ಮನಮೋಹನ್ ಸಿಂಗ್: ಸಂಸತ್ತಿನಲ್ಲಿ 33 ವರ್ಷಗಳ ಸುದೀರ್ಘ ಇನ್ನಿಂಗ್ಸ್ ಅಂತ್ಯ
x

ಮನಮೋಹನ್ ಸಿಂಗ್: ಸಂಸತ್ತಿನಲ್ಲಿ 33 ವರ್ಷಗಳ ಸುದೀರ್ಘ ಇನ್ನಿಂಗ್ಸ್ ಅಂತ್ಯ

,ʻಇತಿಹಾಸ ನನಗೆ ಕರುಣೆ ತೋರುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆʼ ಎಂದು 2014ರಲ್ಲಿ ಹೇಳಿದ್ದರು.


ಹೊಸದಿಲ್ಲಿ, ಎ.3- ಮೃದು ಮಾತು, ವಿದ್ವತ್ ಮತ್ತು ಮಾದರಿ ವ್ಯಕ್ತಿತ್ವದ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ನಿವೃತ್ತಿ ಹೊಂದಿದ್ದಾರೆ. ದೇಶದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಎಂದು ಖ್ಯಾತರಾದ ಅವರು, 33 ವರ್ಷಗಳ ಬಳಿಕ ಸದ್ದುಗದ್ದಲವಿಲ್ಲದೆ ಸಂಸತ್ತಿನಿಂದ ನಿರ್ಗಮಿಸಿದ್ದಾರೆ.

ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ವ್ಯಾಸಂಗ ಮಾಡಿದೆ ಎಂದು ಹೇಳಿಕೊಂಡಿದ್ದ ಅವರು, ಇಷ್ಟವಿಲ್ಲದೆ ರಾಜಕಾರಣಿ ಆದವರು. ಸಿಂಗ್(91) 1990ರ ದಶಕದ ಆರಂಭದಲ್ಲಿ ಭಾರತವನ್ನು ಉದಾರೀಕರಣದ ಹಾದಿಯಲ್ಲಿ ಮುನ್ನಡೆಸಿದರು. 10 ವರ್ಷ ಪ್ರಧಾನಿಯಾಗಿದ್ದ ಅವರು ಭ್ರಷ್ಟಾಚಾರದ ಆರೋಪಗಳಿಗೆ ಕಣ್ಣು ಮುಚ್ಚಿಕೊಂಡಿದ್ದರು ಎಂದು ಟೀಕೆಗೊಳಗಾದರು. ಅಕ್ಟೋಬರ್ 1991ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾದ ಅವರು, ಐದು ಅವಧಿಗೆ ಮರು ಆಯ್ಕೆಯಾದರು. ಬುಧವಾರ, ಏ.3ರಂದು ಅವರ ಅವಧಿ ಅಂತ್ಯಗೊಂಡಿತು.

ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಿಂಗ್‌, ಹಣಕಾಸು ಸಚಿವರಾಗಿದ್ದರು. 1996 ರವರೆಗೆ ಹುದ್ದೆಯಲ್ಲಿ ಮುಂದುವರಿದರು. 2004 ರಿಂದ 2014 ರವರೆಗೆ ಪ್ರಧಾನಿಯಾದರು. ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲು ನಿರಾಕರಿಸಿದ್ದರಿಂದ, ಸಿಂಗ್ ಅವರಿಗೆ ಅವಕಾಶ ಬಂದಿತು. 2014ರಲ್ಲಿ ಬಿಜೆಪಿ ಗೆಲ್ಲುವವರೆಗೆ ಒಂದು ದಶಕ ಕಾಲ ದೇಶವನ್ನು ಮುನ್ನಡೆಸಿದ್ದರು. 1999ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಬಿಜೆಪಿಯ ವಿಜಯ್ ಕುಮಾರ್ ಮಲ್ಹೋತ್ರಾ ಅವರಿಂದ ಪರಾಭವಗೊಂಡರು.

ಅಕ್ಟೋಬರ್ 1, 1991 ರಿಂದ ಜೂನ್ 14, 2019 ರವರೆಗೆ ಐದು ನಿರಂತರ ಅವಧಿಗೆ ಅಸ್ಸಾಂನಿಂದ ರಾಜ್ಯಸಭೆ ಸದಸ್ಯರಾಗಿದ್ದರು; ಸ್ವಲ್ಪ ಅಂತರದ ನಂತರ ಆಗಸ್ಟ್ 20, 2019 ರಿಂದ ರಾಜಸ್ಥಾನದಿಂದ ಸದಸ್ಯರಾಗಿದ್ದರು. ಮಾರ್ಚ್ 21, 1998 ರಿಂದ ಮೇ 21, 2004 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ. 2004 ಮತ್ತು 2014 ರ ನಡುವೆ ಪ್ರಧಾನಿ ಯಾಗಿದ್ದಾಗ ಸದನದ ನಾಯಕರಾಗಿದ್ದರು.

ಭ್ರಷ್ಟಾಚಾರದ ವಿರುದ್ಧ ಮಾತನ್ನಾಡಲಿಲ್ಲ ಎಂದು ಬಿಜೆಪಿಯಿಂದ ʻಮೌನ ಮೋಹನ್ ಸಿಂಗ್ʼ ಎಂದು ಕರೆಸಿಕೊಂಡಿದ್ದರು.ʻ ಡಾ. ಸಿಂಗ್ ಅವರು ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಸರ್ಕಾರದ ನೇತೃತ್ವ ವಹಿಸಿದ್ದರು. ಅವರು ಭಾರತೀಯರನ್ನು ಬಡವರನ್ನಾಗಿ ಮಾಡಿದರು. ಪ್ರತಿಯಾಗಿ, ಪ್ರಧಾನಿ ವಾಜಪೇಯಿ ಮತ್ತು ಮೋದಿ ಅವರು ಭಾರತೀಯರನ್ನು ಶ್ರೀಮಂತರನ್ನಾಗಿ ಮಾಡಿದರುʼ ಎಂದು ಬಿಜೆಪಿಯ ಅಮಿತ್ ಮಾಳವೀಯ ಬುಧವಾರ ಹೇಳಿದರು.

2014 ರಲ್ಲಿ ಅಧಿಕಾರಾವಧಿಯ ಕೊನೆಯಲ್ಲಿ,ʻಇತಿಹಾಸ ನನಗೆ ಕರುಣೆ ತೋರುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆʼ ಎಂದಿದ್ದರು. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪಗಳಿಗೆ, ವಿಶೇಷವಾಗಿ ನಿರ್ಣಾಯಕ ಮತದಾನದ ಸಮಯ ದಲ್ಲಿ, ಗಾಲಿಕುರ್ಚಿಯಲ್ಲಿ ಆಗಮಿಸುತ್ತಿದ್ದರು.

ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಬೀಳ್ಕೊಡುವ ಸಂದರ್ಭದಲ್ಲಿ ಸಿಂಗ್ ಅವರ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ಅವರ ಕೊಡುಗೆಗಳನ್ನು ಮರೆಯಲಾಗುವುದಿಲ್ಲ ಎಂದು ಹೇಳಿದರು. ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ಮತ ಚಲಾಯಿಸಲು ಬಂದಿದ್ದನ್ನು ಗಮನಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವರು ಹಾಗೆ ಮಾಡಿದರು ಎಂದು ಹೇಳಿದ್ದರು.

ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್‌ ಅವರು ಮಂಗಳವಾರ ಸಿಂಗ್ ಅವರ ನಿವಾಸಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿ, ಸಂಸತ್ತಿನಲ್ಲಿ ಅವರ ಸುದೀರ್ಘ ಅವಧಿಗಾಗಿ ಅಭಿನಂದಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಂಗ್ ಅವರನ್ನು ಭೇಟಿ ಮಾಡಿ, ಸಂಸತ್ತಿನಲ್ಲಿ ಅವರ ಸಾಧನೆಗಳನ್ನು ಶ್ಲಾಘಿಸಿದರು. ಶಿವ ಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ʻಪ್ರಕಾಶಮಾನ ಮನಸ್ಸಿನ ಅತ್ಯುತ್ತಮ ವ್ಯಕ್ತಿʼ ಎಂದು ಬಣ್ಣಿಸಿದ್ದಾರೆ.

ಜನನ, ವಿದ್ಯಾಭ್ಯಾಸ: ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮದಲ್ಲಿ ಸೆಪ್ಟೆಂಬರ್ 26, 1932 ರಂದು ಜನಿಸಿದ ಸಿಂಗ್‌, ಪಂಜಾಬ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ(1952) ಮತ್ತು ಸ್ನಾತಕೋತ್ತರ ಪದವಿ(1954) ಪಡೆದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಎಕನಾಮಿಕ್ಸ್‌ ಟ್ರಿಪೋಸ್(1957) ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್(1962) ಪಡೆದರು.

ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ 1971 ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇರಿದರು. 1972 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಬಡ್ತಿ ಪಡೆದರು. ಅಂಕ್ಟಾಡ್‌ ಸೆಕ್ರೆಟರಿಯೇಟ್‌ನಲ್ಲಿ ಹಾಗೂ ಜಿನೀವಾದಲ್ಲಿ ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಕಗೊಂಡಿದ್ದರು. ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್, ಪ್ರಧಾನಿಯವರ ಸಲಹೆಗಾರ ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಹಕ್ಕುಗಳ ಕಾಯಿದೆ ಜಾರಿ: ಆಹಾರ, ಶಿಕ್ಷಣ, ಕೆಲಸ ಮತ್ತು ಮಾಹಿತಿ ಹಕ್ಕನ್ನು ಖಾತ್ರಿಪಡಿಸುವ ಹಲವು ಪ್ರಮುಖ ಶಾಸನಗಳನ್ನು ಜಾರಿಗೊಳಿಸಿದ ಶ್ರೇಯಸ್ಸು ಅವರದು. 1991-1996 ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗ ಆರ್ಥಿಕ ಸುಧಾರಣೆ ಕ್ರಮಗಳನ್ನುಮುಂದೊತ್ತಿದ್ದರಿಂದ, ಭಾರತದ ಬೆಳವಣಿಗೆಯ ಕಥೆ ಪ್ರಾರಂಭವಾಯಿತು. ʻತನ್ನ ಕಾಲ ಕೂಡಿ ಬಂದಿರುವ ಕಲ್ಪನೆಯನ್ನು ತಡೆಯಲು ಭೂಮಿಯ ಮೇಲಿನ ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ಭಾರತ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಅಂತಹ ಒಂದು ಕಲ್ಪನೆʼ ಎಂದು ಜುಲೈ 1991 ರಲ್ಲಿ ಸಂಸತ್ತಿನಲ್ಲಿ ಹೇಳಿದ್ದರು.

Read More
Next Story