ಕಸ್ತೂರಿ ರಂಗನ್ ವರದಿ | ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ: 6ನೇ ಕರಡು ಅಧಿಸೂಚನೆ ಪ್ರಕಟ
ಕರ್ನಾಟಕದ 20,668 ಚದರ ಕಿ.ಮೀ, ಭೂಕುಸಿತದಿಂದ ಜರ್ಜರಿತವಾಗಿರುವ ವಯನಾಡಿನ 13 ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ 56,800 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಕೇಂದ್ರ ಸರ್ಕಾರ ಇದೀಗ ಆರನೇ ಕರಡು ಅಧಿಸೂಚನೆ ಹೊರಡಿಸಿದೆ.
ವಯನಾಡಿನ 13 ಗ್ರಾಮಗಳು ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಆರು ರಾಜ್ಯಗಳ 56,800 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಕೇಂದ್ರ ಸರ್ಕಾರ, ಐದನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ವಯನಾಡ್ ಜಿಲ್ಲೆಯಲ್ಲಿ ಸರಣಿ ಭೂಕುಸಿತದಿಂದ 300 ಕ್ಕೂ ಹೆಚ್ಚು ಜನರನ್ನು ಬಲಿಯಾದ ಒಂದು ದಿನದ ನಂತರ(ಜುಲೈ 31 ರಂದು) ಅಧಿಸೂಚನೆಯನ್ನು ಹೊರಡಿಸಿದ್ದು, ಸಾರ್ವಜನಿಕರಿಂದ 60 ದಿನಗಳೊಳಗೆ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ವಯನಾಡಿನ ಎರಡು ತಾಲೂಕುಗಳ 13 ಗ್ರಾಮ ಸೇರಿದಂತೆ ಕೇರಳದ 9,993.7 ಚ.ಕಿ.ಮೀ, ಗುಜರಾತಿನ 449 ಚ.ಕಿ.ಮೀ, ಮಹಾರಾಷ್ಟ್ರದ 17,340 ಚ.ಕಿ.ಮೀ, ಗೋವಾದ 1,461 ಚ.ಕಿ.ಮೀ, ಕರ್ನಾಟಕದ 20,668 ಚ.ಕಿ.ಮೀ ಹಾಗೂ ತಮಿಳುನಾಡಿನ 6,914 ಚ.ಕಿ.ಮೀ ಪ್ರಸ್ತಾವಿತ ಇಎಸ್‌ಎಯಲ್ಲಿ ಸೇರಿವೆ.
ಈ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ, ಅಸ್ತಿತ್ವದಲ್ಲಿರುವ ಗಣಿಗಳನ್ನು ಅಂತಿಮ ಅಧಿಸೂಚನೆ ದಿನಾಂಕದಿಂದ ಅಥವಾ ಗುತ್ತಿಗೆಯ ಮುಕ್ತಾಯದವರೆಗೆ ಹಂತಹಂತವಾಗಿ ಮುಚ್ಚಲಾಗುವುದು. ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ನಿಷೇಧಿಸುತ್ತದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಆದರೆ, ಯಾವುದೇ ವಿಸ್ತರಣೆಗೆ ಅವಕಾಶವಿಲ್ಲ ಎಂದು ಹೇಳುತ್ತದೆ.
ಅಸ್ತಿತ್ವದಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ನವೀಕರಣ ಹೊರತುಪಡಿಸಿ, ದೊಡ್ಡ ಪ್ರಮಾಣದ ನಿರ್ಮಾಣ ಯೋಜನೆಗಳು ಮತ್ತು ಟೌನ್‌ಶಿಪ್‌ಗಳನ್ನು ಸಹ ನಿಷೇಧಿಸಲು ಪ್ರಸ್ತಾಪಿಸಲಾಗಿದೆ. 20,000 ಚದರ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ನಿರ್ಮಾಣ ಪ್ರದೇಶಗಳು, ಹೊಸ ಮತ್ತು ವಿಸ್ತರಣೆ ಟೌನ್‌ಶಿಪ್‌ಗಳು ಮತ್ತು 50 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಅಥವಾ 1,50,000 ಚದರ ಮೀಟರ್ ನಿರ್ಮಾಣ ಪ್ರದೇಶವಿರುವ ಅಭಿವೃದ್ಧಿ ಯೋಜನೆಗಳನ್ನು ನಿಷೇಧಿಸುವ ಪ್ರಸ್ತಾಪವಿದೆ.
ʻಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ವಸತಿ ಮನೆಗಳ ದುರಸ್ತಿ, ವಿಸ್ತರಣೆ ಅಥವಾ ನವೀಕರಣದ ಮೇಲೆ ಯಾವುದೇ ನಿರ್ಬಂಧವಿಲ್ಲ. ಅಸ್ತಿತ್ವದಲ್ಲಿರುವ ಆರೋಗ್ಯ ಸಂಸ್ಥೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬಹುದು. ಆಸ್ತಿ ಮಾಲೀಕತ್ವವನ್ನು ಬದಲಾಯಿಸಲು ಯಾವುದೇ ನಿರ್ಬಂಧವಿಲ್ಲʼ ಎಂದು ಹೇಳಿದೆ.
ಮಾಧವ ಗಾಡ್ಗೀಳ್ ವರದಿ
2010 ರಲ್ಲಿ ಕೇಂದ್ರವು ಪಶ್ಚಿಮ ಘಟ್ಟಗಳ ಮೇಲೆ ಜನಸಂಖ್ಯೆ ಒತ್ತಡ, ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಪ್ರಭಾವವನ್ನು ಅಧ್ಯಯನ ಮಾಡಲು ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿ ʻಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿʼಯನ್ನು ರಚಿಸಿತ್ತು.
ಸಮಿತಿ 2011ರಲ್ಲಿ ಇಡೀ ಪಶ್ಚಿಮಘಟ್ಟ ಶ್ರೇಣಿಯನ್ನು ಇಎಸ್‌ಎ ಎಂದು ಘೋಷಿಸಲು ಮತ್ತು ಅವುಗಳ ಪರಿಸರ ಸೂಕ್ಷ್ಮತೆಯನ್ನು ಆಧರಿಸಿ ಮೂರು ಪರಿಸರ ಸೂಕ್ಷ್ಮ ವಲಯ(ಇಎಸ್‌ಜಡ್)ಗಳಾಗಿ ವಿಂಗಡಿಸಲು ಶಿಫಾರಸು ಮಾಡಿತು. ವರದಿಗೆ ರಾಜ್ಯ ಸರ್ಕಾರಗಳು, ಕೈಗಾರಿಕೆಗಳು ಮತ್ತು ಸ್ಥಳೀಯ ಸಮುದಾಯದಿಂದ ಪ್ರತಿರೋಧ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ 2013 ರಲ್ಲಿ ಕೇಂದ್ರ ಸರ್ಕಾರ, ಖಗೋಳ ವಿಜ್ಞಾನಿ ಡಾ ಕೆ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ತಂಡವನ್ನು ರಚಿಸಿತ್ತು. ಈ ತಂಡ ಪಶ್ಚಿಮಘಟ್ಟ ವ್ಯಾಪ್ತಿಯ 59,940 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು.
ಆ ಬಳಿಕ, ಕೇಂದ್ರ ಸರ್ಕಾರ ಈ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತಿದ್ದು, ಈ ಮುನ್ನ ನಾಲ್ಕು ಬಾರಿ ಅಧಿಸೂಚನೆಗಳು ಹೊರಬಿದ್ದಿವೆ. ಈ ನಡುವೆ, ಅಧಿಸೂಚನೆಯ ವಿಷಯದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಹಲವು ರಾಜ್ಯಗಳು ವ್ಯಾಪಕ ವಿರೋಧ ಸೂಚಿಸಿದ ಹಿನ್ನೆಲೆಯಲ್ಲಿ ಕಳೆದ ಒಂದು ದಶಕದಿಂದ ಅಂತಿಮ ಅಧಿಸೂಚನೆ ಬಾಕಿ ಉಳಿದಿದೆ. ಇದೀಗ ಐದನೇ ಬಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪ ಮತ್ತು ಸಲಹೆಗಳನ್ನು ಆಹ್ವಾನಿಸಿದೆ.