ಗೋಕರ್ಣ ಗುಹೆ ಪ್ರಕರಣ: ಮಕ್ಕಳ ತಂದೆ ಎಂದ ಇಸ್ರೇಲಿ ಪ್ರಜೆಗೇ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
x

ಗೋಕರ್ಣ ಗುಹೆ ಪ್ರಕರಣ: ಮಕ್ಕಳ ತಂದೆ ಎಂದ ಇಸ್ರೇಲಿ ಪ್ರಜೆಗೇ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡ್ರೋರ್ ಶಲೋಮ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿದಾರನ ಉದ್ದೇಶ ಮತ್ತು ಆದಾಯದ ಮೂಲವನ್ನು ಕಟುವಾಗಿ ಪ್ರಶ್ನಿಸಿತು.


ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯೊಂದರಲ್ಲಿ ಪತ್ತೆಯಾಗಿದ್ದ ರಷ್ಯಾದ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳನ್ನು ಗಡೀಪಾರು ಮಾಡುವುದನ್ನು ತಡೆಯಲು ಕೋರಿ, ಮಕ್ಕಳ ತಂದೆ ತಾನೆಂದು ಹೇಳಿಕೊಂಡಿದ್ದ ಇಸ್ರೇಲಿ ಪ್ರಜೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿದಾರನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ನ್ಯಾಯಾಲಯ, "ನೀವು ಇಸ್ರೇಲಿ ಪ್ರಜೆ, ಭಾರತದಲ್ಲಿ ನಿಮಗೇನು ಕೆಲಸ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

2025ರ ಜುಲೈ ತಿಂಗಳಲ್ಲಿ ಗೋಕರ್ಣ ಸಮೀಪದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ರಷ್ಯಾ ಮೂಲದ ಮಹಿಳೆಯೊಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಯಾವುದೇ ಅಧಿಕೃತ ಪ್ರಯಾಣ ದಾಖಲೆಗಳಿಲ್ಲದೆ ವಾಸಿಸುತ್ತಿರುವುದು ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿ, ತುಮಕೂರಿನಲ್ಲಿರುವ ವಿದೇಶಿಯರ ನಿರ್ಬಂಧ ಕೇಂದ್ರದಲ್ಲಿ ಇರಿಸಿದ್ದರು. ಬಳಿಕ, ತಾಯಿ ಮತ್ತು ಮಕ್ಕಳು ತಮ್ಮ ದೇಶಕ್ಕೆ ಮರಳಲು ಅನುಕೂಲವಾಗುವಂತೆ ರಷ್ಯಾದ ರಾಯಭಾರ ಕಚೇರಿಯು ತುರ್ತು ಪ್ರಯಾಣ ದಾಖಲೆಗಳನ್ನು ಒದಗಿಸಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಇಸ್ರೇಲಿ ಪ್ರಜೆ

ಈ ಹಂತದಲ್ಲಿ, ಗೋವಾದಲ್ಲಿ ವಾಸಿಸುತ್ತಿದ್ದ ಡ್ರೋರ್ ಶಲೋಮ್ ಗೋಲ್ಡ್‌ಸ್ಟೈನ್ಸ್ ಎಂಬ ಇಸ್ರೇಲಿ ಪ್ರಜೆ, ತಾನು ಮಕ್ಕಳ ಒಬ್ಬಳ ತಂದೆ ಎಂದು ಹೇಳಿಕೊಂಡು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ತಾಯಿ ಮತ್ತು ಮಕ್ಕಳನ್ನು ಗಡೀಪಾರು ಮಾಡುವುದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಅವರು ವಾದಿಸಿದ್ದರು. ಆದರೆ, "ಅರ್ಜಿದಾರನು ನಿಜವಾಗಿಯೂ ಕುಟುಂಬವನ್ನು ಪೋಷಿಸುತ್ತಿದ್ದರೆ, ಅವರು ಗುಹೆಯಲ್ಲಿ ಏಕೆ ವಾಸಿಸುತ್ತಿದ್ದರು?" ಎಂದು ಪ್ರಶ್ನಿಸಿದ್ದ ಹೈಕೋರ್ಟ್, ಮಹಿಳೆಯು ಸ್ವತಃ ರಷ್ಯಾಕ್ಕೆ ಮರಳಲು ಇಚ್ಛಿಸಿರುವುದನ್ನು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಿತ್ತು.

ಸುಪ್ರೀಂ ಕೋರ್ಟ್ ತರಾಟೆ

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡ್ರೋರ್ ಶಲೋಮ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿದಾರನ ಉದ್ದೇಶ ಮತ್ತು ಆದಾಯದ ಮೂಲವನ್ನು ಕಟುವಾಗಿ ಪ್ರಶ್ನಿಸಿತು. ನೀವು ಇಸ್ರೇಲಿ ಪ್ರಜೆ. ಭಾರತದಲ್ಲಿ ನಿಮಗೇನು ಕೆಲಸ? ನೀವು ನೇಪಾಳಕ್ಕೆ ಹೋಗಿ ವೀಸಾ ನವೀಕರಿಸಿಕೊಂಡು ಮತ್ತೆ ಗೋವಾಕ್ಕೆ ಬರುತ್ತೀರಿ. ಅಲ್ಲಿ ನೀವೇನು ಮಾಡುತ್ತಿದ್ದೀರಿ? ನಿಮ್ಮ ಆದಾಯದ ಮೂಲ ಯಾವುದು?"

ಮಕ್ಕಳು ಗುಹೆಯಲ್ಲಿ ವಾಸಿಸುತ್ತಿದ್ದಾಗ ಅರ್ಜಿದಾರ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ನ್ಯಾಯಾಲಯ, ಆತ ಕುಟುಂಬವನ್ನು ಪೋಷಿಸುತ್ತಿದ್ದ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿತು. ಇದು ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಇರಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅರ್ಜಿದಾರನನ್ನು ಇಸ್ರೇಲ್‌ಗೆ ಏಕೆ ಗಡಿಪಾರು ಮಾಡಬಾರದು ಎಂದೂ ಪ್ರಶ್ನಿಸಿತು. ಕೊನೆಗೆ, ಅರ್ಜಿದಾರರ ವಕೀಲರ ಕೋರಿಕೆಯ ಮೇರೆಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಲಾಯಿತು. ವಿಚಾರಣೆ ವೇಳೆ, ನ್ಯಾಯಮೂರ್ತಿ ಸೂರ್ಯಕಾಂತ್, "ಈ ದೇಶವು ಎಲ್ಲರಿಗೂ ಆಶ್ರಯತಾಣವಾಗುತ್ತಿದೆ, ಯಾರು ಬಂದರೂ ಇಲ್ಲೇ ನೆಲೆಸಲು ಬಯಸುತ್ತಾರೆ," ಎಂದು ಮಾರ್ಮಿಕವಾಗಿ ನುಡಿದರು.

Read More
Next Story