
ಕಬ್ಬು ಕಠಾವು ಮಾಡುತ್ತಿರುವ ರೈತರು.
Sugarcane Farmers: ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ, ಕೇಂದ್ರದಿಂದ ಪ್ರೋತ್ಸಾಹ ದರ ಹೆಚ್ಚಳ
Sugarcane Farmers: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ ದರವನ್ನು 15 ರೂಪಾಯಿ ಏರಿಕೆ ಮಾಡಿದ್ದು, ಪ್ರಸ್ತುತ 355 ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು. ಸಕ್ಕರೆ ಕಾರ್ಖಾನೆಗಳು ಕ್ವಿಂಟಾಲ್‌ಗೆ ನೀಡುವ ನ್ಯಾಯಸಮ್ಮತ ಹಾಗೂ ಪ್ರೋತ್ಸಾಹಕ ದರ (ಎಫ್‌ಆರ್‌ಪಿ) ದರವನ್ನು 15 ರೂಪಾಯಿ ಏರಿಕೆ ಮಾಡಿದೆ. 2025-2026ನೇ ಸಾಲಿನಲ್ಲಿ ಕಾರ್ಖಾನೆಗಳು ರೈತರಿಗೆ 355 ರೂಪಾಯಿ ಪಾವತಿಸಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಭೆಯಲ್ಲಿ ಎಫ್‌ಆರ್‌ಪಿ ದರವನ್ನು 15 ರೂಪಾಯಿ ಏರಿಕೆ ಮಾಡಲಾಗಿದೆ. 2024-2025ನೇ ಸಾಲಿನಲ್ಲಿ 340 ರೂಪಾಯಿ ದರ ನಿಗದಿಯಾಗಿತ್ತು. ಮುಂದಿನ ಹಂಗಾಮಿಗೆ 355ಕ್ಕೆ ರೈತರಿಗೆ ಪಾವತಿಸಬೇಕಾಗಿದೆ ದೇಶಾದ್ಯಂತ ಐದು ಕೋಟಿ ಕಬ್ಬು ಬೆಳೆಗಾರರು ಹಾಗೂ ಅವರ ಅವಲಂಬಿತರಿಗೆ ಇದರಿಂದ ಅನುಕೂಲವಾಗಲಿದೆ.
ಕರ್ನಾಟಕದಲ್ಲಿ ಕಬ್ಬು ಉತ್ಪಾದನೆ
ಕಬ್ಬು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲಿ 4ನೇ ಸ್ಥಾನ ಹೊಂದಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮೊದಲ ಮೂರು ಸ್ಥಾನಗಳಲ್ಲಿ. ಕರ್ನಾಟಕ ಸೇರಿದಂತೆ ಮೊದಲ ನಾಲ್ಕು ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 80ರಷ್ಟು ಪಾಲು ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು ಹದಿನಾರು ಜಿಲ್ಲೆಗಳಲ್ಲಿ ಕಬ್ಬು ಬೆಳೆಯಲಾಗುತ್ತದೆ ಹಾಗೂ 4.75 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮಂಡ್ಯ, ಮೈಸೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ.
ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು
ರಾಜ್ಯದಲ್ಲಿ 77 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳ ಪೈಕಿ ಬೆಳಗಾವಿಯಲ್ಲಿ 26, ಬಾಗಲಕೋಟೆಯಲ್ಲಿ 16 ಹಾಗೂ ವಿಜಯಪುರದಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳಿವೆ. ವಿವಿಧ ಜಿಲ್ಲೆಗಳಲ್ಲಿರುವ ನಿರಾಣಿ ಸಮೂಹದ ಸಕ್ಕರೆ ಕಾರ್ಖಾನೆಗಳು ಅತಿ ಹೆಚ್ಚು ಕಬ್ಬು ಅರೆಯುವ ಮೂಲಕ ದಾಖಲೆ ಬರೆದಿವೆ.
ವಿಶ್ವದಲ್ಲಿ ಭಾರತದ ಸ್ಥಾನ
ವಿಶ್ವದಲ್ಲಿ ಬ್ರೆಜಿಲ್ ನಂತರ ಹೆಚ್ಚು ಕಬ್ಬು ಉತ್ಪಾದಿಸುವ ರಾಷ್ಟ್ರ ಭಾರತ. ಜಾಗತಿಕವಾಗಿ ಒಟ್ಟು 110 ರಾಷ್ಟ್ರಗಳು ಕಬ್ಬು ಉತ್ಪಾದಿಸುತ್ತಿದ್ದು ಬ್ರೆಜಿಲ್, ಭಾರತ ಹಾಗೂ ಥಾಯ್ಲೆಂಡ್ ಕಬ್ಬು ರಪ್ತು ಮಾಡುವ ಅಗ್ರ ರಾಷ್ಟ್ರಗಳಾಗಿವೆ. ವಿಶ್ವದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಭಾರತ ಶೇ.15ರಷ್ಟು ಪಾಲು ಪಡೆದಿದೆ.
ಕಬ್ಬು ಬಿಲ್ ಪಾವತಿ ಬಾಕಿ
ರಾಜ್ಯದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು ಕಳೆದ ಜನವರಿ ವೇಳೆಗೆ ಕಬ್ಬು ಕಾರ್ಖಾನೆಗಳು 2.86 ಕೋಟಿ ಟನ್ ಕಬ್ಬು ರುಬ್ಬಿದ್ದು, 22.23 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಕಬ್ಬು ಪೂರೈಸಿದ ರೈತರಿಗೆ ಒಟ್ಟು 9983 ಕೋಟಿ ರೂಪಾಯಿ ಪಾವತಿಸಬೇಕಿದ್ದು, ಪ್ರಸ್ತುತ 5,502 ಕೋಟಿ ರೂಪಾಯಿ ನೀಡಿದ್ದು ಇನ್ನೂ 4,483 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಿದೆ.