Nitin Gadkari: ಕಳಪೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು
Nitin Gadkari : ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತಗಳಲ್ಲಿ ಭಾರತವು ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವುದು ಆತಂಕಕಾರಿ ಎಂದರು.
ಕಳಪೆ ರಸ್ತೆ ನಿರ್ಮಾಣವನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಬೇಕು ಮತ್ತು ಅಪಘಾತಗಳಿಗೆ ಕಾರಣವಾಗುವ ರಸ್ತೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತಗಳಲ್ಲಿ ಭಾರತವು ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವುದು ಆತಂಕಕಾರಿ ಎಂದರು..
ಕಳಪೆ ರಸ್ತೆ ನಿರ್ಮಾಣವು ಜಾಮೀನು ರಹಿತ ಅಪರಾಧವಾಗಬೇಕು. ರಸ್ತೆ ಗುತ್ತಿಗೆದಾರರು, ಮತ್ತು ಎಂಜಿನಿಯರ್ ಗಳನ್ನು ಅಪಘಾತಗಳಿಗೆ ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2030 ರ ವೇಳೆಗೆ ರಸ್ತೆ ಅಪಘಾತ ಸಾವುನೋವುಗಳನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ ಎಂದೂ ಅವರು ಹೇಳಿದರು.
ಸಚಿವರ ಪ್ರಕಾರ, 2023ರಲ್ಲಿ ರಸ್ತೆ ಅಪಘಾತಗಳ ಸಚಿವಾಲಯದ ದತ್ತಾಂಶವು ದೇಶದಲ್ಲಿ ಐದು ಲಕ್ಷ ಅಪಘಾತಗಳನ್ನು ತೋರಿಸುತ್ತದೆ. ಇದರಿಂದ 1,72,000 ಸಾವುಗಳು ಸಂಭವಿಸಿವೆ ಎಂದು ಅವರು ಹೇಳಿದರು. ಅಪಘಾತದಲ್ಲಿ ಸಾಯುವವರಲ್ಲಿ ಶೇ.66.4ರಷ್ಟು ಅಥವಾ 1,14,000 ಮಂದಿ 18-45 ವರ್ಷ ವಯಸ್ಸಿನವರಾಗಿದ್ದರೆ, 10,000 ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಡ್ಕರಿ ಮಾಹಿತಿ ನೀಡಿದರು.
ಹೆಲ್ಮೆಟ್ ರಹಿತ ಪ್ರಯಾಣದಿಂದ ಸಾವು
ಹೆಲ್ಮೆಟ್ ಧರಿಸದ ಕಾರಣ 55,000 ಸಾವುಗಳು ಮತ್ತು ಸೀಟ್ ಬೆಲ್ಟ್ ಧರಿಸದ ಕಾರಣ 30,000 ಸಾವುಗಳು ವರದಿಯಾಗಿವೆ ಎಂದು ಅವರು ಗಮನಸೆಳೆದರು.
ಹೆದ್ದಾರಿಗಳಲ್ಲಿನ ಬ್ಲ್ಯಾಕ್ ಸ್ಪಾಟ್‌ಗಳನ್ನು ಸರಿಪಡಿಸಲು ಹೆದ್ದಾರಿ ಸಚಿವಾಲಯವು 40,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಗಡ್ಕರಿ ಹೇಳಿದರು. ದೇಶದಲ್ಲಿ ಚಾಲಕರ ತೀವ್ರ ಕೊರತೆಯನ್ನು ನೀಗಿಸಲು ಚಾಲಕ ತರಬೇತಿ ಮತ್ತು ಫಿಟ್ನೆಸ್ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮ ಮತ್ತು ಇತರ ಪಾಲುದಾರರು ಸರ್ಕಾರದೊಂದಿಗೆ ಪಾಲುದಾರರಾಗಬೇಕು ಎಂದು ಅವರು ಒತ್ತಾಯಿಸಿದರು.
ಹೊಸ ತಂತ್ರಜ್ಞಾನ ಬಳಕೆ
ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಭಾರತದಲ್ಲಿ ಟ್ರಕ್ ಗಳಲ್ಲಿ ಚಾಲಕ ಆಯಾಸ ಮತ್ತು ನಿದ್ರೆ ಪತ್ತೆ ಸಾಧನಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಗಡ್ಕರಿ ಹೇಳಿದರು.
"ಇತರ ಅನೇಕ ದೇಶಗಳಲ್ಲಿ, ಚಾಲಕರು ಎಂಟು ಗಂಟೆಗಳ ಕಾಲ ಚಾಲನೆ ಮಾಡಿದ ನಂತರ ವಿಶ್ರಾಂತಿ ಪಡೆಯುತ್ತಾರೆ. ನಮ್ಮ ಚಾಲಕರು 15-18 ಗಂಟೆಗಳವರೆಗೆ ತಡೆರಹಿತವಾಗಿ ಚಾಲನೆ ಮಾಡುತ್ತಾರೆ ಎಂದು ಹೇಳಿದರು.
5 ನೇ ತರಗತಿಯಿಂದ 11 ನೇ ತರಗತಿಯವರೆಗಿನ ಮಕ್ಕಳನ್ನು ರಸ್ತೆ ಸುರಕ್ಷತಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮತ್ತು ಅವರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ರಸ್ತೆ ಸುರಕ್ಷತಾ ರಾಯಭಾರಿಗಳನ್ನಾಗಿ ಮಾಡುವ ಅಗತ್ಯದ ಬಗ್ಗೆ ಸಚಿವರು ಗಮನ ಹರಿಸಿದರು.
"ಆಟೋಮೊಬೈಲ್ ಕ್ಷೇತ್ರದಲ್ಲಿ ನಾವು ಈಗಾಗಲೇ ರಸ್ತೆ ಸುರಕ್ಷತೆಯ ದೃಷ್ಟಿಕೋನದಿಂದ ಸುಧಾರಣೆಗಳನ್ನು ತಂದಿದ್ದೇವೆ" ಎಂದು ಅವರು ಹೇಳಿದರು.