
ಇಸ್ರೇಲ್‌ನಿಂದ ಹಿಂದಿರುಗಿದ ಗುರುತಿಸಲಾಗದ ಪ್ಯಾಲೆಸ್ಟೀನಿಯನ್ನರ ಶವಗಳ ಮೇಲೆ ವೈದ್ಯಕೀಯ ಕಾರ್ಯಕರ್ತರು ಸಿದ್ಧತೆಯಲ್ಲಿ ಪ್ರಾರ್ಥಿಸುತ್ತಿದ್ದಾರೆ
ಗಾಜಾದಲ್ಲಿ ದಾಳಿ ಮುಂದುವರಿಸಿದ ಇಸ್ರೇಲ್; ಶಾಂತಿ ಒಪ್ಪಂದದ ಭವಿಷ್ಯ ಅಸ್ಪಷ್ಟ
ಗಾಜಾ ನಗರ ಮತ್ತು ಡೆರ್ ಅಲ್-ಬಲಾಹ್ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿದೆ. ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳ ಮೇಲೆ ಹಮಾಸ್ ಪಡೆಗಳು ನಡೆಸಿದ ದಾಳಿಗೆ ಪ್ರತಿಯಾಗಿ ತಾವೂ ಕೂಡ ದಾಳಿ ನಡೆಸಿದ್ದಾಗಿ ಇಸ್ರೇಲ್ ಅಧಿಕಾರಿಗಳ ಹೇಳಿದ್ದಾರೆ.
ಗಾಜಾದಲ್ಲಿ ಇಸ್ರೇಲ್ ಪಡೆಗಳು ಭೀಕರ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದಕ್ಕೆ ಹಿನ್ನಡೆಯಾಗಿದೆ.
ಇಸ್ರೇಲ್ ದಾಳಿಗೆ ಪ್ರತಿಯಾಗಿ ಹಮಾಸ್ ಕೂಡ ಬಂಧಿತರ ಮೃತದೇಹ ಹಸ್ತಾಂತರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ಬೆಳವಣಿಗೆಯಿಂದ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದವು ಸಂಕಷ್ಟಕ್ಕೆ ಸಿಲುಕಿದೆ.
ಗಾಜಾ ಪಟ್ಟಣ ಮತ್ತು ಡೆರ್ ಅಲ್-ಬಲಾಹ್ ಪ್ರದೇಶಗಳ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳ ಮೇಲೆ ಹಮಾಸ್ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ ನಾವು ಪ್ರತಿಕಾರ ತೆಗೆದುಕೊಂಡಿದ್ದೇವೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳುತ್ತಾರೆ. ಹಮಾಸ್ ದಾಳಿಯನ್ನು ಬೆಂಜಾಮಿನ್ ನೆತನ್ಯಾಹು ಕಿಡಿಕಾರಿದ್ದು, ಶಾಂತಿ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ.
ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್, ಇಸ್ರೇಲ್ ಸೈನಿಕರ ಮೇಲೆ ದಾಳಿ ಮಾಡಿದ ಹಮಾಸ್ ಭಾರೀ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇನ್ನು ಗಾಜಾ ನಗರದ ಮೇಲೆ ಇಸ್ರೇಲ್ ದಾಳಿ ನಡೆಸುವುದಕ್ಕೂ ಮುನ್ನ ಅಮೆರಿಕಕ್ಕೆ ಮಾಹಿತಿ ನೀಡಿತ್ತು ಎನ್ನಲಾಗಿದೆ.
ಕದನ ವಿರಾಮ ಉಲ್ಲಂಘಿಸಿದ ಇಸ್ರೇಲ್; ಆರೋಪ
ದಕ್ಷಿಣ ಗಾಜಾದ ರಫಾ ನಗರದಲ್ಲಿ ಇಸ್ರೇಲ್ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಆರೋಪವನ್ನು ಹಮಾಸ್ ತಳ್ಳಿ ಹಾಕಿದೆ. ದಾಳಿಯಲ್ಲಿ ಹಮಾಸ್ ಪಡೆಗಳ ಪಾತ್ರವಿಲ್ಲ. ಇಸ್ರೇಲ್ ನಡೆಸಿರುವ ಹಿಂಸಾತ್ಮಕ ದಾಳಿಯು ಶಾಂತಿ ಒಪ್ಪಂದದ ಉಲ್ಲಂಘನೆ” ಎಂದು ಹಮಾಸ್ ಆರೋಪಿಸಿದೆ.
ಅಸ್ಥಿರವಾದರೂ ಶಾಂತಿ ಮುಂದುವರಿಯುತ್ತಿದೆ
ಅ.10ರಂದು ಆರಂಭವಾದ ಶಾಂತಿ ಒಪ್ಪಂದದ ಬಳಿಕ ಎರಡು ಬಾರಿ ಹಿಂಸಾತ್ಮಕ ಘಟನೆಗಳು ನಡೆದಿವೆ. ಅ.19ರಂದು ಹಮಾಸ್ ಗುಂಡಿನ ದಾಳಿಯಲ್ಲಿ ಇಬ್ಬರು ಇಸ್ರೇಲ್ ಸೈನಿಕರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿ 40ಕ್ಕೂ ಹೆಚ್ಚು ಪ್ಯಾಲಸ್ತೀನಿಯರನ್ನು ಕೊಂದಿತ್ತು. ವಾರಾಂತ್ಯದಲ್ಲಿ ಇಸ್ಲಾಮಿಕ್ ಜಿಹಾದ್ ಉಗ್ರರ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಈಗಲೂ ಗಾಜಾದಲ್ಲಿ 13 ಬಂಧಿತರ ಮೃತದೇಹಗಳು ಪತ್ತೆಯಾಗಿಲ್ಲ. ಹಮಾಸ್ ಒಂದು ಮೃತದೇಹವನ್ನು ಮಂಗಳವಾರ ಪತ್ತೆಹಚ್ಚಿದರೂ, ಇಸ್ರೇಲ್ ದಾಳಿಯ ಬಳಿಕ ಮೃತದೇಹ ಹಸ್ತಾಂತರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಮೃತದೇಹ ಹಸ್ತಾಂತರ ವಿಳಂಬ
ಇಸ್ರೇಲ್ ಪ್ರಕಾರ ಹಮಾಸ್ ಉದ್ದೇಶಪೂರ್ವಕವಾಗಿ ಮೃತದೇಹಗಳ ಹಸ್ತಾಂತರ ವಿಳಂಬ ಮಾಡುತ್ತಿದೆ. ಈ ಮಧ್ಯೆ ಈಜಿಪ್ಟ್ ತಜ್ಞರ ತಂಡ ಗಾಜಾದಲ್ಲಿ ಹುಡುಕಾಟ ಕಾರ್ಯ ಮುಂದುವರಿಸಿದೆ. ಅರಬ್ ಮಧ್ಯವರ್ತಿ ಅಧಿಕಾರಿಗಳು ಒಪ್ಪಂದ ಉಲ್ಲಂಘನೆ ಆಗಿಲ್ಲ ಎಂದು ಹೇಳಿದ್ದಾರೆ.
ಯುದ್ಧದ ಮಾನವೀಯ ಬೆಲೆ
ಶಾಂತಿ ಒಪ್ಪಂದದಡಿ ಗಾಜಾದಿಂದ ಇಸ್ರೇಲ್‌ಗೆ 15 ಮಂದಿಯ ಮೃತದೇಹಗಳನ್ನು ಹಿಂದಿರುಗಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 195 ಪ್ಯಾಲಸ್ತೀನಿಯರ ದೇಹಗಳನ್ನು ಹಸ್ತಾಂತರಿಸಿದೆ. ಪ್ರಸ್ತುತ, ಗಾಜಾ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ 68,500 ದಾಟಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

