ಹಲ್ದ್ವಾನಿಯಲ್ಲಿ ಹಿಂಸಾಚಾರ: 4 ಸಾವು, 250 ಜನರಿಗೆ ಗಾಯ
ಗುರುವಾರ (ಫೆಬ್ರವರಿ 8): ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮ ಮದರಸಾವನ್ನು ಕೆಡವುವ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ಕು ಜನರು ಸಾವಿಗೀಡಾಗಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನಗರದಲ್ಲಿ ಕರ್ಫ್ಯೂ ವಿಧಿಸಿದ್ದು, ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಂಡಲ್ಲಿ ಗುಂಡು ಹಾರಿಸಲು ಆದೇಶಿಸಲಾಗಿದೆ. ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಗಾಯಗೊಂಡವರಲ್ಲಿ 100 ಕ್ಕೂ ಹೆಚ್ಚು ಪೊಲೀಸರು ಸೇರಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಎ.ಪಿ. ಅನ್ಶುಮನ್ ಹೇಳಿದ್ದಾರೆ.
ನಗರದ ಬನ್‌ಭೂಲ್‌ಪುರ ಪ್ರದೇಶದ ಮಲಿಕ್ ಕಾ ಬಗೀಚಾದಲ್ಲಿ ʻಕಾನೂನುಬಾಹಿರವಾಗಿ ನಿರ್ಮಿಸಿದʼ ಮದರಸಾ ಮತ್ತು ಪಕ್ಕದ ಮಸೀದಿಯನ್ನು ಕೆಡವಿರುವುದನ್ನು ವಿರೋಧಿಸಿ ಸ್ಥಳೀಯರು ವಾಹನಗಳು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು. ಪೊಲೀಸರು, ಮದರಸಾ ಮತ್ತು ಅದರ ಸಂಕೀರ್ಣದಲ್ಲಿದ್ದ ಮಸೀದಿಯನ್ನು ಕೆಡವುತ್ತಿದ್ದ ಪುರಸಭೆಯ ಕಾರ್ಮಿಕರು ಹಾಗೂ ಹಲ್ದ್ವಾನಿ ಎಸ್‌ಡಿಎಂ ಗಾಯಗೊಂಡಿದ್ದಾರೆ.
ಸಿಎಂ ಅವರಿಂದ ಪರಿಸ್ಥಿತಿ ಅವಲೋಕನ: ಡೆಹ್ರಾಡೂನ್‌ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಮತ್ತು ಡಿಜಿಪಿ ಅಭಿನವ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲ್ದ್ವಾನಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಎಲ್ಲ ಅಂಗಡಿ ಮಳಿಗೆಗಳಲ್ಲದೆ, ನಗರ ಮತ್ತು ಸುತ್ತಮುತ್ತಲಿನ 1-12 ನೇ ತರಗತಿಯ ಎಲ್ಲಾ ಶಾಲೆಗಳನ್ನು ಕೂಡ ಮುಚ್ಚಲಾಗಿದೆ.
ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನಿನಲ್ಲಿ ಮದರಸಾ ಮತ್ತು ಮಸೀದಿ ಇದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಮತ್ತು ಪ್ರಾಂತೀಯ ಸಶಸ್ತ್ರ ಸೀಮಾ ಸೇನೆ ಸಿಬ್ಬಂದಿ ಸಮ್ಮುಖದಲ್ಲಿ ನೆಲಸಮ ಮಾಡಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ತಿಳಿಸಿದ್ದಾರೆ.
ಭುಗಿಲೆದ್ದ ಹಿಂಸಾಚಾರ: ಕಟ್ಟಡಗಳ ಕೆಡವುವಿಕೆ ಪ್ರಾರಂಭವಾಗುತ್ತಿದ್ದಂತೆ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸಿದರು. ಬ್ಯಾರಿಕೇಡ್ ಗಳನ್ನು ಮುರಿದು, ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಬುಲ್ಡೋಜರ್ ಮದರಸಾ ಮತ್ತು ಮಸೀದಿಯನ್ನು ಧ್ವಂಸ ಗೊಳಿಸುತ್ತಿದ್ದಂತೆ, ಪೊಲೀಸ್, ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ಮತ್ತು ಪತ್ರಕರ್ತರ ಮೇಲೆ ಕಲ್ಲು ತೂರಾಟ ನಡೆಸಿದರು. ಲಘು ಲಾಠಿ ಪ್ರಹಾರ ಮತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಆದರೆ, ಗುಂಪು ಪೊಲೀಸ್ ಗಸ್ತು ವಾಹನ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿತು ಎಂದು ಮೀನಾ ಹೇಳಿದರು. ಸಂಜೆ ಬನ್ಭೂಲ್‌ಪುರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರಿಂದ, ಪಟ್ಟಣದಲ್ಲಿ ಕರ್ಫ್ಯೂ ಹೇರಲಾಯಿತು ಎಂದು ಹೇಳಿದರು.
ಹೈಕೋರ್ಟ್‌ನಲ್ಲಿ ವಿಚಾರಣೆ: ಮಸೀದಿ ಮತ್ತು ಮದರಸಾ ಧ್ವಂಸವನ್ನು ತಡೆಯುವಂತೆ ಕೋರಿ ಮಲಿಕ್ ಕಾಲೋನಿ ನಿವಾಸಿ ಸಫಿಯಾ ಮಲಿಕ್ ಮತ್ತು ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್, ಈ ಸಂಬಂಧ ಯಾವುದೇ ಆದೇಶ ನೀಡಲಿಲ್ಲ. ಬದಲಾಗಿ, ನ್ಯಾಯಮೂರ್ತಿ ಪಂಕಜ್ ಪುರೋಹಿತ್ ಅವರ ರಜಾಕಾಲದ ಪೀಠ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತು.
ಸಿಎಂ ಹೇಳಿಕೆ: ಹಿರಿಯ ಅಧಿಕಾರಿಗಳೊಂದಿಗಿನ ಸಭೆ ನಂತರ ಮುಖ್ಯಮಂತ್ರಿ ಧಾಮಿ,ʻನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಅತಿಕ್ರಮವನ್ನು ತೆಗೆದುಹಾಕಲು ಹೋಗಿದ್ದಾಗ, ಕೆಲವರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಹೆಚ್ಚುವರಿ ಪೊಲೀಸರು ಮತ್ತು ಕೇಂದ್ರೀಯ ಅರೆಸೇನಾ ಪಡೆಗಳನ್ನು ರವಾನಿಸಲಾಗಿದೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2022 ರಲ್ಲಿಹೈಕೋರ್ಟಿನ ಆದೇಶದ ಅನುಸಾರ 29 ಎಕರೆ ರೈಲ್ವೆ ಭೂಮಿಯ ಅತಿಕ್ರಮಣ ತೆರವುಗೊಳಿಸಲು ಮುಂದಾಗಿದ್ದಾಗ, ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.