ಐದನೇ ಹಂತದ ಚುನಾವಣೆ: ರಾಹುಲ್ ಗಾಂಧಿ, ರಾಜನಾಥ್ ಸಿಂಗ್‌, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ ಭವಿಷ್ಯ ನಿರ್ಧಾರ
x

ಐದನೇ ಹಂತದ ಚುನಾವಣೆ: ರಾಹುಲ್ ಗಾಂಧಿ, ರಾಜನಾಥ್ ಸಿಂಗ್‌, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ ಭವಿಷ್ಯ ನಿರ್ಧಾರ

ಅಮೇಥಿ, ರಾಯ್‌ಬರೇಲಿ ಮೇಲೆ ಎಲ್ಲರ ಕಣ್ಣು. ಒಡಿಷಾದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ


ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಇಂದು(ಸೋಮವಾರ) ಮತದಾನ ನಡೆಯಲಿದೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ ಮತ್ತು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತಿತರ ಹಲವು ಪ್ರಮುಖ ನಾಯಕರ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.

4.26 ಕೋಟಿ ಮಹಿಳೆಯರು ಮತ್ತು 5,409 ತೃತೀಯಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಹೆಚ್ಚು ಜನರು ಈ ಸುತ್ತಿನಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. 94,732 ಮತಗಟ್ಟೆಗಳಲ್ಲಿ 9.47 ಲಕ್ಷ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರ 13, ಉತ್ತರ ಪ್ರದೇಶ 14, ಪಶ್ಚಿಮ ಬಂಗಾಳ 7, ಬಿಹಾರ 5, ಜಾರ್ಖಂಡ್‌ 3, ಒಡಿಶಾ 5, ಜಮ್ಮು-ಕಾಶ್ಮೀರ ಒಂದು ಮತ್ತು ಲಡಾ ಖ್‌ನ ಏಕೈಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಏಳು ಹಂತದ ಚುನಾವಣೆಗಳಲ್ಲಿ ಕನಿಷ್ಠ ಸಂಖ್ಯೆ (49) ಕ್ಷೇತ್ರಗಳು ಈ ಹಂತದಲ್ಲಿವೆ. ಬಿಜೆಪಿಗೆ ಇದು ಪ್ರಮುಖ ಹಂತವಾಗಿದೆ. ಏಕೆಂದರೆ, 49ರಲ್ಲಿ 40 ಕ್ಕೂ ಹೆಚ್ಚು ಸ್ಥಾನಗಳು ಎನ್‌ಡಿಎ ವಶದಲ್ಲಿವೆ. ಮುಂಬೈ, ಥಾಣೆ ಮತ್ತು ಲಕ್ನೋ ಮತದಾರರು ಈ ಹಿಂದೆ ಮತದಾನದ ಬಗ್ಗೆ ನಿರಾಸಕ್ತಿ ತೋರಿಸಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ನಾಗರಿಕರನ್ನು ಕೋರಿದೆ.

ಇತರ ಪ್ರಮುಖ ಅಭ್ಯರ್ಥಿಗಳೆಂದರೆ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ (ಮುಂಬೈ ಉತ್ತರ, ಮಹಾರಾಷ್ಟ್ರ), ಸಾಧ್ವಿ ನಿರಂಜನ್ ಜ್ಯೋತಿ (ಫತೇಪುರ್, ಯುಪಿ) ಮತ್ತು ಶಂತನು ಠಾಕೂರ್ (ಬಂಗಾವ್, ಪಶ್ಚಿಮ ಬಂಗಾಳ); ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ (ಹಾಜಿಪುರ, ಬಿಹಾರ), ಶಿವಸೇನೆಯ ಶ್ರೀಕಾಂತ್ ಶಿಂಧೆ (ಕಲ್ಯಾಣ, ಮಹಾರಾಷ್ಟ್ರ), ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ (ಇಬ್ಬರೂ ಸರಣ್, ಬಿಹಾರ).

ಮಹಾರಾಷ್ಟ್ರದ ಮುಂಬೈನಲ್ಲಿ ಆರು ಸೇರಿದಂತೆ 13 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಜೆಪಿಯಿಂದ ವಕೀಲ ಉಜ್ವಲ್ ನಿಕಮ್, ಪಿಯೂಷ್ ಗೋಯಲ್, ಭಾರತಿ ಪವಾರ್ (ದಿಂಡೋರಿ) ಮತ್ತು ಕಪಿಲ್ ಪಾಟೀಲ್ (ಭಿವಂಡಿ), ಶಿವಸೇನೆಯ ಶ್ರೀಕಾಂತ್ ಶಿಂಧೆ (ಕಲ್ಯಾಣ್) ಮತ್ತು ನಗರ ಕಾಂಗ್ರೆಸ್ ಮುಖ್ಯಸ್ಥ ವರ್ಷಾ ಗಾಯಕ್ವಾಡ್ (ಮುಂಬೈ ಉತ್ತರ ಮಧ್ಯ) ಇದ್ದಾರೆ.

ಉತ್ತರ ಪ್ರದೇಶ: ರಾಜನಾಥ್ ಸಿಂಗ್ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಜ್ಯೋತಿ, ಕೌಶಲ್ ಕಿಶೋರ್ (ಮೋಹನ್‌ಲಾಲ್‌ಗಂಜ್) ಮತ್ತು ಭಾನು ಪ್ರತಾಪ್ ಸಿಂಗ್ ವರ್ಮಾ (ಜಲೌನ್) ಕಣದಲ್ಲಿರುವ ಐದು ಕೇಂದ್ರ ಸಚಿವರಾಗಿದ್ದಾರೆ. ಲಕ್ನೋ ಪೂರ್ವ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆಗೂ ಮತದಾನ ನಡೆಯಲಿದೆ. 2004 ರಿಂದ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಯುಪಿ ಸಚಿವ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

ಅಮೇಥಿಯಲ್ಲಿ 2019 ರಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಇರಾನಿ ಅವರು ಎರಡನೇ ಅವಧಿಗೆ ಪ್ರಯತ್ನಿಸುತ್ತಿದ್ದಾರೆ. ಗಾಂಧಿ ಕುಟುಂಬದ ಆಪ್ತ ಕೆಎಲ್ ಶರ್ಮಾ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಲಕ್ನೋ ಸೆಂಟ್ರಲ್‌ನಿಂದ ಎಸ್‌ಪಿ ಶಾಸಕ ರವಿದಾಸ್ ಮೆಹ್ರೋತ್ರಾ ವಿರುದ್ಧ ಸ್ಪರ್ಧಿಸಿದ್ದಾರೆ. ಅಯೋಧ್ಯೆಯ ದೇಗುಲವನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಮತ್ತು ಮಿಲ್ಕಿಪುರ್ (ಎಸ್‌ಸಿ) ಕ್ಷೇತ್ರದ ಎಸ್‌ಪಿ ಶಾಸಕ ಅವಧೇಶ್ ಪ್ರಸಾದ್ ನಡುವೆ ಸ್ಪರ್ಧೆ ನಡೆಯಲಿದೆ.

ಜಮ್ಮು-ಕಾಶ್ಮೀರ: ಬಾರಾಮುಲ್ಲಾದಲ್ಲಿ ಒಮರ್ ಅಬ್ದುಲ್ಲಾ ಅವರು ಸಜ್ಜದ್ ಲೋನೆ, ತಿಹಾರ್ ಜೈಲಿನಲ್ಲಿರುವ ಮಾಜಿ ಶಾಸಕ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ 'ಇಂಜಿನಿಯರ್ ರಶೀದ್' ಮತ್ತು ಪಿಡಿಪಿಯ ಮಾಜಿ ರಾಜ್ಯಸಭೆ ಸದಸ್ಯ ಫಯಾಜ್ ಅಹ್ಮದ್ ಮಿರ್ ಸೇರಿದಂತೆ 21 ಮಂದಿ ಸ್ಪರ್ಧಿಸಿದ್ದಾರೆ.

ಲಡಾಖ್‌: ಲಡಾಖಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತ್ಸೆರಿಂಗ್ ನಾಮ್ಗ್ಯಾಲ್, ಬಿಜೆಪಿಯ ತಾಶಿ ಗ್ಯಾಲ್ಸನ್ ಮತ್ತು ಸ್ವತಂತ್ರ ಅಭ್ಯರ್ಥಿ ಮತ್ತು ಎನ್‌ಸಿ ಬಂಡಾಯ ಹಾಜಿ ಹನೀಫಾ ಜಾನ್ ತೀವ್ರ ಪೈಪೋಟಿಯಲ್ಲಿದ್ದಾರೆ.

ಪಶ್ಚಿಮ ಬಂಗಾಳ: ಚುನಾವಣಾ ಸಂಬಂಧಿತ ಹಿಂಸಾಚಾರದ ಇತಿಹಾಸ ಹೊಂದಿರುವ ಪಶ್ಚಿಮ ಬಂಗಾಳದ ಏಳು ಕ್ಷೇತ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈ ಹಂತದಲ್ಲಿ ಶೇ.57 ರಷ್ಟು ಮತದಾನ ಕೇಂದ್ರಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿದೆ. ಕೇಂದ್ರ ಪಡೆಗಳ 60,000 ಸಿಬ್ಬಂದಿ ಮತ್ತು ರಾಜ್ಯ ಪೊಲೀಸರ ಸುಮಾರು 30,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿಯ ಅರ್ಜುನ್ ಸಿಂಗ್ ಅವರು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಭೌಮಿಕ್ ಅವರನ್ನು ಬರಕ್‌ಪೋರ್‌ನಲ್ಲಿ ಎದುರಿಸುತ್ತಿದ್ದಾರೆ.ಹೂಗ್ಲಿಯಿಂದ ನಟ ಮತ್ತು ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ವಿರುದ್ಧ ರಚನಾ ಬ್ಯಾನರ್ಜಿ ಅವರನ್ನು ಟಿಎಂಸಿ ಕಣಕ್ಕಿಳಿಸಿದೆ. ಸೆರಾಂಪೋರ್‌ನಲ್ಲಿ ಟಿಎಂಸಿಯ ಹಾಲಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಬಿಜೆಪಿಯ ಕಬೀರ್ ಶಂಕರ್ ಬೋಸ್ ವಿರುದ್ಧ ಹೋರಾಡುತ್ತಿದ್ದಾರೆ.

ಬಿಹಾರ: ಬಿಹಾರದ ಸರನ್, ಮುಜಾಫರ್‌ಪುರ, ಹಾಜಿಪುರ್, ಸೀತಾಮರ್ಹಿ ಮತ್ತು ಮಧುಬನಿ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇವೆಲ್ಲವೂ ಎನ್‌ಡಿಎ ಹಿಡಿತದಲ್ಲಿವೆ. ಹಾಜಿಪುರದಲ್ಲಿ, ಚಿರಾಗ್ ಪಾಸ್ವಾನ್ ಮತ್ತು ಮಾಜಿ ಶಾಸಕ ಮತ್ತು ಮಾಜಿ ಸಚಿವ ಆರ್‌ಜೆಡಿಯ ಶಿವಚಂದ್ರ ರಾಮ್ ನಡುವೆ ಸ್ಪರ್ಧೆ ನಡೆಯ ಲಿದೆ. ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಅವರ ಸರನ್‌ನಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರನ್ನು ಎದುರಿಸಲಿದ್ದಾರೆ.

ಜಾರ್ಖಂಡ್:‌ ಜಾರ್ಖಂಡ್‌ನ ಮೂರು ಲೋಕಸಭಾ ಕ್ಷೇತ್ರಗಳಾದ ಚತ್ರಾ, ಕೊಡೆರ್ಮಾ ಮತ್ತು ಹಜಾರಿಬಾಗ್‌ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಸ್ಪರ್ಧಿಸುತ್ತಿರುವ ಗಂಡೇ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಕೊಡೆರ್ಮಾ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್ ಅಭ್ಯರ್ಥಿ ಬಗೋದರ್ ವಿಧಾನಸಭಾ ಕ್ಷೇತ್ರದ ಶಾಸಕ ವಿನೋದ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.

ಒಡಿಷಾ: ಒಡಿಶಾದಲ್ಲಿ ಸಿಎಂ ಪಟ್ನಾಯಕ್ ಅವರು ಗಂಜಾಂ ಜಿಲ್ಲೆಯ ಅಸ್ಕಾ ಲೋಕಸಭಾ ಕ್ಷೇತ್ರದ ಹಿಂಜಿಲಿ ಮತ್ತು ಬೋಲಂಗಿರ್ ಸಂಸದೀಯ ಕ್ಷೇತ್ರದ ಕಾಂತಾಬಾಂಜಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಹಾಲಿ ಸಂಸದರಾದ ಜುಯಲ್ ಓರಮ್ ಮತ್ತು ಸಂಗೀತಾ ಸಿಂಗ್ ಡಿಯೋ, ಬಿಜೆಡಿ ಸಂಸದ ಅಚ್ಯುತ್ ಸಾಮಂತ್ ಮತ್ತು ಮಾಜಿ ಭಾರತೀಯ ಹಾಕಿ ನಾಯಕ ದಿಲೀಪ್ ಟಿರ್ಕಿ ಕಣದಲ್ಲಿದ್ದಾರೆ.

ಈವರೆಗೆ ನಾಲ್ಕು ಹಂತಗಳಲ್ಲಿ ಒಟ್ಟು ಶೇ.66.95ರಷ್ಟು ಮತದಾನವಾಗಿದ್ದು, ಸುಮಾರು 45.1 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 379 ಸ್ಥಾನಗಳಿಗೆ ಇದುವರೆಗೆ ಮತದಾನ ಪೂರ್ಣಗೊಂಡಿದೆ. ಆರನೇ ಮತ್ತು ಏಳನೇ ಹಂತ ಮೇ 25 ಮತ್ತು ಜೂನ್ 1 ರಂದು ನಡೆಯಲಿವೆ.

Read More
Next Story