ಕರೂರ್‌ ಕಾಲ್ತುಳಿತ |4 ಗಂಟೆ ತಡ ಮಾಡಿದ್ದೇ ದುರಂತಕ್ಕೆ ಕಾರಣ ; ನಟ ವಿಜಯ್‌ ವಿರುದ್ಧ ಕೊನೆಗೂ ಎಫ್‌ಐಆರ್‌
x

ಕರೂರ್ ರ್ಯಾಲಿಯಲ್ಲಿ ನಟ ಮತ್ತು ಟಿವಿಕೆ ನಾಯಕ ವಿಜಯ್.

ಕರೂರ್‌ ಕಾಲ್ತುಳಿತ |4 ಗಂಟೆ ತಡ ಮಾಡಿದ್ದೇ ದುರಂತಕ್ಕೆ ಕಾರಣ ; ನಟ ವಿಜಯ್‌ ವಿರುದ್ಧ ಕೊನೆಗೂ ಎಫ್‌ಐಆರ್‌

ನಾಲ್ವರು ಟಿವಿಕೆ ಮುಖಂಡರ ವಿರುದ್ಧ ಅಪರಾಧವಲ್ಲದ ನರಹತ್ಯೆ ಸೇರಿದಂತೆ ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಇದೀಗ ವಿಜಯ್‌ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.


ಕರೂರಿನಲ್ಲಿ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ಟ್ರಿ ಕಳಗಮ್ ಪಕ್ಷದ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್‌ ಮೇಲೆ ಕೊನೆಗೂ ಎಫ್‌ಐಆರ್‌ ದಾಖಲಾಗಿದೆ. ವಿಜಯ್ ಅವರು 4 ಗಂಟೆಗಳ ಕಾಲ ತಡವಾಗಿ ರ‍್ಯಾಲಿಗೆ ಬಂದಿದ್ದೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಕಳೆದ ಶನಿವಾರ ಸಂಜೆ ಕರೂರು ಪಟ್ಟಣದಲ್ಲಿ ಸಂಭವಿಸಿದ ದುರಂತದಲ್ಲಿ ಒಟ್ಟು 41 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿಡಿದ್ದರು. 2026ರ ವಿಧಾನಸಭಾ ಚುನಾವಣೆಗೂ ಮುನ್ನ ಶಕ್ತಿ ಪ್ರದರ್ಶನವಾಗಬೇಕಿದ್ದ ಈ ಕಾರ್ಯಕ್ರಮವು ದುರಂತದಲ್ಲಿ ಅಂತ್ಯವಾಗಿದೆ.

ಕರೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಮಣಿವಣ್ಣನ್ ಅವರು ಕರೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಟಿವಿಕೆ ಪಕ್ಷದ ನಾಲ್ವರು ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ವಿಜಯ್‌ ಅವರನ್ನು ಎಫ್‌ಐಆರ್‌ನಲ್ಲಿ ಸೇರಿಸಿರಲಿಲ್ಲ. ವಿಜಯ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಕರೂರು ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮಥಿಯಗನ್ ಅವರನ್ನು ಎ-1 ಆರೋಪಿಯಾಗಿ ಹೆಸರಿಸಲಾಗಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸಿ.ಟಿ. ನಿರ್ಮಲ್ ಕುಮಾರ್‌ ಅವರ ಮೇಲೂ ಎಫ್‌ಐಆರ್‌ ದಾಖಲಿಸಲಾಗಿದೆ. ಎಲ್ಲ ಆರೋಪಿಗಳ ವಿರುದ್ದ ‘ಹತ್ಯೆಗೆ ಸಮನಲ್ಲದ ಗಂಭೀರ ನಿರ್ಲಕ್ಷ್ಯ’, ‘ಜನರ ಜೀವಕ್ಕೆ ಅಪಾಯ ಉಂಟು ಮಾಡುವುದು’, ‘ಸಾರ್ವಜನಿಕ ಸೇವಕರ ಆದೇಶ ಪಾಲಿಸದಿರುವುದು,‘ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪಗಳಡಿ ಐದು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

3–10 ಗಂಟೆಗಳ ನಡುವೆ ರ‍್ಯಾಲಿಗೆ ಅನುಮತಿ

ರ‍್ಯಾಲಿಗೆ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ಕಾರ್ಯಕ್ರಮ ಸಂಘಟಕರು 10,000 ಜನರು ಬರುತ್ತಾರೆ ಎಂದು ಹೇಳಿದರೂ ಸುಮಾರು 25,000 ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಬೆಳಿಗ್ಗೆ 10 ಗಂಟೆಯಿಂದಲೇ ಜನ ಸೇರಿಸುವುದನ್ನು ಪ್ರಾರಂಭಿಸಿದ್ದರು. ವಿಜಯ್ ಮಧ್ಯಾಹ್ನ 12 ಗಂಟೆಗೆ ಬರುತ್ತಾರೆ ಎಂಬ ನಿರೀಕ್ಷೆಯಿತ್ತು. ಇದರಿಂದ ಪ್ರಮುಖ ರಸ್ತೆಗಳಲ್ಲಿ ಭಾರೀ ಜನಜಂಗುಳಿ ಸೇರಿತ್ತು. ಆದರೆ, ವಿಜಯ್ ಅವರು ಸಂಜೆ 4:45ಕ್ಕೆ ಬಂದರು. ಅನಧಿಕೃತವಾಗಿ ಮೆರವಣಿಗೆ ನಡೆಸಿ ಮತ್ತಷ್ಟು ತಡ ಮಾಡಿದರು. ಇದರಿಂದ ದುರಂತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ವಿಜಯ್ ತಡ ಮಾಡಿದ್ದು, ಉದ್ದೇಶಪೂರ್ವಕ

ವಿಜಯ್ ಉದ್ದೇಶಪೂರ್ವಕವಾಗಿ ತಡಮಾಡಿ, ಅನುಮತಿ ಇಲ್ಲದ ಸ್ಥಳಗಳಲ್ಲಿ ಮೆರವಣಿಗೆ ನಡೆಸಿದರು. ಸಂಜೆ 7ಕ್ಕೆ ವೆಲೂಚಂಪಟ್ಟಿ ಜಂಕ್ಷನ್‌ನಲ್ಲಿ ವಿಜಯ್ ತಮ್ಮ ವಾಹನವನ್ನು ಜನರ ಮಧ್ಯೆ ನಿಲ್ಲಿಸಿ, ಕೆಲ ಕಾಲ ಅಲ್ಲಿಯೇ ನಿಂತಿದ್ದರು. ಇದರಿಂದ ಜನಸಮೂಹ ನಿಯಂತ್ರಣ ಕಳೆದುಕೊಂಡಿತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದರೂ ಪರಿಸ್ಥಿತಿ ಕೈ ತಪ್ಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಎಚ್ಚರಿಕೆ ನಿರ್ಲಕ್ಷ್ಯ

ಇನ್‌ಸ್ಪೆಕ್ಟರ್‌ ಮಣಿವಣ್ಣನ್ ಹಾಗೂ ಇತರೆ ಅಧಿಕಾರಿಗಳು ಪದೇ ಪದೇ ಎಚ್ಚರಿಕೆ ನೀಡಿದರೂ ಟಿವಿಕೆ ನಾಯಕರು ಗಮನ ಕೊಡಲಿಲ್ಲ. ಬಿರು ಬಿಸಿಲಿನಲ್ಲಿ ನೀರು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಜನ ದಣಿದು ಕುಗ್ಗಿದ್ದರು. ಕೆಲವರು ತಾತ್ಕಾಲಿಕ ಟಿನ್‌ ಶೆಡ್‌ ಮತ್ತು ಮರಗಳ ಮೇಲೆ ಹತ್ತಿ ನಿಂತಿದ್ದರು. ಮರದ ಮೇಲಿದ್ದವರು ಕುಸಿದು ಜನರ ಮೇಲೆ ಬಿದ್ದರು. ಇದು ಇನ್ನಷ್ಟು ಭೀತಿಗೆ ಕಾರಣವಾಯಿತು ಎಂದು ಹೇಳಲಾಗಿದೆ.

ಕೋರ್ಟ್ ಮೊರೆ ಹೋದ ಟಿವಿಕೆ

ದುರಂತವು ಸ್ಥಳೀಯ ಡಿಎಂಕೆ ರಾಜಕಾರಣಿಗಳ ಪೂರ್ವನಿಯೋಜಿತ ಪ್ರಚೋದನೆ ಎಂದು ಆರೋಪಿಸಿ ಟಿವಿಕೆ ಪಕ್ಷದ ಮುಖಂಡರು ಮಧುರೈ ಹೈಕೋರ್ಟ್ ಪೀಠದ ಮೊರೆ ಹೋಗಿದ್ದಾರೆ. ಜನರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮೆರವಣಿಗೆಗೆ ಅಡ್ಡಿಪಡಿಸಲಾಗಿದೆ ಎಂದು ದೂರಿದ್ದಾರೆ. ಹಾಗಾಗಿ ಪ್ರಕರಣವನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡದ ತನಿಖೆಗೆ ಒಪ್ಪಿಸಬೇಕು ಎಂದು ಟಿವಿಕೆ ಮುಖಂಡರು ಮನವಿ ಮಾಡಿದ್ದಾರೆ.

Read More
Next Story