
ಸಾಂದರ್ಭಿಕ ಚಿತ್ರ
ಡೀಪ್‌ಫೇಕ್‌ಗೆ ಸರ್ಕಾರದ ಬ್ರೇಕ್: ಎಐ -ನಿರ್ಮಿತ ಕಂಟೆಂಟ್‌ಗೆ 'ಲೇಬಲ್' ಕಡ್ಡಾಯ
ಈ ಹೊಸ ನಿಯಮಗಳ ಅಡಿಯಲ್ಲಿ, ಎಐ ನಿರ್ಮಿತ ಯಾವುದೇ ಕಂಟೆಂಟ್‌ಗೆ 'ಸಿಂಥೆಟಿಕ್' ಅಥವಾ 'ಕೃತಕ' ಎಂದು ಸ್ಪಷ್ಟವಾಗಿ ಲೇಬಲ್ ಹಾಕುವುದು ಕಡ್ಡಾಯವಾಗಲಿದ್ದು, ಫೇಸ್‌ಬುಕ್, ಯೂಟ್ಯೂಬ್‌ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಜವಾಬ್ದಾರಿಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಸೃಷ್ಟಿಯಾಗುತ್ತಿರುವ ಡೀಪ್‌ಫೇಕ್ ಆಡಿಯೋ, ವಿಡಿಯೋ ಮತ್ತು ಸುಳ್ಳು ಸುದ್ದಿಗಳ ಹಾವಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಮಹತ್ವದ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.
ಈ ಹೊಸ ನಿಯಮಗಳ ಅಡಿಯಲ್ಲಿ, ಎಐ ನಿರ್ಮಿತ ಯಾವುದೇ ಕಂಟೆಂಟ್‌ಗೆ 'ಸಿಂಥೆಟಿಕ್' ಅಥವಾ 'ಕೃತಕ' ಎಂದು ಸ್ಪಷ್ಟವಾಗಿ ಲೇಬಲ್ ಹಾಕುವುದು ಕಡ್ಡಾಯವಾಗಲಿದ್ದು, ಫೇಸ್‌ಬುಕ್, ಯೂಟ್ಯೂಬ್‌ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಜವಾಬ್ದಾರಿಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಇತ್ತೀಚೆಗೆ ಪ್ರಸಿದ್ಧ ವ್ಯಕ್ತಿಗಳ ನಕಲಿ ವಿಡಿಯೋಗಳು, ಸುಳ್ಳು ಸುದ್ದಿ ಮತ್ತು ಆರ್ಥಿಕ ವಂಚನೆಯಂತಹ ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಸಚಿವಾಲಯ, "ಉತ್ಪಾದಕ ಎಐ ತಂತ್ರಜ್ಞಾನವು ಅತ್ಯಂತ ನಂಬಲರ್ಹವಾದ ಸುಳ್ಳುಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಇಂತಹ ವಿಷಯಗಳನ್ನು ಸುಳ್ಳು ಮಾಹಿತಿ ಹರಡಲು, ವ್ಯಕ್ತಿಗಳ ತೇಜೋವಧೆ ಮಾಡಲು, ಚುನಾವಣೆಗಳ ಮೇಲೆ ಪ್ರಭಾವ ಬೀರಲು ಅಥವಾ ಆರ್ಥಿಕ ವಂಚನೆಗಾಗಿ ಬಳಸಬಹುದು," ಎಂದು ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, ಕೃತಕವಾಗಿ ರಚಿಸಲಾದ ಮಾಹಿತಿಗೆ ಸಂಬಂಧಿಸಿದಂತೆ ಲೇಬಲಿಂಗ್, ಪತ್ತೆಹಚ್ಚುವಿಕೆ ಮತ್ತು ಹೊಣೆಗಾರಿಕೆಗೆ ಸ್ಪಷ್ಟ ಕಾನೂನು ಚೌಕಟ್ಟನ್ನು ಸ್ಥಾಪಿಸಲು ಈ ತಿದ್ದುಪಡಿಗಳನ್ನು ತರಲಾಗುತ್ತಿದೆ.
ಹೊಸ ನಿಯಮ ಏನು ಹೇಳುತ್ತದೆ?
ಹೊಸ ನಿಯಮಗಳ ಪ್ರಕಾರ, ಎಐ ನಿರ್ಮಿತ ಯಾವುದೇ ದೃಶ್ಯ ಅಥವಾ ಚಿತ್ರದ ಮೇಲೆ, ಅದರ ಒಟ್ಟು ಭಾಗದ ಕನಿಷ್ಠ 10% ರಷ್ಟು ಪ್ರದೇಶದಲ್ಲಿ 'ಕೃತಕ' ಎಂದು ಸ್ಪಷ್ಟವಾಗಿ ಕಾಣುವ ಲೇಬಲ್ ಇರಬೇಕು. ಆಡಿಯೋ ಕ್ಲಿಪ್‌ಗಳ ಸಂದರ್ಭದಲ್ಲಿ, ಮೊದಲ 10% ಅವಧಿಯಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಕಂಟೆಂಟ್ ಅಪ್‌ಲೋಡ್ ಮಾಡುವಾಗ, ಅದು ಎಐನಿಂದ ರಚಿಸಲಾಗಿದೆಯೇ ಎಂದು ಬಳಕೆದಾರರು ಘೋಷಿಸಬೇಕು. ಬಳಕೆದಾರರ ಈ ಪ್ರಕಟಣೆ ಪರಿಶೀಲಿಸಲು ಫೇಸ್‌ಬುಕ್, ಯೂಟ್ಯೂಬ್‌ನಂತಹ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವೇದಿಕೆಗಳು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ 'ಸುರಕ್ಷಿತ' (safe harbour) ಭರವಸೆ ಕಳೆದುಕೊಳ್ಳಲಿವೆ. ಅಂದರೆ, ಆಕ್ಷೇಪಾರ್ಹ ವಿಷಯಗಳಿಗೆ ನೇರವಾಗಿ ಅವರೇ ಜವಾಬ್ದಾರರಾಗುತ್ತಾರೆ.
"ಯಾವುದು ನಿಜ, ಯಾವುದು ಸುಳ್ಳು ಎಂದು ಬಳಕೆದಾರರಿಗೆ ತಿಳಿಯುವುದು ಬಹಳ ಮುಖ್ಯ. ಈ ಕ್ರಮಗಳು ಸಮಾಜಕ್ಕೆ ಹಾನಿ ಮಾಡುವ ಡೀಪ್‌ಫೇಕ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ," ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಫೇಸ್‌ಬುಕ್, ವಾಟ್ಸ್ಆ್ಯಪ್ ಮತ್ತು ಓಪನ್‌ಎಐನಂತಹ ಜಾಗತಿಕ ಕಂಪನಿಗಳಿಗೆ ಭಾರತವು ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಸದ್ಗುರು ಅವರ ನಕಲಿ ಬಂಧನದ ಜಾಹೀರಾತು, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಡೀಪ್‌ಫೇಕ್ ವಿಡಿಯೋಗಳಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ನವೆಂಬರ್ 6, 2025ರವರೆಗೆ ಈ ಕರಡು ತಿದ್ದುಪಡಿಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಈ ನಿಯಮಗಳು ಅಂತಿಮಗೊಂಡ ನಂತರ, ಭಾರತದಲ್ಲಿ ಡಿಜಿಟಲ್ ಜಗತ್ತಿನ ಪಾರದರ್ಶಕತೆ ಮತ್ತು ಸುರಕ್ಷತೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.