
ಸೆಪ್ಟೆಂಬರ್ 6 ರಂದು ದೆಹಲಿ ನ್ಯಾಯಾಲಯವು ಪತ್ರಕರ್ತರಿಗೆ ಲೇಖನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಅಳಿಸಲು ಸೂಚಿಸಿತ್ತು.
ಅದಾನಿ ಎಂಟರ್‌ಪ್ರೈಸಸ್ ಕುರಿತ ವಿಡಿಯೊ, ಪೋಸ್ಟ್ ತೆಗೆದುಹಾಕಲು ಆದೇಶ
ಮಾಧ್ಯಮಗಳು ಮತ್ತು ಡಿಜಿಟಲ್ ಕ್ರಿಯೇಟರ್, ನ್ಯೂಸ್‌ಲಾಂಡ್ರಿ, ದಿ ವೈರ್, ಹೆಚ್‌ಡಬ್ಲ್ಯೂ ನ್ಯೂಸ್ ಮತ್ತು ಆಕಾಶ್ ಬ್ಯಾನರ್ಜಿ ಅವರ ದಿ ದೇಶಭಕ್ತ್ ಮತ್ತು ಡಿಜಿಟಲ್ ಕ್ರಿಯೇಟರ್ ರವೀಶ್ ಕುಮಾರ್, ಅಜಿತ್ ಅಂಜುಮ್ ಮತ್ತು ಧ್ರುವ್ ರಾಥಿ ಅವರಿಗೂ ನೊಟೀಸ್ ನೀಡಲಾಗಿದೆ.
ಅದಾನಿ ಗ್ರೂಪ್ ಉಲ್ಲೇಖಿಸಿ ಹಾಕಿರುವ ವಿಡಿಯೊ ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್ ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಎರಡು ಮಾಧ್ಯಮ ಸಂಸ್ಥೆಗಳು ಮತ್ತು ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ನೋಟಿಸ್ ನೀಡಿದೆ. ಇದರಲ್ಲಿ 138 ಡಿಡಿಯೊಗಳು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಆದೇಶಿಸಲಾಗಿದೆ.
ಮಾಧ್ಯಮಗಳು ಮತ್ತು ಡಿಜಿಟಲ್ ಕ್ರಿಯೇಟರ್, ನ್ಯೂಸ್‌ಲಾಂಡ್ರಿ, ದಿ ವೈರ್, ಹೆಚ್‌ಡಬ್ಲ್ಯೂ ನ್ಯೂಸ್ ಮತ್ತು ಆಕಾಶ್ ಬ್ಯಾನರ್ಜಿ ಅವರ ದಿ ದೇಶಭಕ್ತ್ ಮತ್ತು ಡಿಜಿಟಲ್ ಕ್ರಿಯೇಟರ್ ರವೀಶ್ ಕುಮಾರ್, ಅಜಿತ್ ಅಂಜುಮ್ ಮತ್ತು ಧ್ರುವ್ ರಾಥಿ ಅವರಿಗೂ ನೊಟೀಸ್ ನೀಡಲಾಗಿದೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಸೆಪ್ಟೆಂಬರ್ 6 ರಂದು ವಾಯವ್ಯ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿತ್ತು.ಮೊಕದ್ದಮೆಯ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಸೆ.6ರಂದು ಗ್ಯಾಗ್ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಉಲ್ಲೇಖಿಸಿ, ಎಂಐಬಿ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಮಾಧ್ಯಮ ಸಂಸ್ಥೆಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳಿಂದ ಅದಾನಿಗೆ ಸಂಬಂಧಿಸಿದ ವಿಡಿಯೊಗಳನ್ನು ತೆಗೆದುಹಾಕಿಲ್ಲ ಎಂದು ಹೇಳಿದೆ.
ಸಚಿವಾಲಯದ ಆದೇಶ
"ಮೇಲಿನ ಆದೇಶಕ್ಕೆ ಅನುಸಾರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಸೂಚನೆ ನೀಡಿದ 36 ಗಂಟೆಗಳ ಒಳಗಾಗಿ ಸಚಿವಾಲಯಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ. ನ್ಯೂಸ್‌ಲಾಂಡ್ರಿಗೆ ಮಾತ್ರ 42 ವಿಡಿಯೊಗಳನ್ನು ತೆಗೆದುಹಾಕಲು ಸೂಚನೆ ಬಂದಿವೆ. ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಆಯೋಗದ ಸಾರ್ವಜನಿಕ ವರದಿ ಉಲ್ಲೇಖಿಸಿದ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಾಗಿ ʼದಿ ವೈರ್ʼಗೆ ನೋಟಿಸ್ ನೀಡಲಾಗಿದೆ. ಐಟಿ ನಿಯಮಗಳು 2021 ರಡಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ನೋಟಿಸ್ ಪ್ರತಿಗಳನ್ನು ಮೆಟಾ ಪ್ಲಾಟ್‌ಫಾರ್ಮ್‌ಗಳು ಮತ್ತು ಗೂಗಲ್‌ಗೆ ಕಳುಹಿಸಲಾಗಿದೆ.
ಪತ್ರಕರ್ತರಿಗೆ ಮನವಿ
ಪತ್ರಕರ್ತರಾದ ಪರಂಜಯ್ ಗುಹಾ ಠಾಕುರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಆಯುಷ್ಕಾಂತ ದಾಸ್ ಮತ್ತು ಆಯುಷ್ ಜೋಶಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಾರೆ. ತಮ್ಮ ವರದಿಗಳು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಅನ್ನು ನೇರವಾಗಿ ಉಲ್ಲೇಖಿಸುವುದಿಲ್ಲ, ಬದಲಿಗೆ ಗೌತಮ್ ಅದಾನಿ ಅಥವಾ ಅದಾನಿ ಗ್ರೂಪ್ ಉಲ್ಲೇಖಿಸುತ್ತವೆ ಎಂದು ವಾದಿಸಿದರು. ನ್ಯಾಯಾಲಯದ ಆದೇಶವು ತುಂಬಾ ವಿಸ್ತಾರವಾಗಿದೆ. ಯಾವ ವಿಷಯವು ಮಾನಹಾನಿಕರವಾಗಿದೆ ಎಂಬುದನ್ನು ನಿರ್ದಿಷ್ಟಪಡಿಸುವುದಿಲ್ಲ ಎಂದು ಪರಂಜಯ್ ಠಾಕುರ್ತಾ ಹೇಳಿದರು.
ಅದಾನಿ ಗ್ರೂಪ್‌ನ ದೃಷ್ಟಿಕೋನ
ಮಾನನಷ್ಟ ಮೊಕದ್ದಮೆಯಲ್ಲಿ, ಕೆಲವು ಪತ್ರಕರ್ತರು ಮತ್ತು ಕಾರ್ಯಕರ್ತರು ವರದಿ ಮಾಡುವುದರಿಂದ ಕಂಪನಿಯ ಖ್ಯಾತಿ ಮತ್ತು ಬ್ರಾಂಡ್ ಮೌಲ್ಯಕ್ಕೆ ಹಾನಿಯಾಗಿದೆ. ಹೂಡಿಕೆದಾರರ ವಿಶ್ವಾಸ ಕುಗ್ಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕಳಂಕ ಬಂದಿದೆ ಎಂದು ಎಇಎಲ್ ಆರೋಪಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳನ್ನು ಅಡ್ಡಿಪಡಿಸುವ ಗುರಿ ಹೊಂದಿರುವ ಭಾರತ ವಿರೋಧಿ ಹಿತಾಸಕ್ತಿಗಳಿಗೆ ಅನುಗುಣವಾಗಿ ವರದಿಗಳಿವೆ ಎಂದು ಅದಾನಿ ಗ್ರೂಪ್ ಆರೋಪಿಸಿದೆ.
ಅದಾನಿ ಬಲವಾದ ಪ್ರಾಥಮಿಕ ಮೊಕದ್ದಮೆಯನ್ನು ಹೂಡಿದ್ದಾರೆ ಎಂದು ಸಿವಿಲ್ ನ್ಯಾಯಾಲಯ ಒಪ್ಪಿಕೊಂಡಿದೆ. ಆಧಾರರಹಿತ ವರದಿಗಳು ಶತಕೋಟಿ ಹೂಡಿಕೆದಾರರ ನಿಧಿಗಳನ್ನು ನಾಶ ಮಾಡಬಹುದು, ಮಾರುಕಟ್ಟೆಯಲ್ಲಿ ಭೀತಿಯನ್ನು ಉಂಟು ಮಾಡಬಹುದು ಎಂದು ಗಮನಿಸಿದೆ.