
ಗೋವಾ ನೈಟ್ ಕ್ಲಬ್ ದುರಂತ; ಪ್ರಮುಖ ಆರೋಪಿಗಳಾದ ಲುತ್ರಾ ಬ್ರದರ್ಸ್ ಅರೆಸ್ಟ್
ಬರೋಬ್ಬರಿ 25ಜನರನ್ನು ಬಲಿ ಪಡೆದ ಗೋವಾಸ್ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಅವರನ್ನು ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ
ಕಳೆದ ವಾರ ಗೋವಾದ ನೈಟ್ ಕ್ಲಬ್‌ನಲ್ಲಿ ನಡೆದ ಭಾರೀ ಬೆಂಕಿ ಅವಘಡದ ಪ್ರಮುಖ ಆರೋಪಿಗಳಾದ ಲುತ್ರಾ ಸಹೋದರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 25ಜನರನ್ನು ಬಲಿ ಪಡೆದ ಗೋವಾಸ್ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಅವರನ್ನು ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದುರ್ಘಟನೆ ಬಳಿಕ ಇವರಿಬ್ಬರೂ ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ತೆರಳಿದ್ದರು. ಮೂಲಗಳ ಪ್ರಕಾರ, ಗೋವಾ ಪೊಲೀಸ್ ತಂಡವು ಶೀಘ್ರದಲ್ಲೇ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಗಳಿಗಾಗಿ ಭಾರತಕ್ಕೆ ಕರೆತರಲು ಥೈಲ್ಯಾಂಡ್‌ಗೆ ಪ್ರಯಾಣಿಸಲಿದೆ.
ಪಾಸ್‌ಪೋರ್ಟ್ ಕ್ಯಾನ್ಸಲ್
ಇನ್ನು ಇದಕ್ಕೂ ಮುನ್ನ ವಿದೇಶಾಂಗ ಸಚಿವಾಲಯ ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸಿತ್ತು. ಗೋವಾ ಸರ್ಕಾರವು ಲುತ್ರಾಸ್ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯವನ್ನು ಔಪಚಾರಿಕವಾಗಿ ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ. ಅವರ ವಿರುದ್ಧ ಲುಕ್-ಔಟ್ ಸುತ್ತೋಲೆ ಮತ್ತು ಇಂಟರ್‌ಪೋಲ್ ಬ್ಲೂ ನೋಟಿಸ್ ಸಹ ನೀಡಲಾಗಿದೆ.
ಡಿಸೆಂಬರ್ 7 ರಂದು ಬೆಳಿಗ್ಗೆ 1.17 ಕ್ಕೆ ಲುತ್ರಾ ಸಹೋದರರು ಥೈಲ್ಯಾಂಡ್‌ಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್ ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ಹರಡಲು ಪ್ರಾರಂಭಿಸಿದ ಕೇವಲ ಒಂದು ಗಂಟೆಯ ನಂತರ ಆರೋಪಿಗಳು ದೇಶ ಬಿಟ್ಟು ಪರಾರಿಯಾಗಿದ್ದರು.
ದೆಹಲಿ ಕೋರ್ಟ್‌ನಲ್ಲೂ ಹಿನ್ನಡೆ
ಇನ್ನು ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್ ಕೋರಿ ಲೂತ್ರಾ ಸಹೋದರರು ದೆಹಲಿ ಕೋರ್ಟ್ ಮೆಟ್ಟಿಲೇರಿದ್ದರು. ಥೈಲ್ಯಾಂಡ್ ಪ್ರವಾಸ ಮೊದಲೇ ನಿರ್ಧರಿತವಾಗಿತ್ತು. ಅದಕ್ಕೂ ಕ್ಲಬ್ ದುರಂತಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಅವರು ವಾದಿಸಿದ್ದರು. ಅಲ್ಲದೇ ಬಂಧನದಿಂದ ರಕ್ಷಣೆ ಕೋರಿದ್ದರು. ಆದರೆ ಗೋವಾ ಪೊಲೀಸರು ಈ ವಿನಂತಿಯನ್ನು ವಿರೋಧಿಸಿದರು, ಘಟನೆಯ ಕೆಲವು ಗಂಟೆಗಳಲ್ಲಿ ಸಹೋದರರು ಓಡಿಹೋದರು. ಅವರಿಗೆ ವಿದೇಶದಲ್ಲಿ ರಕ್ಷಣೆ ಪಡೆಯಲು ಅವಕಾಶ ನೀಡಬಾರದು ಎಂದು ವಾದಿಸಿದರು. ಗೋವಾ ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಅವರಿಗೆ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿತು ಮತ್ತು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
'ಸಹ-ಮಾಲೀಕ' ಕೂಡ ನಿನ್ನೆ ಅರೆಸ್ಟ್
ಬೆಂಕಿಯಿಂದ ಹಾನಿಗೊಳಗಾದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಮತ್ತೊರ್ವ ಪಾಲುದಾರ ಮತ್ತು ಹೂಡಿಕೆದಾರ ಎಂದು ಹೇಳಿಕೊಂಡ ಅಜಯ್ ಗುಪ್ತಾ ಅವರನ್ನೂ ನಿನ್ನೆ ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಿಚಾರಣೆಗಾಗಿ ದೆಹಲಿಯಿಂದ ಗೋವಾಕ್ಕೆ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆತರಲಾಗಿದೆ.
ಗೋವಾ ಪೊಲೀಸರು ಬುಧವಾರ ರಾತ್ರಿ 9.45 ಕ್ಕೆ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಪ್ತಾ ಅವರೊಂದಿಗೆ ಬಂದಿಳಿದರು. ಹೆಚ್ಚಿನ ತನಿಖೆಗಾಗಿ ಅವರನ್ನು ಅಂಜುನಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಗುಪ್ತಾ ಅವರನ್ನು ದೆಹಲಿಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರ ಮುಂದೆ ಹಾಜರುಪಡಿಸಲಾಯಿತು, ಅವರು ಗೋವಾ ಪೊಲೀಸರಿಗೆ ಅವರನ್ನು ಕರೆದೊಯ್ಯಲು 36 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ನೀಡಿದರು.
ಗೋವಾದಲ್ಲಿ ಏನಾಗಿತ್ತು?
ಉತ್ತರ ಗೋವಾದ ಅರ್ಪೋರಾದ ಬರ್ಚ್ ಬೈ ರೋಮಿಯೋ ಲೇನ್ ಪ್ರದೇಶದಲ್ಲಿರುವ ಕ್ಲಬ್ ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಡಿಜೆ ನೈಟ್ ಆಯೋಜಿಸಲಾಗಿತ್ತು. ಕಳೆದ ಶನಿವಾರ ರಾತ್ರಿ 10 ಗಂಟೆಯಿಂದಲೇ ಪಾರ್ಟಿ ಜೋರಾಗಿತ್ತು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಬಂದಿದ್ದರು. ರಾತ್ರಿ 12.30ರ ಹೊತ್ತಿಗೆ ವೇದಿಕೆ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದೆ. ಇಡೀ ಕ್ಲಬ್ ಬೆಂಕಿಗೆ ಆಹುತಿಯಾಗಿ ಒಬ್ಬ ಕನ್ನಡಿಗ ಸೇರಿದಂತೆ ಒಟ್ಟು 25 ಮಂದಿ ಸಹೀವ ದಹನಗೊಂಡಿದ್ದರು. ಮೃತರಲ್ಲಿ ನಾಲ್ವರು ಪ್ರವಾಸಿಗರಿದ್ದರು.

