ಪ್ರಾಯೋಗಿಕ ಯೋಜನೆಗೆ ಸುಮಾರು 800 ಕೋಟಿ ರೂ. ವೆಚ್ಚವಾಗಲಿದೆ. ಇಂಟರ್ನ್‌ಶಿಪ್ ಡಿಸೆಂಬರ್ 2 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಲಕ್ಷ ಅಭ್ಯರ್ಥಿಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.

ನವದೆಹಲಿ: ಕೇಂದ್ರ ಸರ್ಕಾರವು ಪ್ರಾಯೋಗಿಕ ಆಧಾರದ ಮೇಲೆ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಹೊರತಂದಿದೆ. 21-24 ವರ್ಷ ವಯಸ್ಸಿನವರಿಗೆ ವಾರ್ಷಿಕ 66,000 ರೂ. ಆರ್ಥಿಕ ಸಹಾಯ ನೀಡಲಿದ್ದು, 5 ವರ್ಷದಲ್ಲಿ ಒಂದು ಕೋಟಿ ಯುವಜನರನ್ನು ಒಳಗೊಳ್ಳುವ ಗುರಿ ಹೊಂದಿದೆ.

ಪ್ರಾಯೋಗಿಕ ಯೋಜನೆಗೆ ಸುಮಾರು 800 ಕೋಟಿ ರೂ. ವೆಚ್ಚವಾಗಲಿದೆ. ಇಂಟರ್ನ್‌ಶಿಪ್ ಡಿಸೆಂಬರ್ 2 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಲಕ್ಷ ಅಭ್ಯರ್ಥಿಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.

ಈ ಯೋಜನೆಯನ್ನು 2024ರ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇಂಟರ್ನ್‌ಶಿಪ್ ಯೋಜನೆಯಲ್ಲಿ ಇಂಟರ್ನಿಗಳಿಗೆ ವಿಮೆ ರಕ್ಷಣೆಯನ್ನೂ ನೀಡುತ್ತದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಆನ್‌ಲೈನ್ ಪೋರ್ಟಲ್ www.pminternship.mca.gov.in ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಒಂದು ವರ್ಷ ಮಾಸಿಕ 5,000 ರೂ.ಆರ್ಥಿಕ ಸಹಾಯ ಹಾಗೂ ಇಂಟರ್ನಿಗಳಿಗೆ 6,000 ರೂ.ಅನುದಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 12 ರಿಂದ 25 ರವರೆಗೆ ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಫಲಾನುಭವಿಗಳನ್ನು ಅಕ್ಟೋಬರ್ 26 ರಂದು ಪಟ್ಟಿ ಮಾಡಲಾಗುತ್ತದೆ. ಅಕ್ಟೋಬರ್ 27 ರಿಂದ ನವೆಂಬರ್ 7 ರವರೆಗೆ ಅಭ್ಯರ್ಥಿಗಳನ್ನು ಕಂಪನಿಗಳು ಆಯ್ಕೆ ಮಾಡುತ್ತವೆ. ಆಯ್ಕೆಯಾದವರಿಗೆ ನವೆಂಬರ್ 8 ರಿಂದ 15 ರವರೆಗೆ ಸಮಯವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಗೆ ಅಗ್ರ 500 ಕಂಪನಿಗಳನ್ನು ಗುರುತಿಸಲಾಗಿದ್ದು, ಸಚಿವಾಲಯವು ಸರ್ಕಾರಿ ಸ್ವಾಮ್ಯದ BISAG-N ನೊಂದಿಗೆ ಪಾಲುದಾರಿಕೆ ಹೊಂದಿದೆ. ಮಾಸಿಕ 5,000 ರೂ.ಗಳಲ್ಲಿ ಸರ್ಕಾರ 4,500 ರೂ. ಹಾಗೂ ಕಂಪನಿ 500 ರೂ. ಸಿಎಸ್‌ಆರ್ ನಿಧಿಯಿಂದ ಪಾವತಿಸುತ್ತದೆ. ಮೊತ್ತವ ನ್ನು ನೇರವಾಗಿ ಇಂಟರ್ನಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.

ಮೀಸಲು ವ್ಯವಸ್ಥೆ: ಯೋಜನೆಯಡಿ ಅಭ್ಯರ್ಥಿಗಳನ್ನು ಆಯ್ಕೆಗೆ ಮೀಸಲು ಅನ್ವಯವಾಗುತ್ತದೆ. ಯೋಜನೆ ಇಂಟರ್ನ್‌ಶಿಪ್ ಒದಗಿಸುತ್ತದೆಯೇ ಹೊರತು ಉದ್ಯೋಗವನ್ನಲ್ಲ. ಅಲೆಂಬಿಕ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ 1,077 ಇಂಟರ್ನಿಗಳಿಗೆ ಅವಕಾಶ ನೀಡಿವೆ.

ತೆಲಂಗಾಣ ಮತ್ತು ಉತ್ತರಾಖಂಡದ ತಲಾ ಒಂದು ಜಿಲ್ಲೆ, ಗುಜರಾತ್‌ನ ಎರಡು ಮತ್ತು ಮಹಾರಾಷ್ಟ್ರದ ಮೂರು ಜಿಲ್ಲೆಗಳು ಯೋಜನೆಯಡಿ ಬರಲಿವೆ. ಯೋಜನೆಯಲ್ಲಿ ಭಾಗಿಯಾಗುವ ಕಂಪನಿಗಳಲ್ಲಿ ನೋಡಲ್ ವ್ಯಕ್ತಿಗಳು ಇರುತ್ತಾರೆ. ಕೇಂದ್ರ ಸರ್ಕಾರದ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಅಡಿಯಲ್ಲಿ ಇಂಟರ್ನಿಗಳಿಗೆ ವಿಮೆ ರಕ್ಷಣೆ ಒದಗಿಸಲಾಗುತ್ತದೆ; ಪ್ರೀಮಿಯಂ ಮೊತ್ತವನ್ನು ಸರ್ಕಾರ ನೀಡಲಿದೆ.

2023-24ರ ಆರ್ಥಿಕ ವರ್ಷದಲ್ಲಿ ಕುಟುಂಬದ ಯಾವುದೇ ಸದಸ್ಯರು 8 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ.

ಶೈಕ್ಷಣಿಕ ಅರ್ಹತೆ: ಹೈಸ್ಕೂಲ್, ಹೈಯರ್ ಸೆಕೆಂಡರಿ ಉತ್ತೀರ್ಣ, ಐಟಿಐ, ಪಾಲಿಟೆಕ್ನಿಕ್ ಡಿಪ್ಲೊಮಾ, ಪದವಿಗಳು ಹಾಗೂ ಬಿ ಫಾರ್ಮಾ ಪದವೀಧರರು ಯೋಜನೆಗೆ ಅರ್ಹರಾಗಿರುತ್ತಾರೆ. ಪಾಲುದಾರ ಕಂಪನಿಗಳು ಪೋರ್ಟಲ್‌ನಲ್ಲಿ ಇಂಟರ್ನ್‌ಶಿಪ್ ಅವಕಾಶದ ವಿವರ ನೀಡಬಹುದು. ಅರ್ಹ ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

Next Story