ಗೂಗಲ್‌ ಎಐ ಹಬ್‌| ಸುಂದರ್‌ ಪಿಚೈ ತಮಿಳುನಾಡಿನವರು, ಅವರ ಆಯ್ಕೆ ಮಾತ್ರ ಭಾರತ; ನಾರಾ ಲೋಕೇಶ್
x

ಗೂಗಲ್‌ ಎಐ ಹಬ್‌| ಸುಂದರ್‌ ಪಿಚೈ ತಮಿಳುನಾಡಿನವರು, ಅವರ ಆಯ್ಕೆ ಮಾತ್ರ ಭಾರತ; ನಾರಾ ಲೋಕೇಶ್

ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ನಮ್ಮ ನೆಲದ ಮಗ. ಸರ್ಕಾರವು ಸಮಯಕ್ಕೆ ಮುಂಚಿತವಾಗಿ ಸಂಪರ್ಕಿಸಿದ್ದರೆ ಈ ಹೂಡಿಕೆ ತಮಿಳುನಾಡಿಗೆ ಬಂದಿರುತ್ತಿತ್ತು ಎಂದು ಎಐಎಡಿಎಂಕೆ ಉಪ ನಾಯಕ ಮತ್ತು ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಹೇಳಿದ್ದಾರೆ.


ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗೂಗಲ್ ಸಂಸ್ಥೆ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದು ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ.

ಗೂಗಲ್‌ ಸಿಇಒ ಆಗಿರುವ ಸುಂದರ್‌ ಪಿಚೈ ಅವರು ತಮಿಳುನಾಡಿನ ಮಧುರೈ ಮೂಲದವರಾದರೂ ಗೂಗಲ್ ಸಂಸ್ಥೆಯ ಹೂಡಿಕೆಯನ್ನು ರಾಜ್ಯದತ್ತ ಸೆಳೆಯುವಲ್ಲಿ ತಮಿಳುನಾಡು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ಎಐಎಡಿಎಂಕೆ ಆರೋಪಿಸಿದೆ. ಗೂಗಲ್‌ ಎಐ ಹಬ್‌ ಆಂಧ್ರ ಪಾಲಾಗಿರುವ ವಿಚಾರ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಸಂಘರ್ಷ ಸೃಷ್ಟಿಸಿದೆ.

ಡಿಎಂಕೆ ವಿರುದ್ಧ ಟೀಕೆ

ಅ.21ರಂದು ತಮಿಳುನಾಡು ಸರ್ಕಾರದ ನಿರ್ಲಕ್ಷ್ಯವನ್ನು ಎಐಎಡಿಎಂಕೆ ಟೀಕಿಸಿತ್ತು. ಸುಂದರ್‌ ಪಿಚೈ ಅವರು ನಮ್ಮ ನೆಲದ ಮಗನಾಗಿದ್ದರೂ ರಾಜ್ಯಕ್ಕೆ ಹೂಡಿಕೆ ಬಂದಿಲ್ಲ ಎಂದು ವ್ಯಂಗ್ಯವಾಡಿತ್ತು. ಇದೇ ವೇಳೆ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಸುಂದರ್‌ ಪಿಚೈ ತಮಿಳುನಾಡಿನವರಾದರೂ ಅವರು ಭಾರತವನ್ನು ಆಯ್ದುಕೊಂಡಿದ್ದಾರೆ ಎಂದು ಹೇಳಿ ತಮಿಳುನಾಡಿನ ರಾಜಕೀಯ ಚರ್ಚೆಗೆ ಮತ್ತಷ್ಟು ಕಿಡಿ ಹೊತ್ತಿಸಿದ್ದಾರೆ.

ಟಿಡಿಪಿ ಪಕ್ಷವು ಕೇಂದ್ರದ ಎನ್‌ಡಿಎ ಮೈತ್ರಿಯ ಭಾಗವಾಗಿದೆ. ಡಿಎಂಕೆ ಪಕ್ಷವು ವಿರೋಧ ಪಕ್ಷಗಳ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ. ನಾರಾ ಲೋಕೇಶ್ ಇತ್ತೀಚೆಗೆ ನೆರೆಯ ರಾಜ್ಯಗಳನ್ನು ಹೋಲಿಕೆ ಮಾಡುತ್ತಾ ಟೀಕಿಸುತ್ತಿದ್ದಾರೆ. ಗೂಗಲ್ ಹೂಡಿಕೆ ದೃಢಪಟ್ಟ ಬಳಿಕ ಅವರು, ಆಂಧ್ರದ ಊಟ ಉಪ್ಪುಕರಿ ಎಂದು ಹೇಳುತ್ತಾರೆ. ಈಗ ನಮ್ಮ ಹೂಡಿಕೆಗಳು ಕೂಡಾ ಹಾಗೆಯೇ ಉರಿ ಕೊಡುತ್ತಿವೆ. ನಮ್ಮ ನೆರೆಮಕ್ಕಳು ಈಗಾಗಲೇ ಬೆಂದುಕೊಂಡಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.

ಇದಕ್ಕೂ ಮುನ್ನ ನಾರಾ ಲೋಕೇಶ್‌ ಅವರು, ಕರ್ನಾಟಕದ ಹೂಡಿಕೆದಾರರನ್ನು ಆಂಧ್ರಕ್ಕೆ ಆಹ್ವಾನಿಸಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ತಿರುಗೇಟು ನೀಡಿದ್ದರು.

ಎಐಎಡಿಎಂಕೆ ನಾಯಕರ ಅಸಮಾಧಾನ

ಎಐಎಡಿಎಂಕೆ ಉಪನಾಯಕ ಮತ್ತು ಮಾಜಿ ಸಚಿವ ಆರ್.ಬಿ. ಉದಯಕುಮಾರ್, “ಡಿಎಂಕೆ ಸರ್ಕಾರ ಗೂಗಲ್ ಸಂಸ್ಥೆಯ ಸಿಇಒ ಸುಂದರ್‌ ಪಿಚೈ ಅವರನ್ನು ಸಂಪರ್ಕಿಸಿ ಆಹ್ವಾನ ನೀಡಬೇಕಾಗಿತ್ತು. ಆಗ ಈ ಹೂಡಿಕೆ ತಮಿಳುನಾಡಿಗೆ ಬಂದಿರುತ್ತಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ದೊಡ್ಡ ಅವಕಾಶ ಕಳೆದುಹೋಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ವಿರುದ್ಧವೂ ಟೀಕೆ ಮಾಡಿ, “ಪ್ರತಿ ಬಾರಿ ಹೂಡಿಕೆಗಳ ಕುರಿತು ವೈಟ್ ಪೇಪರ್ ಕೇಳಿದಾಗ ಅವರು ಖಾಲಿ ಕಾಗದ ತೋರಿಸಿ, ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಮಾತಾಡುತ್ತಾರೆ” ಎಂದು ಟೀಕಿಸಿದ್ದಾರೆ.

ʻನೆಲದ ಮಗ’ ಪಿಚೈ ಮತ್ತು ಕಳೆದುಹೋದ ಅವಕಾಶ

“ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ನಮ್ಮ ನೆಲದ ಮಗ. ಸರ್ಕಾರವು ಸಮಯಕ್ಕೆ ಮುಂಚಿತವಾಗಿ ಸಂಪರ್ಕಿಸಿದ್ದರೆ ಈ ಹೂಡಿಕೆ ತಮಿಳುನಾಡಿಗೆ ಬಂದಿರುತ್ತಿತ್ತು. ಆಂಧ್ರಪ್ರದೇಶ ಸರ್ಕಾರವು ವರ್ಷಕ್ಕೆ 10,000 ಕೋಟಿ ರೂ. ಆದಾಯ ಪಡೆಯಲಿದೆ ಹಾಗೂ 6,000 ನೇರ ಮತ್ತು 30,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ.

ಆಂಧ್ರದ 4P ತಂತ್ರ

ಚಂದ್ರಬಾಬು ನಾಯ್ಡು ಸರ್ಕಾರವು ಪೀಪಲ್‌, ಪಬ್ಲಿಕ್‌,ಪ್ರೈವೇಟ್‌, ಪಾರ್ಟನರ್‌ಶಿಪ್‌ (People, Public, Private, Partnership ) (4P) ತಂತ್ರದ ಮೂಲಕ ಈ ಹೂಡಿಕೆ ಗಳಿಸಿದೆ. ಇದೇ ತಂತ್ರದಿಂದ ವಿಶಾಖಪಟ್ಟಣವು ಮುಂದಿನ ಹೂಡಿಕೆ ಕೇಂದ್ರವಾಗಲಿದೆ. ತಮಿಳುನಾಡು ಈಗಾದರೂ ಹೊಸ ಹೂಡಿಕೆಗಳತ್ತ ಚುರುಕುಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಗೂಗಲ್‌ನ ಮೇಗಾ ಯೋಜನೆ

ಅ.14ರಂದು ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಪ್ರಕಟಿಸಿದ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತದೆ. ಅದರಲ್ಲಿ ಅದಾನಿ ಗ್ರೂಪ್ ಜೊತೆಗೆ ವಿಶಾಖಪಟ್ಟಣದಲ್ಲಿ ಸ್ಥಾಪಿಸಬಹುದಾದ ದೇಶದ ಅತಿ ದೊಡ್ಡ ಡೇಟಾ ಸೆಂಟರ್ ಮತ್ತು AI ಹಬ್ ಪ್ರಮುಖವಾಗಿದೆ. ಅಮೆರಿಕ ಹೊರತುಪಡಿಸಿ ಗೂಗಲ್‌ನ ಅತಿ ದೊಡ್ಡ AI ಕೇಂದ್ರವಾಗಲಿರುವ ಈ ಯೋಜನೆಗೆ 1 ಗಿಗಾವಾಟ್ ಶಕ್ತಿ ಸಾಮರ್ಥ್ಯದ ಡೇಟಾ ಕ್ಯಾಂಪಸ್, ಹೊಸ ಶಕ್ತಿ ಮೂಲಗಳು ಹಾಗೂ ವಿಸ್ತೃತ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಸೇರಿವೆ.

Read More
Next Story