ನಿಮ್ಮದೇ ಕೇಡರ್ ಬೆಳೆಸಿ ಸ್ವಾವಲಂಬಿಯಾಗಿ; ಬಿಜೆಪಿಗೆ ಆರ್‌ಎಸ್‌ಎಸ್ ಸೂಚನೆ
ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಇದರರ್ಥವಲ್ಲ. ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಪೂರ್ಣಾವಧಿ ಕಾರ್ಯಕರ್ತರು ಅಥವಾ ಪ್ರಚಾರಕರು ಇರುತ್ತಾರೆ. ಆದರೆ, ಬಿಜೆಪಿ ತಳಮಟ್ಟದಲ್ಲಿ ತನ್ನದೇ ಮಾನವ ಸಂಪನ್ಮೂಲವನ್ನು ಹೊಂದಿರಬೇಕಾಗುತ್ತದೆ. ಕ್ರಮೇಣ ಆರ್‌ಎಸ್‌ಎಸ್ ತನ್ನ ಪೂರ್ಣಾವಧಿಯ ಕಾರ್ಯಕರ್ತರನ್ನು ಎಲ್ಲಾ 36 ಸಂಘಟನೆಗಳಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸುತ್ತದೆʼ ಎಂದು ಆರ್‌ಎಸ್‌ಎಸ್ ವೀಕ್ಷಕ ದಿಲೀಪ್ ದೇವಧರ್ ʻದ ಫೆಡರಲ್ʼಗೆ ತಿಳಿಸಿದರು
ಏಳು ಹಂತದ ಲೋಕಸಭೆ ಚುನಾವಣೆಯ ನಡುವೆಯೇ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಬಿಜೆಪಿ ಸೇರಿದಂತೆ ತನ್ನ ಎಲ್ಲ 36 ಅಂಗಸಂಸ್ಥೆಗಳಿಗೆ ಸ್ವಾವಲಂಬಿಯಾಗಲು ಮತ್ತು ತಮ್ಮದೇ ಆದ ಕಾರ್ಯಕರ್ತರನ್ನು ಬೆಳೆಸಲು ಮತ್ತು ತರಬೇತಿ ನೀಡಲು ಕೇಳಿಕೊಂಡಿದೆ.
ಸಂಘ ಪರಿವಾರದ ಹಿರಿಯ ಸದಸ್ಯರು ಈ ವಿಷಯವನ್ನು ʻದ ಫೆಡರಲ್ʼಗೆ ತಿಳಿಸಿದ್ದಾರೆ. ಆರ್‌ಎಸ್‌ಎಸ್‌ನ ಇತರ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತಮ್ಮದೇ ಆದ ಕೇಡರ್ ಮತ್ತು ಪೂರ್ಣಾವಧಿ ಕಾರ್ಯಕರ್ತರನ್ನು ಹೊಂದಿದ್ದು, ಆರೆಸ್ಸೆಸ್ ಪ್ರಚಾರಕರನ್ನು ಅವಲಂಬಿಸಿಲ್ಲ.
ಆರ್‌ಎಸ್‌ಎಸ್‌ನ ಹಿರಿಯ ನಾಯಕರು ಇದೀಗ ಪೂರ್ಣಾವಧಿಯ ಮತ್ತು ಅರೆಕಾಲಿಕ ಕಾರ್ಯಕರ್ತರ ಸ್ವಂತ ಪಡೆಯನ್ನು ಬೆಳೆಸುವಂತೆ ಬಿಜೆಪಿ ನಾಯಕತ್ವವನ್ನು ಕೇಳಿಕೊಂಡಿದ್ದಾರೆ. ತರಬೇತಾದ ಕಾರ್ಯಕರ್ತರು ಬಿಜೆಪಿಯ ಸಮರ್ಪಿತ ಕಾರ್ಯಪಡೆಯಾಗಿ ಕಾರ್ಯನಿರ್ವಹಿಸು ತ್ತಾರೆ. ಅವರ ಸೇವೆಗಳಿಗೆ ಪಕ್ಷ ಶುಲ್ಕ ಪಾವತಿಸುತ್ತದೆ.
ಪ್ರಸ್ತುತ, ಬಿಜೆಪಿಯು ಪಕ್ಷದ ತಳಮಟ್ಟದ ಕೆಲಸಗಳನ್ನು ನಿರ್ವಹಿಸಲು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಅವಲಂಬಿಸಿದೆ.
ಆರ್‌ಎಸ್‌ಎಸ್ ವಿಸ್ತರಣೆ ಯೋಜನೆಗಳು: ಆರ್‌ಎಸ್‌ಎಸ್ ಸದಸ್ಯರ ಪ್ರಕಾರ, ದೇಶದ ಒಳಗೆ ಮತ್ತು ಹೊರಗೆ ತನ್ನ ಕೆಲಸವನ್ನು ವಿಸ್ತರಿಸಲು ಹೆಚ್ಚಿನ ಮಾನವಶಕ್ತಿ ಅಗತ್ಯವಿದೆ ಎಂದು ಸಂಘ ಭಾವಿಸಿದೆ. ಆದ್ದರಿಂದ ತಮ್ಮದೇ ಸ್ವಂತ ಕಾರ್ಯಪಡೆಯನ್ನು ಬೆಳೆಸಲು ಅಂಗಸಂಸ್ಥೆಗಳಿಗೆ ಸಂದೇಶ ರವಾನಿಸಿದೆ.
ಅನಿವಾಸಿ ಭಾರತೀಯರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವ ಪೂರ್ಣಾವಧಿ ಕಾರ್ಯಕರ್ತರನ್ನು ಅಮೆರಿಕ, ಯುರೋಪ್, ಆಸ್ಟ್ರೇಲಿಯ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗಸಂಸ್ಥೆಯಾದ ಹಿಂದೂ ಸ್ವಯಂಸೇವಕ ಸಂಘ (ಎಚ್‌ಎಸ್‌ಎಸ್) ದಲ್ಲಿ ಕೆಲಸ ಮಾಡಲು ಕಳುಹಿಸಲು ಬಯಸುತ್ತದೆ.
ಆರ್‌ಎಸ್‌ಎಸ್‌ಗೆ ತನ್ನ ಆರೋಗ್ಯರಕ್ಷಣೆ ಯೋಜನೆಗಳಲ್ಲಿ ಮತ್ತು ಮಹಾರಾಷ್ಟ್ರ ಹಾಗೂ ದೇಶದ ಇತರ ಭಾಗಗಳಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಮಾನವಶಕ್ತಿ ಅಗತ್ಯವಿದೆ.
ನಾಗ್ಪುರ ಮೂಲದ ಹಿರಿಯ ಆರ್‌ಎಸ್‌ಎಸ್ ವೀಕ್ಷಕ ದಿಲೀಪ್ ದೇವಧರ್ ʻದ ಫೆಡರಲ್ ʼಜೊತೆ ಮಾತನಾಡಿ,ʻಆರ್‌ಎಸ್‌ಎಸ್ ಒಂದು ಸಾಮಾಜಿಕ ಸಂಸ್ಥೆ ಮತ್ತು ಬಿಜೆಪಿ ಒಂದು ರಾಜಕೀಯ ಸಂಘಟನೆ. ಆರೆಸ್ಸೆಸ್ಸಿನ ಕೆಲವು ಪೂರ್ಣಾವಧಿ ಕಾರ್ಯಕರ್ತರು ಬಿಜೆಪಿಯ ಭಾಗವಾಗಿರುವುದು ನಿಜ. ಆದರೆ, ಮೂಲಭೂತವಾಗಿ ಆರೆಸ್ಸೆಸ್ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ. ಈ ಕಾರಣಕ್ಕಾಗಿಯೇ ಸ್ವಂತ ಮಾನವಶಕ್ತಿ ಯನ್ನು ಹೆಚ್ಚಿಸಲು ಬಿಜೆಪಿಯನ್ನು ಆರ್‌ಎಸ್‌ಎಸ್ ಕೇಳಿಕೊಂಡಿದೆ. ಇದರಿಂದ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರನ್ನು ಇತರ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು,ʼಎಂದರು.
ʻಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಯಾವುದೇ ಸೈದ್ಧಾಂತಿಕ ಭಿನ್ನತೆ ಇಲ್ಲ,ʼ ಎಂದು ಅವರು ಹೇಳಿದರು. ಈ ಹಿಂದೆ ಬಿಜೆಪಿ ದುರ್ಬಲವಾಗಿದ್ದಾಗ, ಆರೆಸ್ಸೆಸ್ ಕಾರ್ಯಕರ್ತರು ಪಕ್ಷದ ಸಂಘಟನೆಗೆ ನೆರವಾಗುತ್ತಿದ್ದರು. ಆದರೆ, ಈಗ ಬಿಜೆಪಿ ತನ್ನದೇ ಆದ ಕಾರ್ಯಕರ್ತರನ್ನು ಹೆಚ್ಚಿಸಿ ಕೊಳ್ಳಬೇಕು,ʼ ಎಂದು ದೇವಧರ್ ಪ್ರತಿಪಾದಿಸಿದರು.
ತಳಮಟ್ಟದಲ್ಲಿ ಬೆಂಬಲ ವಾಪಸು: ಯೋಜನೆ ಪ್ರಕಾರ, ಬಿಜೆಪಿ ಕ್ರಮೇಣ ತನ್ನದೇ ಆದ ಕಾರ್ಯಕರ್ತರನ್ನು ತಯಾರು ಮಾಡುತ್ತದೆ ಮತ್ತು ಆರ್‌ಎಸ್‌ಎಸ್ ಪ್ರಚಾರಕರ ಸಂಖ್ಯೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ ಇಲ್ಲವೇ ಬಿಜೆಪಿಗೆ ಅವಿವಾಹಿತ ಪೂರ್ಣಾವಧಿ ಕಾರ್ಯಕರ್ತರ ʻಎರವಲುʼ ಕಡಿಮೆ ಮಾಡುತ್ತದೆ.
ಆರೆಸ್ಸೆಸ್ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಥವಾ ರಾಜ್ಯಗಳಲ್ಲಿ ಪ್ರಚಾರಕರನ್ನು ನೀಡುವುದನ್ನು ಮುಂದುವರಿಸಿದರೂ, ಜಿಲ್ಲಾ ಮಟ್ಟದ ಕಾರ್ಯಕರ್ತರನ್ನು ಕ್ರಮೇಣ ಹಿಂತೆಗೆದುಕೊಳ್ಳಲಿದೆ. ಇದರಿಂದ ಬಿಜೆಪಿ ತಳಮಟ್ಟದಲ್ಲಿ ತನ್ನದೇ ಆದ ಮಾನವ ಸಂಪನ್ಮೂಲವನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ʻಆರ್‌ಎಸ್‌ಎಸ್ ಮನವಿಯಲ್ಲಿ ಹೊಸದೇನೂ ಇಲ್ಲʼ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ. ʻವಿಎಚ್‌ಪಿಯ ಲ್ಲಿ ಹಲವಾರು ಆರ್‌ಎಸ್‌ಎಸ್ ಪ್ರಚಾರಕರು ಇದ್ದಾರೆ. ಆದರೆ, ವಿಎಚ್‌ಪಿ ತನ್ನ ವಿವಿಧ ಸಂಘಟನೆಗಳಾದ ಬಜರಂಗದಳ, ದುರ್ಗಾವಾಹಿನಿ ಮತ್ತು ಇತರ ಸಂಸ್ಥೆಗಳಿಗೆ ಸಾವಿರಾರು ಕಾರ್ಯಕರ್ತರನ್ನು ನೇಮಿಸಿದೆ,ʼ ಎಂದು ಅವರು ʻದ ಫೆಡರಲ್ʼಗೆ ತಿಳಿಸಿದರು. ʻನಾವು ಬಹಳ ಹಿಂದೆ ಯೇ ಸ್ವಂತ ಕಾರ್ಯಕರ್ತರನ್ನು ಬೆಳೆಸಲು ಪ್ರಾರಂಭಿಸಿದ್ದೇವೆ. ಈ ಕರೆ ವಿಎಚ್‌ಪಿಗೆ ಹೊಸದಲ್ಲ,ʼ ಎಂದು ಹೇಳಿದರು.
ಆರ್‌ಎಸ್‌ಎಸ್ ನಾಯಕತ್ವವು ತನ್ನ ಅಂಗಸಂಸ್ಥೆಗಳಿಗೆ ʻಸ್ವಾವಲಂಬಿʼ ಆಗುವ ಅವಶ್ಯಕತೆಯಿದೆ ಎಂದು ಯಾವಾಗಲೂ ಹೇಳುತ್ತಿರುತ್ತದೆ. ಮತ್ತು, ಸಂಘಟನೆ ತನ್ನದೇ ಆದ ಸಮರ್ಪಿತ ಮಾನವಶಕ್ತಿಯನ್ನು ಹೊಂದಿದೆ.
ಬಿಜೆಪಿ ಸ್ವಾವಲಂಬನೆ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇತ್ತೀಚೆಗೆ ʻಬಿಜೆಪಿ ಈಗ ಹೆಚ್ಚು ಸ್ವಾವಲಂಬಿಯಾಗಿದೆ ಮತ್ತು ತನ್ನ ವ್ಯವ ಹಾರಗಳನ್ನು ನಿರ್ವಹಿಸಿಕೊಳ್ಳಬಲ್ಲದುʼ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದರು. ಇದು ಭವಿಷ್ಯದಲ್ಲಿ ಬಿಜೆಪಿ ಹೆಚ್ಚು ಸ್ವಾವಲಂಬಿಯಾಗುವತ್ತ ಒಂದು ಹೆಜ್ಜೆಯಾಗಿದೆ.
ಕೆಲ ವರ್ಷಗಳಿಂದ ಈ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ ಬಿಜೆಪಿ ಸದಸ್ಯರು. ಪಕ್ಷದ ಸದಸ್ಯತ್ವವನ್ನು 11 ಕೋಟಿಗೆ ಹೆಚ್ಚಿಸುವ ನಿರ್ಧಾರವು ಕ್ಷೇತ್ರಗಳಲ್ಲಿ ಪಕ್ಷದ ಕೆಲಸವನ್ನು ಮತ್ತು ತಳಮಟ್ಟದಲ್ಲಿ ಕೆಲಸ ಮಾಡಲು ಜನಬಲವನ್ನು ಸುಧಾರಿಸುವ ಪ್ರಯತ್ನವಾಗಿತ್ತು.
ಎರಡು ರೀತಿಯ ಕಾರ್ಯಪಡೆಯನ್ನು ರೂಪಿಸುವುದು ಈ ಆಲೋಚನೆಯ ಹಿಂದಿನ ತರ್ಕ- ಬಿಜೆಪಿಗೆ ಮಾತ್ರ ಕೆಲಸ ಮಾಡುವ, ಸೇವೆಗಳಿಗೆ ಪಕ್ಷದಿಂದ ಹಣ ಪಡೆಯುವ ಪೂರ್ಣಾವಧಿ ಕಾರ್ಯಕರ್ತರು ಮತ್ತು ಆರು ತಿಂಗಳು ಅಥವಾ ಒಂದು ವರ್ಷ ಕೆಲಸ ಮಾಡುವ ಅರೆಕಾಲಿಕ ಕಾರ್ಯಕರ್ತರು.
ತರಬೇತಿ ಕಾರ್ಯಕ್ರಮ: 2024 ರ ಸಾರ್ವತ್ರಿಕ ಚುನಾವಣೆ ಘೋಷಣೆಗೆ ಎರಡು ತಿಂಗಳ ಮೊದಲು ಬಿಜೆಪಿ ನಾಯಕತ್ವವು ವಿಕಸಿತ್ ಭಾರತ್ ಎಂಬ ದೇಶವ್ಯಾಪಿ ಸಾಮೂಹಿಕ ಸಂಪರ್ಕ ಉಪಕ್ರಮವನ್ನು ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಇದರ ನೇತೃತ್ವ ವಹಿಸಿದ್ದರು. ಪ್ರತಿ ರಾಜ್ಯಕ್ಕೆ ಭೇಟಿ ನೀಡಿ, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ವಿವಿಧ ಜನಪರ ಕಾರ್ಯಕ್ರಮಗಳಾದ ಉಜ್ವಲ ಅಥವಾ ಜನ್ ಧನ್ ಯೋಜನೆಗಳ 40 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ತಲುಪುವುದು ಮಾತ್ರ ವಿಕಸಿತ್ ಭಾರತ್ ಕಾರ್ಯಕ್ರಮದ ಉದ್ದೇಶವಾಗಿರಲಿಲ್ಲ.ಬದಲಿಗೆ, ಪಕ್ಷದ ಸಂಘಟನಾ ಶಕ್ತಿಯನ್ನು ಪರೀಕ್ಷಿಸಲು ಈ ಪ್ರಯತ್ನ ನಡೆಯಿತು ಎಂದು ಬಿಜೆಪಿ ಹಿರಿಯ ನಾಯಕರು ಹೇಳುತ್ತಾರೆ.
ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬ ಫಲಾನುಭವಿಯ ಮನೆಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಭೇಟಿ ನೀಡಿದರು. ಬಿಜೆಪಿಗೆ ತನ್ನದೇ ಆದ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವಿದೆಯೇ ಎಂದು ಪರಿಶೀಲಿಸಿದರು.
ʻಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಇದರರ್ಥವಲ್ಲ. ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಪೂರ್ಣಾವಧಿ ಕಾರ್ಯಕರ್ತರು ಅಥವಾ ಪ್ರಚಾರಕರು ಇರುತ್ತಾರೆ. ಆದರೆ, ಬಿಜೆಪಿ ತಳಮಟ್ಟದಲ್ಲಿ ತನ್ನದೇ ಮಾನವ ಸಂಪನ್ಮೂಲವನ್ನು ಹೊಂದಿರಬೇಕಾಗುತ್ತದೆ. ಕ್ರಮೇಣ ಆರ್‌ಎಸ್‌ಎಸ್ ತನ್ನ ಪೂರ್ಣಾವಧಿಯ ಕಾರ್ಯಕರ್ತರನ್ನು ಎಲ್ಲಾ 36 ಸಂಘಟನೆಗಳಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸುತ್ತದೆʼ ಎಂದು ದೇವಧರ್ ʻದ ಫೆಡರಲ್ʼಗೆ ತಿಳಿಸಿದರು.