ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್
x

ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್


ಏಪ್ರಿಲ್‌ 12- ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಮತ್ತು ಅವರ ಅಧೀನ ಅಧಿಕಾರಿ ವೈ.ವಿ.ವಿ.ಜೆ.ರಾಜಶೇಖರ್ ವಿರುದ್ಧ ಉತ್ತರಾಖಂಡದ ಅಲ್ಮೋರಾ ಪಟ್ಟಣದ ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಎಂಬ ಎನ್‌ಜಿಒ ಸಲ್ಲಿಸಿದ ದೂರನ್ನುಮಾರ್ಚ್ 2 ರಂದು ಅಂಗೀಕರಿಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತ್ತು.

ಪ್ಲೆಸೆಂಟ್ ವ್ಯಾಲಿ ಫೌಂಡೇಶನ್‌ ದಡಕಡ ಗ್ರಾಮದಲ್ಲಿ ಶಾಲೆಯೊಂದನ್ನು ನಡೆಸುತ್ತಿದೆ. ಫೆಬ್ರವರಿ 14 ರಂದು ಶಾಲೆಗೆ ಅಧಿಕಾರಿಗಳು ಕಳುಹಿಸಿದ್ದ ನಾಲ್ವರು ಬಂದು, ಜಂಟಿ ಕಾರ್ಯದರ್ಶಿಯ ಕೊಠಡಿಯನ್ನು ಧ್ವಂಸಗೊಳಿಸಿ, ಕಡತಗಳು, ದಾಖಲೆಗಳನ್ನುತೆಗೆದುಕೊಂಡು ಹೋಗಿದ್ದಾರೆ. ತಮ್ಮ ವಿರುದ್ಧ ವಿಜಿಲೆನ್ಸ್ ಸೇರಿದಂತೆ ಇತರ ಇಲಾಖೆಗಳಿಗೆ ಸಲ್ಲಿಸಿರುವ ಭ್ರಷ್ಟಾಚಾರದ ದೂರುಗಳನ್ನು ತಕ್ಷಣ ಹಿಂಪಡೆಯದಿದ್ದರೆ, ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಲ್ಲದೆ, ಮೇಜಿನಲ್ಲಿ ಇರಿಸಿದ್ದ 63,000 ರೂ. ನಗದು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು.

ಸೆಕ್ಷನ್ 392 (ದರೋಡೆ), 447 (ಕ್ರಿಮಿನಲ್ ಅತಿಕ್ರಮಣ), 120 ಬಿ (ಕ್ರಿಮಿನಲ್ ಪಿತೂರಿ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಮಾಡಿದ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಹಾಗೂ ಎಸ್‌ಸಿ-ಎಸ್‌ಟಿ ಕಾಯಿದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಮೋರಾದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಆದೇಶದ ಮೇರೆಗೆ ಗೋವಿಂದಪುರದ ಕಂದಾಯ ಪೊಲೀಸ್ ಉಪನಿರೀಕ್ಷಕರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಲ್ಮೋರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನಿತ್ ತೋಮರ್ ತಿಳಿಸಿದ್ದಾರೆ.

Read More
Next Story