
ಅ.1ರಿಂದ ಮೊದಲ 15 ನಿಮಿಷ ಆಧಾರ್ ಇದ್ದವರಿಗಷ್ಟೇ ರೈಲು ಟಿಕೆಟ್ ಬುಕಿಂಗ್ ಅವಕಾಶ
15 ನಿಮಿಷಗಳ ನಂತರ, ಅಧಿಕೃತ ಟಿಕೆಟ್ ಏಜೆಂಟರು ಸೇರಿದಂತೆ ಇತರ ಬಳಕೆದಾರರು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.
ರೈಲು ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಏಜೆಂಟರ ಹಾವಳಿ ಮತ್ತು ದುರ್ಬಳಕೆಯನ್ನು ತಡೆಯಲು ರೈಲ್ವೆ ಸಚಿವಾಲಯವು ಮಹತ್ವದ ಹೆಜ್ಜೆಯಿಟ್ಟಿದೆ. ಅಕ್ಟೋಬರ್ 1ರಿಂದ, ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಆರಂಭವಾದ ಮೊದಲ 15 ನಿಮಿಷಗಳ ಕಾಲ, ಕೇವಲ ಆಧಾರ್ ದೃಢೀಕೃತ ಬಳಕೆದಾರರಿಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯ ಘೋಷಿಸಿದೆ.
ಈ ಹೊಸ ನಿಯಮವು ಐಆರ್ಸಿಸಿಟಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡುವ ಸಾಮಾನ್ಯ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಅನ್ವಯವಾಗಲಿದೆ. ಈ ಹಿಂದೆ, ಈ ನಿರ್ಬಂಧವು ಕೇವಲ ತತ್ಕಾಲ್ ಬುಕಿಂಗ್‌ಗೆ ಮಾತ್ರ ಸೀಮಿತವಾಗಿತ್ತು.
ಸಾಮಾನ್ಯವಾಗಿ, ರೈಲು ಟಿಕೆಟ್ ಬುಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಟಿಕೆಟ್‌ಗಳು ಏಜೆಂಟರು ಮತ್ತು ಇತರರಿಂದ ಬುಕ್ ಆಗುತ್ತಿದ್ದವು. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಸಿಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ಕಾಯ್ದಿರಿಸುವಿಕೆ ವ್ಯವಸ್ಥೆಯ ಪ್ರಯೋಜನಗಳು ನೇರವಾಗಿ ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ನಿಯಮದಲ್ಲಿ ಏನಿದೆ?
ಯಾವುದೇ ರೈಲಿನ ಬುಕಿಂಗ್ ಆರಂಭವಾದ ಮೊದಲ 15 ನಿಮಿಷಗಳಲ್ಲಿ, ಕೇವಲ ಆಧಾರ್ ಸಂಖ್ಯೆಯನ್ನು ತಮ್ಮ ಐಆರ್ಟಿಸಿ ಖಾತೆಗೆ ಲಿಂಕ್ ಮಾಡಿದ ಬಳಕೆದಾರರು ಮಾತ್ರ ಟಿಕೆಟ್ ಬುಕ್ ಮಾಡಬಹುದು.
15 ನಿಮಿಷಗಳ ನಂತರ, ಅಧಿಕೃತ ಟಿಕೆಟ್ ಏಜೆಂಟರು ಸೇರಿದಂತೆ ಇತರ ಬಳಕೆದಾರರು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.
ರೈಲ್ವೆ ನಿಲ್ದಾಣಗಳಲ್ಲಿನ ಪಿಆರ್ಎಸ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮೊದಲ ದಿನದ ಟಿಕೆಟ್ ಬುಕಿಂಗ್ ಆರಂಭವಾದ ಮೊದಲ 10 ನಿಮಿಷಗಳ ಕಾಲ, ಅಧಿಕೃತ ಏಜೆಂಟರು ಟಿಕೆಟ್ ಬುಕ್ ಮಾಡುವಂತಿಲ್ಲ ಎಂಬ ಹಳೆಯ ನಿಯಮವು ಮುಂದುವರಿಯಲಿದೆ.
ಈ ಬದಲಾವಣೆಗಳನ್ನು ಮಾಡಲು CRIS (ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ) ಮತ್ತು IRCTCಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯಗೊಳಿಸಿದ್ದರಿಂದ ಸಿಕ್ಕ ಯಶಸ್ಸಿನ ಹಿನ್ನೆಲೆಯಲ್ಲಿ, ಈ ಸೌಲಭ್ಯವನ್ನು ಸಾಮಾನ್ಯ ಬುಕಿಂಗ್‌ಗೂ ವಿಸ್ತರಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು, ಅಕ್ಟೋಬರ್ 1ಕ್ಕೂ ಮುನ್ನ ತಮ್ಮ ಆಧಾರ್ ಸಂಖ್ಯೆಯನ್ನು IRCTC ಖಾತೆಯೊಂದಿಗೆ ಲಿಂಕ್ ಮಾಡುವಂತೆ ಸೂಚಿಸಲಾಗಿದೆ.