಲಿ ಬೆಳಗ್ಗೆ ಯೋಗ ತರಬೇತಿ ಪಡೆಯುತ್ತೇನೆ. ನಂತರ ಈಜುವುದಕ್ಕೆ ಅಥವಾ ಪ್ರಕೃತಿ ವೀಕ್ಷಣೆಗೆ ಹೋಗುತ್ತೇನೆ. ಸಂಜೆ ಬಳಿಕ ಗೆಸ್ಟ್ ಹೌಸ್ನಲ್ಲಿಯೇ ಉಳಿದುಕೊಳ್ಳುತ್ತೇನೆ,'' ಎಂದು ಅವರು ತಮ್ಮ ದಿನಚರಿಯನ್ನು ವಿವರಿಸಿದರು.
''ಇದು ನನ್ನ ಎರಡನೇ ಹಂಪಿ ಭೇಟಿ. ಹಿಂದೆ ಶ್ರೀಲಂಕಾ ಪ್ರವಾಸದ ವೇಳೆ ಮೊದಲ ಬಾರಿ ನನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದೆ. ಇಲ್ಲಿನ ಪರಿಸರ ಇಷ್ಟವಾಯಿತು. ಬೆಲ್ಜಿಯಂಗೆ ಹಿಂತಿರುಗಿದ ನಂತರ ಫೈನಾನ್ಸ್ ಕಂಪನಿಯಲ್ಲಿದ್ದ ಉದ್ಯೋಗ ತೊರೆದು ನನ್ನ ಜೀವನದ ಮುಂದಿನ ಹಂತವನ್ನು ಅರಸುತ್ತಾ ಇಲ್ಲಿಗೆ ಬಂದೆ" ಎಂದು ಅವರು ಹೇಳಿಕೊಂಡಿದ್ದಾರೆ. ವಂಡೆಲೆ ಗೆಸ್ಟ್ ಹೌಸ್ಗೆ ದಿನಕ್ಕೆ ₹1,300 ಪಾವತಿಸುತ್ತಾರೆ. ಮಾರ್ಚ್ 22ಕ್ಕೆ ಅವರ ವೀಸಾ ಅವಧಿ ಮುಗಿಯುತ್ತದೆ. ಅದಕ್ಕಿಂತ ಮೊದಲು ಹೊರಡುತ್ತಾರೆ.
ಪ್ರಶಾಂತ ಸಾಣಾಪುರ ಸುರಕ್ಷಿತವೇ?
ಸ್ಥಳೀಯರು ಮತ್ತು ಪೊಲೀಸರು 'ದ ಫೆಡರಲ್' ಜತೆ ಮಾತನಾಡುವಾಗ ಸಾಣಾಪುರ 'ಸುರಕ್ಷಿತ' ಸ್ಥಳ ಎಂದೇ ಹೇಳಿದ್ದಾರೆ. ಆದಾಗ್ಯೂ ಕೆಲವು ಕಿಡಿಗೇಡಿಗಳು ಇಲ್ಲಿ ಡ್ರಗ್ಸ್ ಸರಬರಾಜು ಮಾಡುವ ಕುಕೃತ್ಯದಲ್ಲಿ ತೊಡಗಿದ್ದಾರೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
ಭಾರತೀಯ ಪ್ರವಾಸಿಗರ ಪ್ರಕಾರ, ಹಂಪಿ ಪ್ರದೇಶದಲ್ಲಿ ಲೈಸರ್ಜಿಕ್ ಆಸಿಡ್ ಅಮೈಡ್ (ಎಲ್ಎಸ್ಎ) ಎಂಬ ಸೈಕೆಡೆಲಿಕ್ ಡ್ರಗ್ಸ್ ಹೇರಳವಾಗಿ ಸಿಗುತ್ತದೆ. ಇದನ್ನು ಬೀಜದ ರೂಪದಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಮಾದಕ ಬೀಜವನ್ನು ಇಲ್ಲಿ ಬೆಳೆಯಲಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಮದ ಪ್ರವಾಸಿ ತಾಣಗಳಲ್ಲಿ ಕತ್ತಲಾದ ನಂತರ ತಿರುಗಾಡುವುದು ಅಸುರಕ್ಷಿತ ಎಂದು ಸ್ಥಳೀಯರೇ ಹೇಳುತ್ತಾರೆ. ಬೆಳಕು ಮತ್ತು ಭದ್ರತಾ ವ್ಯವಸ್ಥೆ ಕೊರತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಕೊಪ್ಪಳ ಪೊಲೀಸರು, ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಿಟ್ಗಳ ಮೂಲಕ ಸತತವಾಗಿ ನಿಗಾ ಇಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ 12 ಎಫ್ಐಆರ್ ಹಾಗೂ 2023ರಲ್ಲಿ 10 ಎಫ್ಐಆರ್ಗಳನ್ನು ದಾಖಲಿಸಿರುವುದಾಗಿಯೂ ಮಾಹಿತಿ ನೀಡಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳು ವ್ಯಾಪಕವಾಗಿದ್ದ ಜನಪ್ರಿಯ ಪ್ರವಾಸಿ ತಾಣ 'ಹಿಪ್ಪಿ ದ್ವೀಪ'ದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2020ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಕರ್ನಾಟಕ ಸರ್ಕಾರವು ದ್ವೀಪದಲ್ಲಿನ 21 ವಾಣಿಜ್ಯ ಕಟ್ಟಡಗಳನ್ನು ನೆಲಸಮಗೊಳಿಸಿದೆ ಎಂದೂ ಮಾಹಿತಿ ನೀಡಿದ್ದಾರೆ.
ದ್ವೀಪದಲ್ಲಿ ಇನ್ನೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ ಸ್ಥಳೀಯರಾದ ಕುಮಾರ್ ಹೇಳಿದ್ದಾರೆ (ಅವರ ಹೆಸರು ಬದಲಾಯಿಸಲಾಗಿದೆ).
ಕೊಪ್ಪಳ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಹೋಮ್ಸ್ಟೇಗಳಿವೆ. ಅಲ್ಲಿ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೇವೆ ಸಿಗುತ್ತದೆ ಎಂದು ಕುಮಾರ್ ಹೇಳಿದರು. "ಇಲ್ಲಿ ಎಲ್ಲ ಹೋಮ್ಸ್ಟೇಗಳಿಗೆ ಅನುಮತಿಗಳಿಲ್ಲ. ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಸಮರ್ಪಕ ನಿಯಂತ್ರಣ ಪ್ರಾಧಿಕಾರವೂ ಇಲ್ಲ. ಹೀಗಾಗಿ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಪ್ರವಾಸಿ ಋತುವಿನಲ್ಲಿ (ನವೆಂಬರ್ನಿಂದ ಮಾರ್ಚ್ವರೆಗೆ) ಒಂದು ರಾತ್ರಿ ತಂಗಲು 5,000 ರೂಪಾಯಿಗಿಂತಲೂ ಹೆಚ್ಚು ಬಾಡಿಗೆ ನಿಗದಿ ಮಾಡುತ್ತಾರೆ,'' ಎಂದು ಅವರು ಮಾಹಿತಿ ನೀಡಿದರು.
ಅಕ್ರಮ ಹೋಮ್ಸ್ಟೇಗಳು?
ಹೆಚ್ಚಿನ ಹೋಮ್ಸ್ಟೇಗಳು ಮತ್ತು ರೆಸಾರ್ಟ್ ಮಾಲೀಕರು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಕಾರ್ಯನಿರ್ವಹಣೆ ಪರವಾನಗಿ ಪಡೆದಿಲ್ಲ ಎಂದು ಕುಮಾರ್ ಬಹಿರಂಗಪಡಿಸಿದ್ದಾರೆ. "ಪ್ರವಾಸಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಜಿಲ್ಲಾಡಳಿತ ಈ ವಿಚಾರದಲ್ಲಿ ಸಮನ್ವಯ ಸಾಧಿಸದೇ ಹೋಗಿರುವುದು ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು ಎದುರಿಸುತ್ತಿರುವ ಸವಾಲುಗಳಲ್ಲಿ ಒಂದು. ಈ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ,'' ಎಂದು ಕೊಪ್ಪಳದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.
ಅಧಿಕಾರಿ ಪ್ರಕಾರ, ಅನುಮತಿ ಮತ್ತಿತರ ವಿಚಾರಗಳಿಗಿಂತ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ಮತ್ತು ನೆಲದ ಕಾನೂನಿನ ಪ್ರಕಾರ ನ್ಯಾಯ ಒದಗಿಸುವುದೇ ಇಲ್ಲಿ ಮುಖ್ಯ. ಪ್ರವಾಸಿಗರನ್ನು ಹೋಮ್ ಸ್ಟೇ ಮಾಲಕಿ ರಾತ್ರಿಯಲ್ಲಿ ಹೊರಗೆ ಯಾಕೆ ಕರೆದುಕೊಂಡು ಹೋದರು ಎಂದು ಪ್ರಶ್ನಿಸುವುದು, ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದಾಗ ರಾತ್ರಿಯಲ್ಲಿ ಆಕೆ ಯಾಕೆ ಹೊರಗೆ ಹೋದಳು ಎಂದು ಕೇಳಿದಷ್ಟೇ ಬಾಲಿಶ. ಈ ಮೂಲಕ ಅವರು, ಈ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ಎದುರಿಸುವ ಒತ್ತಡವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಕೊಪ್ಪಳ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ಕಟ್ಟಡ ನಿರ್ಮಾಣ ಕಾರ್ಮಿಕರು. ಅವರಲ್ಲೊಬ್ಬ ವಿವಾಹಿತ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು 90 ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಬೇಕಾಗಿದೆ. ಈ ನಡುವೆ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಅವರು ಮೂವರು ಆರೋಪಿಗಳಿಗೆ ಶಿಕ್ಷೆ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿತೃಪ್ರಧಾನ ಮನಸ್ಥಿತಿ
ಇಸ್ರೇಲಿ ಪ್ರವಾಸಿಯೊಂದಿಗೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹೋಮ್ಸ್ಟೇ ಮಾಲಕಿ, ಆ ಕರಾಳ ರಾತ್ರಿ ಏನಾಯಿತು ಎಂಬುದರ ಬಗ್ಗೆ ಪೊಲೀಸರ ಮುಂದೆ ವಿವರ ದಾಖಲಿಸಿದ್ದಾರೆ. ಪ್ರಸಿದ್ಧ ಹನುಮಾನ್ ದೇವಾಲಯವಿರುವ ಆನೆಗುಂದಿಯಲ್ಲಿ ಅವರ ಹೋಮ್ ಸ್ಟೇ ಇದೆ. ಅಲ್ಲಿ ತಂಗಿದ್ದವರನ್ನು ಕರೆದುಕೊಂಡು ಹೋಗಿದ್ದಾಗ ಆರೋಪಿಗಳು ಮೃಗಗಳಂತೆ ಎರಗಿದ್ದರು.
ದ ಫೆಡರಲ್ ಜತೆ ಮಾತನಾಡಿದ ಅವರು, ತನ್ನ ಅತಿಥಿಗಳಿಗೆ ಆಗಿರುವ ಪರಿಸ್ಥಿತಿ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ.
ಹಂಪಿಯ ವಿರೂಪಾಕ್ಷ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದ ಗೇಬ್ರಿಯಲ್, ಇಂಥ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಪ್ರವಾಸಿಗರನ್ನು ರಾತ್ರಿಯಲ್ಲಿ ಹೊರಕ್ಕೆ ಕರೆದುಕೊಂಡು ಹೋದ ಹೋಮ್ಸ್ಟೇ ಮಾಲಕಿಯನ್ನು ದೂಷಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಪಿತೃಪ್ರಧಾನ ಮನಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಗೇಬ್ರಿಯಲ್ ಅವರ ಅಮೆರಿಕನ್ ಗೆಳತಿ ಮುಂದಿನ ಬಾರಿ ಭಾರತಕ್ಕೆ ಬರಲು ನಿರಾಕರಿಸಿದ್ದಾಳೆ. ಆಕೆಗೆ ಇಲ್ಲಿಗೆ ಬರುವುದು ಆತಂಕದ ಸಂಗತಿ. ''ನಾನು ಆಕೆಯ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ಸುರಕ್ಷತೆಯನ್ನೂ ನಾನು ಗಂಭೀರವಾಗಿ ಪರಿಗಣಿಸಬೇಕಾಗಿದೆ,'' ಎಂದು ಹೇಳಿದ್ದಾರೆ.
ಕಾನೂನಿನ ಹಿಡಿತ ಸಡಿಲ
ಶಾಂತವಾಗಿ ಕಾಣುವ ಈ ಸಣ್ಣ ಪ್ರವಾಸಿ ತಾಣ ಸಾಣಾಪುರದಲ್ಲಿ ಗಮನಿಸಬೇಕಾದ ಹಲವು ಸಂಗತಿಗಳಿವೆ. ಸಾಣಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳು ಸರಿಯಾದ ನಿಯಂತ್ರಣವಿಲ್ಲದೆ ಕಾನೂನುಬಾಹಿರ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿವೆ. ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮದ ನಡುವೆ ಒಂದೇ ಸಮನೆ ಹಣ ಗಳಿಸಲು ಜನ ಅಕ್ರಮ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.