ಗೌರಿ ಲಂಕೇಶ್ ಹತ್ಯೆಗೆ ಆರು ವರ್ಷ: ಆಮೆಗತಿಯಲ್ಲಿ ವಿಚಾರಣೆ
x

ಗೌರಿ ಲಂಕೇಶ್ ಹತ್ಯೆಗೆ ಆರು ವರ್ಷ: ಆಮೆಗತಿಯಲ್ಲಿ ವಿಚಾರಣೆ

ಗೌರಿ ಅವರ ಕುಟುಂಬ ಮತ್ತು ಸ್ನೇಹಿತರು ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯ ರಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.


ಆರು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 5, 2017 ರಂದು ಬಲಪಂಥೀಯ ಹಿಂದುತ್ವವಾದಿ ಸಂಘಟನೆಗೆ ಸೇರಿದವರು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಗೌರಿ ಲಂಕೇಶ್ ಅವರು, ತಳಸಮುದಾಯ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಪರವಾಗಿ ದಿಟ್ಟ ಹೋರಾಟಗಳನ್ನು ಮಾಡುತ್ತಿದ್ದರು. ಪತ್ರಕರ್ತೆಯಾಗಿ ಕೋಮುವಾದದ ವಿರುದ್ಧ ಅನೇಕ ಲೇಖನಗಳನ್ನು ಬರೆದಿದ್ದರು. ಇದು ಬಲಪಂಥೀಯ ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿತ್ತು.

ಸೆ.5, 2017ರ ರಾತ್ರಿ ಗೌರಿ ಲಂಕೇಶ್ ಅವರು ಕಚೇರಿ ಕೆಲಸ ಮುಗಿಸಿ ರಾಜರಾಜೇಶ್ವರಿನಗರದಲ್ಲಿರುವ ತಮ್ಮ ಮನೆಯ ಬಾಗಿಲು ತಲುಪಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಹಿಂದೂ ಮೂಲಭೂತವಾದಿ ಹಂತಕರು, ಗೌರಿ ತಲೆ ಮತ್ತು ಎದೆಗೆ ಗುಂಡು ಹಾರಿಸಿದ್ದರು. ಗೌರಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಈ ಕ್ರೂರ ಹತ್ಯೆ ದೇಶಾದ್ಯಂತ ಜನರ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತು. ಪತ್ರಕರ್ತೆ ಗೌರಿ ಅವರನ್ನು ಹತ್ಯೆಗೈದಿದ್ದು ಬಲಪಂಥೀಯ ಉಗ್ರಗಾಮಿಗಳೇ ಎಂಬುದು ಈಗ ಬಹುತೇಕ ಖಚಿತವಾಗಿದೆ.

ಗೌರಿಯ ಸಹೋದರಿ ಮತ್ತು ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್ ಅವರ ಗೌರಿ ಎನ್ನುವ ಸಾಕ್ಷ್ಯಚಿತ್ರವು ಪ್ರಪಂಚದಾದ್ಯಂತದ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಸುಪ್ರೀಂ ಕೋರ್ಟ್‌ ಅವಲೋಕನ

''ಗೌರಿ ಹತ್ಯೆ ಪ್ರಕರಣದ ತನಿಖೆ ಆಮೆ ಗತಿಯಲ್ಲಿ ಸಾಗುತ್ತಿದೆ. ಅದೇ ಮಾದರಿಯಲ್ಲಿ ನಡೆದ ದಾಭೋಲ್ಕರ್, ಪನ್ಸಾರೆ, ಎಂಎಂ ಕಲಬುರ್ಗಿ ಹತ್ಯೆಯ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸುಪ್ರೀಂ ಕೋರ್ಟ್ ಸೂಚಿಸಿದ್ದು, ಗೌರಿ ಮತ್ತು ಕಲಬುರ್ಗಿ ಹತ್ಯೆಯ ಘಟನೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ನರೇಂದ್ರ ಧಾಬೋಲ್ಕರ್ ಅವರ ಹತ್ಯೆ ಪ್ರಕರಣದ ವಿಷಯದಲ್ಲಿ, ತಮ್ಮ ಕೋರಿಕೆಗೆ ಬಾಂಬೆ ಹೈಕೋರ್ಟ್ ನಿರಾಕರಿಸಿದ ತೀರ್ಪನ್ನು , ಅವರ ಮಗಳು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚಾರವಾದಿ ನರೇಂದ್ರ ಧಾಬೋಕರ್, ಹೋರಾಟಗಾರ ಗೋವಿಂದ್ ಪನ್ಸಾರೆ, ಚಿಂತಕ ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ವ್ಯಾಪಕವಾದ ಪಿತೂರಿ ಇದೆಯೇ ಎಂದು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ.

ಎಸ್ಐಟಿ ರಚನೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2017ರ ಸೆಪ್ಟೆಂಬರ್ 6 ರಂದು ಗೌರಿ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವಂತೆ ಕರ್ನಾಟಕ ಡಿಜಿಪಿ ಮತ್ತು ಐಜಿಪಿಗೆ ಸೂಚಿಸಿತ್ತು. ಎಸ್ಐಟಿ ತನಿಖೆಯ ನೇತೃತ್ವವನ್ನು ಐಜಿ ದರ್ಜೆಯ ಅಧಿಕಾರಿ ವಹಿಸಿದ್ದರು. ಗೌರಿ ಕುಟುಂಬದ ಬೇಡಿಕೆಯಂತೆ ಸಿಬಿಐ ತನಿಖೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಒಪ್ಪಿದೆ ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದರು.

ಪ್ರಕರಣದ ತನಿಖೆಯ ಮೊದಲ ಮೂರು ತಿಂಗಳಲ್ಲಿ ಎಸ್ಐಟಿಗೆ ಸಿಕ್ಕ ಏಕೈಕ ಸುಳಿವು ಎಂದರೆ ಕೇವಲ ನಾಲ್ಕು ಸೆಕೆಂಡ್ಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮಾತ್ರ. ಕೆಲವು ಮಹತ್ವದ ಸುಳಿವಿಗಾಗಿ ಕಾಯುವ ಬದಲು, ಯಾವುದನ್ನಾದರೂ ಬೇರೆ ಸಾಕ್ಷ್ಯಗಳನ್ನು ಕಂಡುಹಿಡಿಯುವ ಭರವಸೆಯೊಂದಿಗೆ ಎಸ್ಐಟಿ ತನಿಖೆಯನ್ನು ತೀವ್ರಗೊಳಿಸಿತು.

ಆರೋಪಿಗಳ ಪತ್ತೆ

ಸೆಪ್ಟೆಂಬರ್ 13 ರಂದು ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ಬ್ಯಾಲಿಸ್ಟಿಕ್ ವರದಿ ಪ್ರಕಾರ, ''2015 ರಲ್ಲಿ ಧಾರವಾಡದಲ್ಲಿ ಬರಹಗಾರ ಎಂ ಎಂ ಕಲಬುರ್ಗಿ ಅವರನ್ನು ಕೊಲ್ಲಲು ಬಳಸಿದ ಅದೇ ಬಂದೂಕಿನಿಂದ ಗೌರಿ ಲಂಕೇಶ್ ಹತ್ಯೆಯಾಗಿದೆ'' ಎಂದು ತೀರ್ಮಾನಿಸಿತು. ಸೆಪ್ಟೆಂಬರ್ನಲ್ಲಿ ದಾಭೋಲ್ಕರ್ ಪ್ರಕರಣದ ಸಿಬಿಐ ತನಿಖೆ ಮತ್ತು ಪನ್ಸಾರೆ ಪ್ರಕರಣದಲ್ಲಿ ಮಹಾರಾಷ್ಟ್ರದ ಎಸ್ಐಟಿ ತನಿಖೆಯು ಮಹಾರಾಷ್ಟ್ರದ ಎರಡು ಕೊಲೆಗಳಲ್ಲಿ ತೀವ್ರಗಾಮಿ ಸಂಘಟನೆ-ಸನಾತನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆ ಹಿಂದೂ ಜಾಗರಣ ಸಮಿತಿ (ಎಚ್‌ ಜೆ ಎಸ್) ಗೆ ಸಂಬಂಧಿಸಿದ ಕಾರ್ಯಕರ್ತರ ಕೈವಾಡ ಇದೆ ಎನ್ನುವುದನ್ನು ಸೂಚಿಸಿದೆ.

ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ಮತ್ತು ಇನ್ನೊಂದು ಹತ್ಯೆಯನ್ನು ನಡೆಸಲು ಯೋಜಿಸಿರುವ ಬಗ್ಗೆ ಹಿಂದೂ ಯುವ ಸೇನೆ ಕಾರ್ಯಕರ್ತ ಕೆ ಟಿ ನವೀನ್ ಕುಮಾರ್ ಅವರ ದೂರವಾಣಿ ಸಂಭಾಷಣೆಗಳನ್ನು ಜನವರಿ 2018ರಲ್ಲಿ ಎಸ್ಐಟಿ ಕದ್ದಾಲಿಸಿತು. 2018ರ ಫೆಬ್ರವರಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮತ್ತು ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮೇ 2018 ರಲ್ಲಿ ಸುಜಿತ್ ಕುಮಾರ್ ಅವರ ಸೂಚನೆಯ ಮೇರೆಗೆ ನವೀನ್ ಕುಮಾರ್ ಮತ್ತೊಬ್ಬ ವಿಚಾರವಾದಿ ಕೆ ಎಸ್ ಭಗವಾನ್ ಅವರ ಹತ್ಯೆ ನಡೆಸಲು ಯೋಜಿಸಿದ್ದ ಎನ್ನುವುದು ಎಸ್ಐಟಿ ತನಿಖೆಯಿಂದ ತಿಳಿದುಬಂದಿದೆ.

ಸುಜಿತ್ ಕುಮಾರ್ ನೀಡಿದ ಮಾಹಿತಿಯ ಆಧಾರದ ಮೇಲೆ, ಎಸ್ಐಟಿ ತಂಡವು ಮೇ 2018ರಲ್ಲಿ ವಿಜಯಪುರದಿಂದ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್ ಮತ್ತು ಮನೋಹರ್ ಯಾದವೆ ಎಂಬ ಮೂವರನ್ನು ಬಂಧಿಸಿತು. ಜೂನ್ 12, 2018 ರಂದು ಶ್ರೀರಾಮ ಸೇನೆಯ ಕಾರ್ಯಕರ್ತ ಪರಶುರಾಮ ವಾಘ್ಮೋರೆಯನ್ನು ಬಂಧಿಸಲಾಯಿತು.

ಆರೋಪಿಯಾಗಿರುವ ಹಿಂದುತ್ವವಾದಿ ಟಿ ನವೀನ್ ಕುಮಾರ್ ವಿರುದ್ಧ 650 ಪುಟಗಳ ಚಾರ್ಜ್ ಶೀಟ್ ಅನ್ನು ಮೇ30 2018ರಂದು ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಎಸ್‌ಐಟಿ ಸಲ್ಲಿಸಿದೆ. ಇನ್ನು ಗೌರಿ ಹತ್ಯೆ ಪ್ರಕರಣದಲ್ಲಿ 18 ಜನರ ವಿರುದ್ಧ 10,000 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಎಸ್‌ಐಟಿ ನವೆಂಬರ್ 23, 2018 ರಂದು ಸಲ್ಲಿಸಿದೆ.

ವಿಶೇಷ ನ್ಯಾಯಾಲಯಕ್ಕೆ ಆಗ್ರಹ

ಗೌರಿ ಹತ್ಯೆ ಪ್ರಕರಣದ ಕುರಿತ ಬೆಳವಣಿಗೆ ಕುರಿತು ಸಾಮಾಜಿಕ ಕಾರ್ಯಕರ್ತ ಮತ್ತು ಖ್ಯಾತ ಅಂಕಣಕಾರ ಶಿವಸುಂದರ್ ಅವರು ಫೆಡರಲ್‌ ಜೊತೆ ಮಾತನಾಡಿದ್ದು,''ಗೌರಿ ಹತ್ಯೆಗೆ ಸಂಬಂಧಿಸಿದ ಪ್ರಕರಣ ನಿಧಾನ ಗತಿಯಲ್ಲಿ ಸಾಗುತ್ತಿದೆ. ಆದರೆ, ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ 19 ಆರೋಪಿಗಳ ಪೈಕಿ 18 ಜನರು ಈಗಾಗಲೇ ಕಂಬಿ ಹಿಂದೆ ಬಿದ್ದಿದ್ದಾರೆ. ನ್ಯಾಯಾಲಯದಲ್ಲಿರುವ 400ಕ್ಕೂ ಹೆಚ್ಚು ಪ್ರತ್ಯಕ್ಷ ಸಾಕ್ಷಿಗಳ ಪೈಕಿ 90ಕ್ಕೂ ಹೆಚ್ಚು ಜನರ ವಿಚಾರಣೆ ಪೂರ್ಣಗೊಂಡಿದೆ. ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು ಮತ್ತು ತ್ವರಿತವಾಗಿ ವಿಚಾರಣೆ ಪೂಣಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಅದೇ ರೀತಿ ಗೌರಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈವರೆಗೂ ಬೇಡಿಕೆ ಈಡೇರಿಲ್ಲ.

Read More
Next Story