Social Security Bill for Gig Workers Passed
x

ಸಾಂದರ್ಭಿಕ ಚಿತ್ರ

'ಹತ್ತೇ ನಿಮಿಷದಲ್ಲಿ ಡೆಲಿವರಿ'; ನಾಳೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕಾರ್ಮಿಕರು

ಹೊಸ ವರ್ಷಾಚರಣೆಗೆ ಭರದ ಸಿದ್ಧತೆ ನಡೆದಿರುವಾಗಲೇ ಗಿಗ್ ಕಾರ್ಮಿಕರು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಇಳಿದಿರುವುದರಿಂದ ಆನ್ ಲೈನ್ ಆಧರಿತ ಫ್ಲಾಟ್ ಫಾರಂ ಗಳ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.


ಹತ್ತು ನಿಮಿಷದ ವಿತರಣೆ ಸ್ಥಗಿತಕ್ಕೆ ಆಗ್ರಹಿಸಿ ಗಿಗ್ ಕಾರ್ಮಿಕರ ಸಂಘಟನೆಗಳು ನಾಳೆ(ಡಿ. 31) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಹೊಸ ವರ್ಷದ‌ ಮುನ್ನ ದಿನವೇ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಅತ್ಯಗತ್ಯ ಸೇವೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ನವದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಹೊಸ ವರ್ಷಾಚರಣೆಗೆ ಭರದ ಸಿದ್ಧತೆಗಳು ನಡೆದಿರುವಾಗಲೇ ಗಿಗ್ ಕಾರ್ಮಿಕರು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಇಳಿದಿರುವುದರಿಂದ ಆನ್ ಲೈನ್ ಆಧರಿತ ಫ್ಲಾಟ್ ಫಾರಂ ಗಳ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಡಿ. 25 ರಂದು ಸಹ ಗಿಗ್ ಕಾರ್ಮಿಕರ ಒಕ್ಕೂಟಗಳು ಇದೇ ರೀತಿಯ ಮುಷ್ಕರಕ್ಕೆ ಕರೆ ನೀಡಿದ್ದವು. ಗುರುಗ್ರಾಮ್ ಮತ್ತು ದೆಹಲಿಯ ಕೆಲ ಭಾಗಗಳಲ್ಲಿ ಆನ್ ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಹೊಸ ವರ್ಷದ ಮುನ್ನ ದಿನದಂದೇ 'ಆ್ಯಪ್ ಬಂದ್' ಮುಷ್ಕರಕ್ಕೆ‌ಕರೆ ನೀಡಿರುವ ಕಾರಣ ನಗರಗಳಲ್ಲಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ (IFAT), ಮತ್ತು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಸಂಘ (GIPSWU) ಹೇಳಿದೆ.

ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟವು ದೇಶಾದ್ಯಂತ ಸುಮಾರು 7 ಲಕ್ಷ ಸದಸ್ಯರನ್ನು ಹೊಂದಿದ್ದು, ಸುಮಾರು 35,000 ಗಿಗ್ ಕಾರ್ಮಿಕರು ಬೆಂಗಳೂರಿನಲ್ಲಿ ನಗರ ಒಂದರಲ್ಲೇ ಕಾರ್ಯಾಚರಿಸುತ್ತಿದ್ದಾರೆ.

ಆತಂಕದಲ್ಲಿ ಗಿಗ್ ಕಾರ್ಮಿಕರು

ಬಹುತೇಕ ಗಿಗ್ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲು ಇಚ್ಚಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಉದ್ಯೋಗದಾತ ಕಂಪೆನಿಗಳು ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸುವ ಆತಂಕದಲ್ಲಿದ್ದಾರೆ. ಹತ್ತು ನಿಮಿಷಗಳಲ್ಲಿ ಸೇವೆ ಒದಗಿಸುವ ಆತುರದಲ್ಲಿ ಕಾರ್ಮಿಕರು ತಮ್ಮ ಬದುಕನ್ನೇ ಒತ್ತಡದಲ್ಲಿ ಕಳೆಯುವಂತಾಗಿದೆ. ನಿಗದಿತ ಅವಧಿಯಲ್ಲಿ ಸೇವೆ ನೀಡಲು ಆಗದಿದ್ದರೆ ಗುರುತಿನ ಚೀಟಿ ನಿರ್ಬಂಧಿಸುವಿಕೆ ಮತ್ತು ದಂಡಗಳಿಗೆ ಗುರಿಯಾಗಬೇಕಾಗುತ್ತದೆ. ಇದು ಗಿಗ್ ಕಾರ್ಮಿಕರನ್ನು ಶೋಷಿಸುವಂತಿದೆ. ಕೇಂದ್ರ ಸರ್ಕಾರ ಈ ನಿಯಮಗಳಿಗೆ ಪರಿಷ್ಕರಣೆ ತರಬೇಕು. ಹತ್ತು ನಿಮಿಷಗಳ ಪಾರ್ಸೆಲ್ ಸೇವೆ ನಿರ್ಬಂಧಿಸಬೇಕು ಎಂದು IFAT ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಸವರ್ದೇಕರ್ ​​ಒತ್ತಾಯಿಸಿದ್ದಾರೆ.

ಕಾರ್ಮಿಕರ ಬೇಡಿಕೆಗಳೇನು?

ಕಾರ್ಮಿಕ ಕಾನೂನುಗಳಡಿ ಪ್ಲಾಟ್‌ಫಾರ್ಮ್ ಕಂಪನಿಗಳನ್ನು ನಿಯಂತ್ರಿಸಬೇಕು. 10 ನಿಮಿಷಗಳ ವಿತರಣಾ ಮಾದರಿಯ ಮೇಲೆ ನಿಷೇಧ ಹೇರಬೇಕು. ನ್ಯಾಯಯುತ ಮತ್ತು ಪಾರದರ್ಶಕ ವೇತನ, ಸುಧಾರಿತ ಸಾಮಾಜಿಕ ಭದ್ರತೆ, ಸಂಘಟಿಸುವ ಮತ್ತು ಸಾಮೂಹಿಕವಾಗಿ ಚೌಕಾಶಿ ಮಾಡುವ ಹಕ್ಕಿನ ರಕ್ಷಣೆ ಒದಗಿಸಬೇಕು ಎಂದು ಗಿಗ್ ಕಾರ್ಮಿಕರ ಒಕ್ಕೂಟಗಳು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದಿವೆ.

Read More
Next Story