ರಾಮಲೀಲಾ ಮೈದಾನದಲ್ಲಿ ಪ್ರತಿಧ್ವನಿಸಿದ ಪ್ರಜಾಪ್ರಭುತ್ವ ಉಳಿಸಿ ಕರೆ
x

ರಾಮಲೀಲಾ ಮೈದಾನದಲ್ಲಿ ಪ್ರತಿಧ್ವನಿಸಿದ 'ಪ್ರಜಾಪ್ರಭುತ್ವ ಉಳಿಸಿ' ಕರೆ

ಫೆಬ್ರವರಿ 7, 1977 ರಂದು ಜಯಪ್ರಕಾಶ ನಾರಾಯಣ್, ದೆಹಲಿಯ ರಾಮಲೀಲಾ ಮೈದಾನದಿಂದ ʻಆಜಾದಿ ಯಾ ಗುಲಾಮಿ (ಸ್ವಾತಂತ್ರ್ಯ ಅಥವಾ ಗುಲಾಮಗಿರಿ)ʼ ನಡುವೆ ಆಯ್ಕೆ ಮಾಡಿಕೊಳ್ಳಲು ದೇಶಕ್ಕೆ ಕರೆ ಕೊಟ್ಟಿದ್ದರು.


ಫೆಬ್ರವರಿ 7, 1977 ರಂದು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಿಂದ ದೇಶದ ಪ್ರಜಾಸತ್ತಾತ್ಮಕ ಧ್ವನಿ ಉಡುಗಿತು.ತೀವ್ರ ಸೈದ್ಧಾಂತಿಕ ಭಿನ್ನತೆಯಿದ್ದ ಪ್ರತಿಪಕ್ಷಗಳು ಕಾಂಗ್ರೆಸ್ ಆಡಳಿತವನ್ನು ಮುಗಿಸಬೇಕೆಂದು ಜಯಪ್ರಕಾಶ ನಾರಾಯಣ್ ಅವರ ಕರೆಗೆ ಓಗೊಟ್ಟು ಒಟ್ಟುಗೂಡಿದವು. ಜೆಪಿ ದೆಹಲಿಯ ರಾಮಲೀಲಾ ಮೈದಾನದಿಂದ ʻಆಜಾದಿ ಯಾ ಗುಲಾಮಿ (ಸ್ವಾತಂತ್ರ್ಯ ಅಥವಾ ಗುಲಾಮಗಿರಿ)ʼ ನಡುವೆ ಆಯ್ಕೆ ಮಾಡಿಕೊಳ್ಳಲು ದೇಶಕ್ಕೆ ಕರೆ ಕೊಟ್ಟರು.

ಮಾರ್ಚ್ 31 ರಂದು ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ʻಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ)ʼ ಸಮಾವೇಶದ ಮೂಲಕ ಗಡಿಯಾರ ಒಂದು ಸುತ್ತು ಬಂದಂತೆ ಆಯಿತು. ಮೈದಾನವು ವಾರ್ಷಿಕ ರಾಮಲೀಲಾ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ಮೈದಾನವಲ್ಲ; ಬದಲಾಗಿ, ವ್ಯವಸ್ಥೆಯ ವಿರೋಧಿ ಚಳವಳಿಗಳ ಜನ್ಮಸ್ಥಳ.

ಜೆಪಿ ಚಳವಳಿ: ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸಲು ʻಸಂಪೂರ್ಣ ಕ್ರಾಂತಿʼ ಯ ಅಗತ್ಯವನ್ನುಪ್ರತಿಪಾದಿಸಿದ ಎರಡು ವರ್ಷಗಳ ನಂತರ 1977 ರಲ್ಲಿ ಜೆಪಿ, ಮತ್ತೊಮ್ಮೆ ರಾಮಲೀಲಾ ಮೈದಾನಕ್ಕೆ ಮರಳಿದರು. ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಸ್ಥಾಪಿಸುವಲ್ಲಿ ಜೆಪಿ ಅವರ ಚಳವಳಿಯ ಯಶಸ್ಸು ಅಲ್ಪಕಾಲಿಕವಾಗಿದ್ದಿರಬಹುದು; ಏಕೆಂದರೆ, ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳೋಳಗೆ ತನ್ನದೇ ವಿರೋಧಾಭಾಸಗಳ ಭಾರದಿಂದ ಕುಸಿಯಿತು. ಇಂದಿರಾ ಅಧಿಕಾರಕ್ಕೆ ಮರಳಲು ದಾರಿ ಮಾಡಿಕೊಟ್ಟಿತು. ಆದರೆ, ಜೆಪಿ ಚಳವಳಿಯು ಕಾಂಗ್ರೆಸ್ಸಿನ ರಾಷ್ಟ್ರವ್ಯಾಪಿ ಅವನತಿಗೆ ನಾಂದಿ ಹಾಡಿತು.

ಸುಮಾರು ಐದು ದಶಕಗಳ ನಂತರ 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ʻಸರ್ವಾಧಿಕಾರಿ ಸರ್ಕಾರʼ ವನ್ನು ಕಿತ್ತೊಗೆಯುವಂತೆ ವಿವಿಧ ನಾಯಕರು ರಾಮಲೀಲಾ ಮೈದಾನದಿಂದ ಭಾರತೀಯ ಮತದಾರರನ್ನು ಕೋರಿದರು. ಜೆಪಿ ಆರಂಭಿಸಿದ ಕಾಂಗ್ರೆಸ್ ವಿರೋಧಿ ಚಳವಳಿಯನ್ನು ಮೋದಿ ವಿರೋಧಿ ಚಳವಳಿಯಾಗಿ ಬದಲಾಯಿತು. 47 ವರ್ಷಗಳ ಹಿಂದೆ ಇಂದಿರಾ ನೇತೃತ್ವದ ಕಾಂಗ್ರೆಸ್‌ ಮೇಲಿನ ಆರೋಪಗಳು ಮತ್ತು ಅದರ ವೈಫಲ್ಯಗಳನ್ನು ಅದೇ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಮೋದಿಯವರ ಬಿಜೆಪಿ ಮೇಲೆ ಆರೋಪಿಸುತ್ತಿವೆ. ಚಕ್ರ ಒಂದು ಸುತ್ತು ಬಂದಿದೆ.

ಐದು ಬೇಡಿಕೆಗಳು: ಇಂಡಿಯ ಒಕ್ಕೂಟದ ನಾಯಕರು ʻಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿʼ ಮತ್ತು ಬಿಜೆಪಿಯ ʻಅಘೋಷಿತ ತುರ್ತುಪರಿಸ್ಥಿತಿ ಯನ್ನು ಕೊನೆಗೊಳಿಸಿʼ ಎಂದು ಮತದಾರರನ್ನು ಒತ್ತಾಯಿಸಿದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸಮಾವೇಶದ ಕೊನೆಯಲ್ಲಿ ಐದು ಬೇಡಿಕೆಗಳನ್ನು ಪಟ್ಟಿಯನ್ನು ಓದಿದರು. ಅವುಗಳೆಂದರೆ, ಚುನಾವಣೆ ಸಮಯದಲ್ಲಿ ಐಟಿ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ದಾಳಿ ನಿಲ್ಲಿಸುವ ಮೂಲಕ ಪ್ರತಿಪಕ್ಷಗಳಿಗೆ ʻಸಮಾನ ಅವಕಾಶʼ ನೀಡುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣೆ ಆಯೋಗದ ಮಧ್ಯಪ್ರವೇಶ, ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ಅವರ ಬಿಡುಗಡೆ, ಪ್ರತಿಪಕ್ಷಗಳನ್ನು ಆರ್ಥಿಕವಾಗಿ ಬಲಹೀನಗೊಳಿಸುವ ಕೇಂದ್ರದ ಪ್ರಯತ್ನಗಳಿಗೆ ತಕ್ಷಣ ಅಂತ್ಯ ಹಾಗೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಚುನಾವಣೆ ಬಾಂಡ್‌ ಯೋಜನೆಯ ತನಿಖೆಗೆ ಎಸ್‌ಐಟಿ ತನಿಖೆ.

ಇಂಡಿಯ ಒಕ್ಕೂಟವು ನಿತೀಶ್ ಕುಮಾರ್ ಅವರ ಜೆಡಿ (ಯು), ಜಯಂತ್ ಚೌಧರಿ ಅವರ ಆರ್‌ಎಲ್‌ಡಿ, ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯಲ್ಲಿ ವಿಫಲವಾಗಿದೆ. ಮೈತ್ರಿ ಭಾರಿ ಹಿನ್ನಡೆ ಅನುಭವಿಸಿ ದೆ. ಭಾನುವಾರದ ಸಮಾವೇಶ ಸ್ವಲ್ಪಮಟ್ಟಿಗೆ ಭರವಸೆ ಮೂಡಿಸಿದೆ.

ಘೋಷಣೆಗಳ ಮಹಾಪೂರ: ಲಕ್ಷಕ್ಕಿಂತ ಹೆಚ್ಚು ಜನಸಮೂಹದ ಜೊತೆಗೆ, ಇಂಡಿಯ ಒಕ್ಕೂಟದ ನಾಯಕರು ಬಿಜೆಪಿಯನ್ನುಎಗ್ಗಿಲ್ಲದೆ ಖಂಡಿಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮೋದಿಯವರ ಆಡಳಿತವನ್ನು ʻಕಂಸನ ರಾಜ್ಯʼಕ್ಕೆ ಹೋಲಿಸಿದ್ದಾರೆ; ಪ್ರಧಾನಿಯವರ ಚುನಾವಣೆ ಸಮಯದ ಗ್ಯಾರಂಟಿಗಳು ʻಚೀನಾದ ಸರಕುಗಳುʼ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ʻಮ್ಯಾಚ್ ಫಿಕ್ಸಿಂಗ್ʼ ಹೇಳಿಕೆ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ʻಈ ಬಾರಿ ಬಿಜೆಪಿ ಗಡಿಪಾರುʼ, ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯನ್ ಅವರ ʻಮೋದಿ ಗ್ಯಾರಂಟಿ, ಜೀರೋ ವಾರಂಟಿʼ ಹೇಳಿಕೆಗಳು ಕಿಚ್ಚು ಹತ್ತಿಸಿವೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಮೋದಿಯವರ ʻಅಮೃತ್ ಕಾಲ್ʼ ಬಗೆಗೆ ಸಂಶಯವನ್ನು ವಿವರಿಸಲು ಹಿಂದೂ ಧಾರ್ಮಿಕ ಗ್ರಂಥಗಳಿಂದ ಉಲ್ಲೇಖಿಸಿದ ಕಥೆ ಸಮಾವೇಶದ ಹೈಲೈಟ್;‌ ಯೆಚೂರಿ ಅವರು ಸಮುದ್ರ ಮಂಥನವನ್ನುಉದಹರಿಸಿ ದರು; ʻಅಮೃತ ಕಾಲದ ಅರ್ಥವೇನೆಂದರೆ, ಇಂದು ಅಮೃತದ ಮಡಕೆ ಕೆಟ್ಟ ಜನರ ಬಳಿ ಇದೆ; ಅದನ್ನು ನಾವು ದೇಶದ ಹಿತಕ್ಕಾಗಿ ಕೆಲಸ ಮಾಡುವವರಿಗೆ ಮರಳಿ ತಂದು ಕೊಡಬೇಕಿದೆʼ

ಎಎಪಿಗೆ ನೈತಿಕ ಬೆಂಬಲ: ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಡಿ ವಶದಲ್ಲಿರುವಾಗ ಮತ್ತು ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುವ ಸಾಧ್ಯತೆ ಮಸುಕಾಗಿರುವ ಸಮಯದಲ್ಲಿ ಸಮಾವೇಶ ಎಎಪಿಗೆ ವರದಾನವಾಗಿ ಪರಿಣಮಿಸಿತು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾತನಾಡದಿದ್ದರೂ, ಸಾರ್ವಜನಿಕವಾಗಿ ಅಪರೂಪವಾಗಿ ಕಾಣಿಸಿಕೊಂಡರು. ಮೈತ್ರಿ ವಿಫಲವಾದರೂ ತೃಣಮೂಲದ ಓಬ್ರಿಯಾನ್‌ ಪಾಲ್ಗೊಂಡಿದ್ದರು.

ಬಂಧನದ ಹೊರತಾಗಿಯೂ ದೆಹಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿರುವ ಕೇಜ್ರಿವಾ‌‌ಲ್‌ ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಮೂಲಕ ಕಳಿಸಿದ ಸಂದೇಶವನ್ನು ಓದಲಾಯಿತು. ಜಾರ್ಖಂಡ್‌ನ ಜೈಲಿನಲ್ಲಿರುವ ಮಾಜಿ ಸಿಎಂ ಹೇಮಂತ್‌ ಸೊರೆನ್‌ ಅವರ ಪತ್ನಿ ಕಲ್ಪನಾ ಸೊರೆನ್‌ ಕೂಡ ಮಾತಮಾಡಿದರು. ಸುನೀತಾ ಮತ್ತು ಕಲ್ಪನಾ ಅವರಿಗೆ ಮೈತ್ರಿ ಕೂಟದ ಸಂಪೂರ್ಣ ಬೆಂಬಲವಿದೆ ಎಂದು ಮುಖಂಡರು ಭರವಸೆ ನೀಡಿದರು. ಒಂದು ದಶಕದ ಹಿಂದೆ ಕೇಜ್ರಿವಾಲ್ ಅವರಿಂದ ಹೀಗಳೆಯಲ್ಪಟ್ಟಿದ್ದ ಸೋನಿಯಾ, ಸಮಾವೇಶದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ, ಸುನೀತಾ ಅವರ ಪಕ್ಕದಲ್ಲಿ ಕುಳಿತು ಅವರ ಕೈಗಳನ್ನು ಹಿಡಿದುಕೊಂಡಿದ್ದರು. ಸೋನಿಯಾ ಅವರುʻನಾವೆಲ್ಲರೂ ನಿಮ್ಮೊಂದಿಗಿದ್ದೇವೆ, ಚಿಂತಿಸಬೇಡಿʼ ಎಂದು ಸುನೀತಾ ಅವರಿಗೆ ಹೇಳಿದರು ಎಂದು ಹಿಂದಿನ ಸಾಲಿನಲ್ಲಿ ಕುಳಿತಿದ್ದ ನಾಯಕರೊಬ್ಬರು ಹೇಳಿದರು. .

ಅಪನಂಬಿಕೆ ಮತ್ತು ಸಂಪರ್ಕದ ಸಮಸ್ಯೆ: ಆದರೆ, ಮಿತ್ರ ಪಕ್ಷಗಳ ನಡುವೆ ಅಪನಂಬಿಕೆ ಮತ್ತು ಸಂಪರ್ಕದ ಸಮಸ್ಯೆ ಇರುವುದು ಕಂಡುಬಂದಿತು. ಕೇಜ್ರಿವಾಲ್ ಅವರ ಸಂದೇಶದಲ್ಲಿದ್ದ ʻಆರು ಭರವಸೆಗಳುʼ ಹಲವು ನಾಯಕರನ್ನು ಆಶ್ಚರ್ಯಚಕಿತರನ್ನಾಗಿಸಿತು.ಎಲ್ಲರಿಗೂ ಉಚಿತ ವಿದ್ಯುತ್, ದೇಶದ ಮೂಲೆಮೂಲೆಯಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳ ಸ್ಥಾಪನೆ ಇತ್ಯಾದಿ ಭರವಸೆಗಳನ್ನುನಿಮ್ಮನ್ನೆಲ್ಲ ಕೇಳದೆಯೇ ನೀಡಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಕೇಜ್ರಿವಾಲ್‌ ಪತ್ರದಲ್ಲಿ ಇದ್ದಿತ್ತು. ಒಕ್ಕೂಟದ ಹಲವು ನಾಯಕರು ʼಕೇಜ್ರಿವಾಲ್ ಈ ಸಂದೇಶ ಕಳುಹಿಸಿರುವುದು ಸರಿಯಲ್ಲʼ ಎಂದು ಹೇಳಿದರು. ಮೈತ್ರಿ ಕೂಟವು ಐದು ಅಂಶಗಳ ಬೇಡಿಕೆಯನ್ನು ಮುಂದಿಡಲು ನಿರ್ಧರಿಸಿರುವಾಗ, ʻಏಕಪಕ್ಷೀಯವಾಗಿ ಖಾತರಿಗಳನ್ನು ಘೋಷಿಸಿರುವುದುʼ ಸರಿಯಲ್ಲ ಎಂದು ಹೇಳಿದರು.

ಅದೇ ರೀತಿ ತೃಣಮೂಲ ನಾಯಕರಾದ ಓಬ್ರಿಯಾನ್ ಮತ್ತು ಸಾಗರಿಕಾ ಘೋಷ್, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬಿಜೆಪಿ ಕ್ರಮವನ್ನು ಟೀಕಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಪ್‌ ಮೇಲೆ ವಾಗ್ದಾಳಿ ನಡೆಸಿದರು. ʼಇಂಡಿಯ ಒಕ್ಕೂಟದ ಯಶಸ್ಸಿಗೆ ಎಲ್ಲಾ ಘಟಕಗಳು ಒಗ್ಗೂಡುವುದು ಅನಿವಾರ್ಯ ಮತ್ತು ಪ್ರತಿಕೂಲವಾದ ಏನನ್ನೂ ಮಾಡಬಾರದುʼ ಎಂದು ಪ್ರತಿಪಾದಿಸಿದರು.

ಪಂಜಾಬಿನ ಮುಖ್ಯಮಂತ್ರಿ ಮಾನ್‌, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಬೆದರಿಕೆ ತಂತ್ರ ಬಳಸುತ್ತಿದ್ದಾರೆ ಮತ್ತು ಪಕ್ಷದ ನಾಯಕರನ್ನು ಬೇಟೆಯಾಡುತ್ತಿದ್ದಾರೆ ಎಂಬ ಅಭಿಪ್ರಾಯ ಕಾಂಗ್ರೆಸ್‌ ನಲ್ಲಿದೆ.ಎಎಪಿ ಮತ್ತು ಕಾಂಗ್ರೆಸ್ ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಮೈತ್ರಿ ಮಾಡಿಕೊಂಡಿವೆ. ಆದರೆ, ಪಂಜಾಬಿನ 13 ಲೋಕಸಭಾ ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಿದೆ.

ಖರ್ಗೆ ನೇರ ನುಡಿ: ʻನಾನು ಪಂಜಾಬ್ ಮುಖ್ಯಮಂತ್ರಿಯಲ್ಲಿ ವಿನಂತಿಸುತ್ತೇನೆ,; ಒಗ್ಗೂಡಿ; ಒಬ್ಬರನ್ನೊಬ್ಬರು ಒಡೆಯಬೇಡಿ. ನಾವು ಒಂದಾಗಿ ಹೋರಾಡಿದರೆ ಮಾತ್ರ ಯಶಸ್ವಿಯಾಗುತ್ತೇವೆ; ಒಬ್ಬರನ್ನೊಬ್ಬರು ತುಳಿಯಲು ಪ್ರಯತ್ನಿಸಿದರೆ, ಎಂದಿಗೂ ಯಶಸ್ವಿಯಾಗುವುದಿಲ್ಲ.ನಮ್ಮಲ್ಲಿ ಭಿನ್ನಾಭಿ ಪ್ರಾಯ ಇರಬಹುದು. ಯೆಚೂರಿ, ಡಿ. ರಾಜಾ ಮತ್ತು ನಾವು ಕೇರಳದಲ್ಲಿ ಹೊಡೆದಾಡುತ್ತೇವೆ. ಆದರೆ, ಇಲ್ಲಿ ದೊಡ್ಡ ಕಾರಣಕ್ಕಾಗಿ ಸೇರಿದ್ದೇವೆ. ಅದರಂತೆ ನಾವು ಪಂಜಾಬಿನಲ್ಲಿ ಎಎಪಿ ವಿರುದ್ಧ ಹೋರಾಡಬಹುದು. ಆದರೆ, ದೇಶದ ಏಕತೆಗಾಗಿ ನಾವು ಒಟ್ಟಿಗೆ ನಿಲ್ಲಬೇಕುʼ ಎಂದು ಖರ್ಗೆ ಹೇಳಿದರು.

ಏಳು ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಇಂಥ ಅಪಶ್ರುತಿ ಮತ್ತು ಭಿನ್ನಾಭಿಪ್ರಾಯ ಇಂಡಿಯ ಒಕ್ಕೂಟಕ್ಕೆ ಸೂಕ್ತವಲ್ಲ. ʻ400 ಪಾರ್ ʼ (400 ಪ್ಲಸ್ ಸೀಟು) ಗೆಲುವು ಖಚಿತಪಡಿಸಿಕೊಳ್ಳಲು ಬಿಜೆಪಿ ಚುನಾವಣೆಯಲ್ಲಿ ವಂಚನೆಗೆ ಮುಂದಾಗಬಹುದು ಎಂಬ ತೇಜಸ್ವಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಮತ್ತು ಇತರರ ಆತಂಕ ವ್ಯಕ್ತಪಡಿಸಿದ್ದಾರೆ. 1977ರಲ್ಲಿ ವೈವಿಧ್ಯಮಯ ಪಕ್ಷಗಳ ಎದುರು ಭಾರಿ ಸವಾಲು ಇದ್ದರೂ, ಜೆಪಿ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

Read More
Next Story