ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ.2 ಹೆಚ್ಚಳ
x

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ.2 ಹೆಚ್ಚಳ

ತುಟ್ಟಿಭತ್ಯೆ ಎನ್ನುವುದು ಸರ್ಕಾರಿ ನೌಕರರಿಗೆ ಏರುತ್ತಿರುವ ಹಣದುಬ್ಬರವನ್ನು ಎದುರಿಸಲು ನೀಡಲಾಗುವ ಒಂದು ಭತ್ಯೆಯಾಗಿದೆ. ಇದು ಜೀವನ ವೆಚ್ಚದ ಹೆಚ್ಚಳದಿಂದಾಗಿ ವೇತನದ ಮೌಲ್ಯ ಕಡಿಮೆಯಾಗದಂತೆ ರಕ್ಷಿಸುವ ಉದ್ದೇಶ ಹೊಂದಿದೆ.


ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಯರ್‌ನೆಸ್ ಅಲೋವೆನ್ಸ್ ) ಯನ್ನು ಶೇಕಡಾ 2 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ಎಕನಾಮಿಕ್ ಟೈಮ್ಸ್‌ ವರದಿ ಮಾಡಿದೆ. ಈ ಪರಿಷ್ಕರಣೆಯೊಂದಿಗೆ, ತುಟ್ಟಿ ಭತ್ಯೆ ಶೇಕಡಾ 53 ರಿಂದ ಶೇಕಡಾ 55 ಕ್ಕೆ ಏರಿಕೆಯಾಗಲಿದ್ದು, ನೌಕರರು ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಜುಲೈ 2024 ರಲ್ಲಿ ಕೊನೆಯ ಬಾರಿಗೆ ತುಟ್ಟಿಭತ್ಯೆ ಹೆಚ್ಚಳವಾಗಿತ್ತು. ಆಗ ಅದು ಶೇಕಡಾ 50 ರಿಂದ ಶೇಕಡಾ 53 ಕ್ಕೆ ಏರಿಸಲಾಗಿತ್ತು.

ತುಟ್ಟಿಭತ್ಯೆ (ಡಿಯರೆನ್ಸ್ ಅಲೋಯೆನ್ಸ್​) ಎಂದರೇನು?

ತುಟ್ಟಿಭತ್ಯೆ ಎನ್ನುವುದು ಸರ್ಕಾರಿ ನೌಕರರಿಗೆ ಏರುತ್ತಿರುವ ಹಣದುಬ್ಬರವನ್ನು ಎದುರಿಸಲು ನೀಡಲಾಗುವ ಒಂದು ಭತ್ಯೆಯಾಗಿದೆ. ಇದು ಜೀವನ ವೆಚ್ಚದ ಹೆಚ್ಚಳದಿಂದಾಗಿ ವೇತನದ ಮೌಲ್ಯ ಕಡಿಮೆಯಾಗದಂತೆ ರಕ್ಷಿಸುವ ಉದ್ದೇಶ ಹೊಂದಿದೆ. ಮೂಲ ವೇತನವನ್ನು ಪೇ ಕಮಿಷನ್ ಪ್ರತಿ 10 ವರ್ಷಗಳಿಗೊಮ್ಮೆ ನಿಗದಿಪಡಿಸಿದರೆ, ತುಟ್ಟಿಭತ್ಯೆಯನ್ನು ಹಣದುಬ್ಬರಕ್ಕೆ ತಕ್ಕಂತೆ ಕಾಲಕಾಲಕ್ಕೆ ಸರಿಹೊಂದಿಸಲಾಗುತ್ತದೆ.

ಯಾರಿಗೆ ಲಾಭ?

ಡಿಎ ಹೆಚ್ಚಳ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಈ ಹಿಂದೆ, ಹೋಳಿ ಹಬ್ಬದ ಮುಂಚೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಹಲವು ಮಾಧ್ಯಮ ವರದಿಗಳ ಪ್ರಕಾರ, ಶೇಕಡಾ 2 ರಷ್ಟು ಹೆಚ್ಚಳದ ನಿರೀಕ್ಷೆ ಇತ್ತು. ಈ ಹೆಚ್ಚಳವು ಹಣದುಬ್ಬರದ ಒತ್ತಡ ಎದುರಿಸಲು ಸಹಾಯ ಮಾಡುವ ಜೊತೆಗೆ ಅವರ ಮಾಸಿಕ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆ ಮತ್ತು ಪರಿಹಾರ ಒದಗಿಸುತ್ತದೆ.

ಡಿಎ ಹೇಗೆ ನಿರ್ಧರಿಸಲಾಗುತ್ತದೆ?

ತುಟ್ಟಿಭತ್ಯೆ ದರವನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-IW - ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಫಾರ್ ಇಂಡಸ್ಟ್ರಿಯಲ್ ವರ್ಕರ್ಸ್) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸರ್ಕಾರವು ಕಳೆದ ಆರು ತಿಂಗಳ ಡೇಟಾವನ್ನು ಪರಿಶೀಲಿಸಿ ಪರಿಷ್ಕರಣೆ ನಿರ್ಧಾರ ತೆಗೆದುಕೊಳ್ಳುತ್ತದೆ.

ಡಿಎ ಹೆಚ್ಚಳದ ಅಂತಿಮ ತೀರ್ಮಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯ ನಂತರ ತೆಗೆದುಕೊಳ್ಳಲಾಗಿದೆ.

Read More
Next Story