ಸೈಬರ್ ಅಪರಾಧ | 4.5 ಲಕ್ಷ 'ನಕಲಿʼ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸಿದ ಸರ್ಕಾರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳು ಪತ್ತೆಯಾಗಿವೆ.
ಕೇಂದ್ರ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಸೈಬರ್ ಅಪರಾಧಗಳಿಂದ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಬಳಸಲಾಗುತ್ತಿದ್ದ ಸುಮಾರು 4.5 ಲಕ್ಷ ನಕಲಿಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಖಾತೆಗಳು ಪತ್ತೆಯಾಗಿವೆ. ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರ (I4C) ಇತ್ತೀಚೆಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಈ ಮಾಹಿತಿ ನೀಡಿತ್ತು.
ವಂಚಕರಿಂದ ಸೃಷ್ಟಿ
ವಂಚಕರು ಚೆಕ್‌ಗಳು, ಎಟಿಎಂಗಳು ಮತ್ತು ಬೇರೆ ವ್ಯಕ್ತಿಯ ಕೆವೈಸಿ ದಾಖಲೆಗಳೊಂದಿಗೆ ಖಾತೆಗಳನ್ನು ರಚಿಸುತ್ತಿದ್ದರು. ಆ ಖಾತೆಗಳಿಂದ ಡಿಜಿಟಲ್ ಮಾರ್ಗದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ಪ್ರಕಾರ, ಎಸ್‌ಬಿಐನಲ್ಲಿ ಸುಮಾರು 40,000 ನಕಲಿ ಬ್ಯಾಂಕ್ ಖಾತೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸುಮಾರು 10,000, ಕೆನರಾ ಬ್ಯಾಂಕ್‌ನಲ್ಲಿ ಸುಮಾರು 7,000, ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 6,000 ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಕೆಲವು 5,000 ಖಾತೆಗಳು ಪತ್ತೆಯಾಗಿವೆ.
"ಜನವರಿ 2023 ರಿಂದ ಸುಮಾರು 1 ಲಕ್ಷ ಸೈಬರ್ ದೂರುಗಳು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದಾಖಲಾಗಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು ₹ 17,000 ಕೋಟಿ ರೂಪಾಯಿ ವಂಚನೆಯಾಗಿದೆ" ಎಂದು ಮೂಲಗಳು ತಿಳಿಸಿವೆ.
ಲೋಪದೋಷಗಳು ಪತ್ತೆ
ಅಂತರ ಸಚಿವಾಲಯದ ಸಮಿತಿಯು ಲೋಪದೋಷಗಳನ್ನು ಗುರುತಿಸಿದೆ ಮತ್ತು ಅಂತಹ ಖಾತೆಗಳ ವಿರುದ್ಧ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೊಲೀಸ್ ಪಡೆಗಳಿಗೆ ತಿಳಿಸಿದೆ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಇಂತಹ ನಕಲಿ ಖಾತೆ ತೆರೆಯುವಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.