
ಚೀನಾ ಸಹಕಾರದಿಂದ ಪರಮಾಣು ಶಕ್ತಿ ಆಧುನಿಕರಣ: ಭಾರತ ಎದುರಿಸಲು ಮುಂದಾದ ಪಾಕಿಸ್ತಾನ?
ಪಾಕಿಸ್ತಾನವು ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಬಹುತೇಕ ಶಸ್ತ್ರಾಸ್ತ್ರಗಳು ಹಾಂಕ್ ಕಾಂಗ್, ಸಿಂಗಾಪುರ, ಟರ್ಕಿ ಹಾಗೂ ಸೌದಿ ಅರೇಬಿಯಾ ಮೂಲಕ ಪಾಕಿಸ್ತಾನ ತಲುಪುತ್ತಿವೆ ಎಂದು ಅಮೆರಿಕದ ಗುಪ್ತಚರ ವರದಿ ಹೇಳಿದೆ.
ಭಾರತವನ್ನು ತನ್ನ 'ಅಸ್ತಿತ್ವಕ್ಕೆ ಬೆದರಿಕೆ' ಎಂದು ಪರಿಗಣಿಸಿರುವ ಪಾಕಿಸ್ತಾನವು, ಭಾರತದ ಮಿಲಿಟರಿ ಶಕ್ತಿಯನ್ನು ಎದುರಿಸಲು ಚೀನಾ ಸಹಕಾರದೊಂದಿಗೆ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುತ್ತಿದೆ. ಇದರಲ್ಲಿ ಯುದ್ಧಭೂಮಿಯಲ್ಲಿ ಬಳಸುವ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯೂ ಸೇರಿದೆ ಎಂಬ ಗುಪ್ತಚರ ವರದಿ ಬಹಿರಂಗಗೊಂಡಿದೆ.
ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ಮೇ 25ರಂದು (ಭಾನುವಾರ) ಬಿಡುಗಡೆ ಮಾಡಿದ '2025 ನೇ ಸಾಲಿನ ಜಾಗತಿಕ ಬೆದರಿಕೆಯ ಮೌಲ್ಯಮಾಪನ (ಗ್ಲೋಬಲ್ ಥ್ರೆಟ್ ಅಸೆಸ್ಮೆಂಟ್) ವಾರ್ಷಿಕ ವರದಿಯಲ್ಲಿ ಪಾಕಿಸ್ತಾನದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದೆ.
ಈ ಗುಪ್ತಚರ ವರದಿಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸಶಸ್ತ್ರ ಸೇವೆಗಳ ಉಪಸಮಿತಿಗಾಗಿ ಸಿದ್ಧಪಡಿಸಲಾಗಿದೆ.
ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಗಾರವನ್ನು ನಿರಂತರವಾಗಿ ಬಲಪಡಿಸುತ್ತಿದೆ. ವಿದೇಶಿ ಪೂರೈಕೆದಾರರು ಹಾಗೂ ಮಧ್ಯವರ್ತಿಗಳಿಂದ ದೊಡ್ಡ ಪ್ರಮಾಣದಲ್ಲಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಬಹುತೇಕ ಶಸ್ತ್ರಾಸ್ತ್ರಗಳು ಹಾಂಕ್ ಕಾಂಗ್, ಸಿಂಗಾಪುರ, ಟರ್ಕಿ ಹಾಗೂ ಸೌದಿ ಅರೇಬಿಯಾ ಮೂಲಕ ಪಾಕಿಸ್ತಾನ ತಲುಪುತ್ತಿವೆ ಎಂದು ವರದಿ ಹೇಳಿದೆ.
2025ರಲ್ಲಿ ಪಾಕಿಸ್ತಾನ ಸೇನೆಯ ಪ್ರಮುಖ ಆದ್ಯತೆಗಳು, ನೆರೆಯ ರಾಷ್ಟ್ರಗಳ ಜತೆಗಿನ ಗಡಿ ಘರ್ಷಣೆಗಳು, ಟಿಟಿಪಿ( ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ) ಹಾಗೂ ಬಲೂಚ್ ರಾಷ್ಟ್ರೀಯತಾವಾದಿಗಳಿಂದ ಹೆಚ್ಚುತ್ತಿರುವ ದಾಳಿಗಳು, ಭಯೋತ್ಪಾದನೆ ವಿರುದ್ಧ ಹೋರಾಟ, ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣದ ಕುರಿತು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಕಳೆದೊಂದು ವರ್ಷದಿಂದ ಪಾಕಿಸ್ತಾನವು ಉಗ್ರರ ವಿರುದ್ಧ ದಿನನಿತ್ಯ ಕ್ರಮ ಕೈಗೊಳ್ಳುತ್ತಿದೆ. ಆದರೆ, ಪರಿಸ್ಥಿತಿ ಸುಧಾರಿಸುವ ಬದಲು ತೀರಾ ಹದಗೆಡುತ್ತಿದೆ. 2024ರಲ್ಲಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನಡೆಸಿದ ದುಷ್ಟಕೃತ್ಯಗಳಲ್ಲಿ 2,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಹೆಚ್ಚಿದ ಚೀನಾ-ಪಾಕ್ ಮಿಲಿಟರಿ ಸಹಕಾರ
ಪಾಕಿಸ್ತಾನ ಮತ್ತು ಚೀನಾ ನಡುವಿನ ಮಿಲಿಟರಿ ಮತ್ತು ಆರ್ಥಿಕ ಸಹಕಾರವೂ ದಿನೇ ದಿನೇ ಹೆಚ್ಚುತ್ತಿದೆ ಎಂದು ಅಮೆರಿಕದ ಗುಪ್ತಚರ ವರದಿ ಹೇಳಿದೆ.
ಎರಡೂ ದೇಶಗಳು ಪ್ರತಿವರ್ಷ ಜಂಟಿಯಾಗಿ ಸಮರಾಭ್ಯಾಸ ನಡೆಸುತ್ತವೆ. 2024 ನವೆಂಬರ್ ನಲ್ಲಿ ಉಭಯ ದೇಶಗಳು ವಾಯುಪಡೆಯ ಸಮರಾಭ್ಯಾಸ ನಡೆಸಿದ್ದವು ಎಂದು ವರದಿ ಹೇಳಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಚೀನಾ ನಾಗರಿಕರ ಮೇಲೆ ಹೆಚ್ಚುತ್ತಿರುವ ದಾಳಿಗಳು ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟು ಮಾಡುತ್ತಿವೆ.
2024ರಲ್ಲಿ ಪಾಕಿಸ್ತಾನದಲ್ಲಿ ಏಳು ಮಂದಿ ಚೀನಾ ನಾಗರಿಕರನ್ನು ಹತ್ಯೆ ಮಾಡಲಾಗಿತ್ತು. ನಂತರ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಆದರೂ ಪ್ರಾದೇಶಿಕ ಮಟ್ಟದಲ್ಲಿ ತನ್ನ ಸ್ಥಾನ ಬಲಪಡಿಸಿಕೊಳ್ಳಲು ಪಾಕಿಸ್ತಾನವು ಚೀನಾ ಸಹಕಾರ ಪಡೆಯುತ್ತಿದೆ. ಪರಮಾಣು ಶಕ್ತಿಯನ್ನು ಹೆಚ್ಚಿಸಲು ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಈ ಪರಿಸ್ಥಿತಿ ಪಾಕಿಸ್ತಾನಕ್ಕೆ ಮಾತ್ರವಲ್ಲ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸುತ್ತಿದೆ ಎಂದು ಅಮೆರಿಕಾದ ಗುಪ್ತಚರ ವರದಿ ಹೇಳಿದೆ.