ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ: 8 ಸಾವು
x
ಎಸ್‌ಡಿಆರ್‌ಎಫ್‌ ಸಿಬ್ಬಂದಿ ಪ್ರವಾಹ ಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿರುವುದು

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ: 8 ಸಾವು

ಅಸ್ಸಾಂನ 28 ಜಿಲ್ಲೆಗಳ 3,446 ಗ್ರಾಮಗಳಲ್ಲಿ 22,74,289 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ; ಬ್ರಹ್ಮಪುತ್ರ ಮತ್ತು ಇತರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.


ಅಸ್ಸಾಂನಲ್ಲಿ ಪ್ರವಾಹದಲ್ಲಿ ಇನ್ನೂ ಎಂಟು ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ ಈ ವರ್ಷ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 78 ಕ್ಕೆ ಏರಿದೆ.

ಧುಬ್ರಿ ಮತ್ತು ನಲ್ಬರಿಯಿಂದ ತಲಾ ಎರಡು ಮತ್ತು ಕ್ಯಾಚಾರ್, ಗೋಲ್ಪಾರಾ, ಧೇಮಾಜಿ ಮತ್ತು ಶಿವಸಾಗರ್‌ನಲ್ಲಿ ತಲಾ ಒಬ್ಬರು ಸಾವಿಗೀಡಾ ಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ (ಎಎಸ್‌ಡಿಎಂಎ) ಹೇಳಿದೆ. 28 ಜಿಲ್ಲೆಗಳ 3,446 ಗ್ರಾಮಗಳ 22,74,289 ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.

ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು: ಧುಬ್ರಿ ಹೆಚ್ಚು ಹಾನಿಗೊಳಗಾಗಿದ್ದು, 7,54,791 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಚಾರ್ 1,77,928 ಹಾಗೂ ಬರ್ಪೇಟಾದಲ್ಲಿ 1,34,328 ಮಂದಿ ಹಾನಿಗೊಳಗಾಗಿದ್ದಾರೆ. 29 ಜಿಲ್ಲೆಗಳಲ್ಲಿ ಪೀಡಿತರಾದವರ ಒಟ್ಟು ಸಂಖ್ಯೆ 23,96,648. ರಾಜ್ಯದಲ್ಲಿ 269 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 53,689 ಜನರಿಗೆ ಆಶ್ರಯ ನೀಡಲಾಗಿದೆ. 361 ಪರಿಹಾರ ವಿತರಣಾ ಕೇಂದ್ರಗಳ ಮೂಲಕ 3,15,520 ಜನರಿಗೆ ಅಗತ್ಯ ವಸ್ತು ವಿತರಿಸಲಾಗಿದೆ. 68,432.75 ಹೆಕ್ಟೇರ್‌ನಲ್ಲಿರುವ ಬೆಳೆ ಜಲಾವೃತವಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವಾರ್ತಾಪತ್ರ ತಿಳಿಸಿದೆ.

ಅಪಾಯ ಮಟ್ಟ ಮೀರಿದ ನದಿಗಳು: ಬ್ರಹ್ಮಪುತ್ರ ನದಿಯು ನೇಮತಿಘಾಟ್, ತೇಜ್‌ಪುರ ಮತ್ತು ಧುಬ್ರಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಪಾಯ ಮಟ್ಟ ತಲುಪಿರುವ ನದಿಗಳೆಂದರೆ, ಖೋವಾಂಗ್‌ನ ಬುರ್ಹಿದಿಹಿಂಗ್, ಶಿವಸಾಗರ್‌ನ ದಿಖೌ, ನಂಗ್ಲಾಮುರಘಾಟ್‌ನ ದಿಸಾಂಗ್, ನುಮಾಲಿಗಢ್‌ನ ಧನಸಿರಿ, ಧರಮ್ತುಲ್‌ನ ಕೊಪಿಲಿ, ಬರ್ಪೇಟಾದ ಬೆಕಿ, ಗೋಲಕ್‌ಗಂಜ್‌ನ ಸಂಕೋಶ್, ಬಿಪಿ ಘಾಟ್‌ನ ಬರಾಕ್ ಮತ್ತು ಕರೀಂಗಂಜ್‌ನ ಕುಶಿಯಾರಾ.

ಅಸಂಖ್ಯ ಪ್ರಾಣಿಗಳು ಬಾಧಿತ: ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತ ಸೇರಿದಂತೆ ಹಲವಾರು ಏಜೆನ್ಸಿಗಳು ರಾಜ್ಯದ ವಿವಿಧ ಭಾಗಗಳಲ್ಲಿ 171 ದೋಣಿಗಳ ಮೂಲಕ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಒಟ್ಟಾರೆಯಾಗಿ, ಕಳೆದ 24 ಗಂಟೆಗಳಲ್ಲಿ 70 ಜನ ಮತ್ತು 459 ಜಾನುವಾರುಗಳನ್ನು ರಕ್ಷಿಸಲಾಗಿದೆ. 15,63,426 ಪ್ರಾಣಿಗಳು ಬಾಧಿತವಾಗಿವೆ. ರಾಜ್ಯದಾದ್ಯಂತ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.

Read More
Next Story