ಜಿ7 ಶೃಂಗಸಭೆ: ಬಿಡೆನ್, ಟ್ರುಡೊ ಅವರನ್ನು ಭೇಟಿ ಮಾಡಿದ ಮೋದಿ
x

ಜಿ7 ಶೃಂಗಸಭೆ: ಬಿಡೆನ್, ಟ್ರುಡೊ ಅವರನ್ನು ಭೇಟಿ ಮಾಡಿದ ಮೋದಿ


ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಶುಕ್ರವಾರ (ಜೂನ್ 14) ಸಂಕ್ಷಿಪ್ತ ಸಂವಾದ ನಡೆಸಿದರು.

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಕೆನಡಾ ಬಾಂಧವ್ಯದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿದೆ.

ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ನ್ಯೂಯಾರ್ಕಿನಲ್ಲಿ ಸಿಖ್ ಪ್ರತ್ಯೇಕತಾ ವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಸಂಚಿನಲ್ಲಿ ಭಾರತೀಯರು ಪಾಲ್ಗೊಂಡಿದ್ದಾರೆ ಎಂದು ವಾಷಿಂಗ್ಟನ್ ಆರೋಪಿಸಿದ ಸುಮಾರು ಏಳು ತಿಂಗಳ ನಂತರ ಮೋದಿ-ಬಿಡೆನ್ ನಡುವೆ ಮಾತುಕತೆ ನಡೆದಿದೆ. ಭಾರತ ಆರೋಪಗಳ ತನಿಖೆಗೆ ಈಗಾಗಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಿಸಿದೆ. ಬಿಡೆನ್ ಅವರೊಂದಿಗೆ ಮಾತುಕತೆ ನಂತರ ಮೋದಿ ಅವರು, ʻಭಾರತ ಮತ್ತು ಯುಎಸ್ ಜಾಗತಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತವೆ,ʼ ಎಂದು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ರುಡೊ ಅವರೊಂದಿಗಿನ ಸಂಭಾಷಣೆ ಕುರಿತು ಮೋದಿ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ: ‌ʻಜಿ 7 ಶೃಂಗಸಭೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರನ್ನು ಭೇಟಿಯಾಗಿದ್ದೇನೆ,ʼ.

ನಿಜ್ಜರ್‌ ಹತ್ಯೆ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಬ್ರಿಟಿಷ್ ಕೊಲಂಬಿಯದಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ʻಸಂಭವನೀಯʼ ಒಳಗೊಳ್ಳುವಿಕೆಯ ಆರೋಪ ಮಾಡಿದ್ದರು. ನವದೆಹಲಿ ಟ್ರುಡೊ ಅವರ ಆರೋಪಗಳನ್ನು ʻಅಸಂಬದ್ಧʼ ಮತ್ತು ʻಪ್ರಚೋದಿತʼ ಎಂದು ತಿರಸ್ಕರಿಸಿತು. ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರ ಗುಂಪುಗಳಿಗೆ ಕೆನಡಾ ಅವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆ ಎಂದು ಭಾರತ ಹೇಳುತ್ತಿದೆ.

ʻಒಟ್ಟಾವಾ ಉಗ್ರವಾದ ಮತ್ತು ಹಿಂಸಾಚಾರವನ್ನು ಪ್ರತಿಪಾದಿಸುವ ಭಾರತ ವಿರೋಧಿ ಗುಂಪುಗಳಿಗೆ ಸ್ಥಳಾವಕಾಶ ನೀಡುತ್ತಿದೆ,ʼ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಬುಧವಾರ ಹೇಳಿದ್ದರು.

ಭಾರತ ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದ್ದು, ಅವರನ್ನು 2023ರ ಜೂನ್ 18 ರಂದು ಸರ್ರೆಯ ಬ್ರಿಟಿಷ್ ಕೊಲಂಬಿಯದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಕೊಲೆಯ ತನಿಖೆ ನಡೆಸುತ್ತಿದೆ.

Read More
Next Story